ಧಾರವಾಡ  : ರಾಜ್ಯ ಸರಕಾರ ಬರ ಪರಿಹಾರವಾಗಿ ಕನಿಷ್ಠ 50,000 ರೂ. ಪರಿಹಾರ ಘೋಷಿಸಬೇಕು ಎಂದು ಆಗ್ರಹಿಸಿ ರೈತರು ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದರು.

ಈ ವೇಳೆ ಮಾತನಾಡಿದ ಮುಖಂಡರು, ರಾಜ್ಯಾದ್ಯಂತ ಬರಗಾಲ ಆವರಿಸಿದ್ದರೂ ರೈತರಿಗೆ ಕೇವಲ 2,500 ರೂ. ಘೋಷಿಸಿರುವುದು ನಾಚಿಕೆಗೇಡು. ದೇಶಕ್ಕೆ ಅನ್ನ ನೀಡುವ ರೈತರ ಸಂಕಷ್ಟ ಸರಕಾರಕ್ಕೆ ಅರ್ಥವಾಗುತ್ತಿಲ್ಲವೇ? ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸರಕಾರದ ಅನಗತ್ಯ ಖರ್ಚುಗಳಿಗೆ, ದೇಶ-ವಿದೇಶ ಸುತ್ತಾಟ ಮತ್ತು ಎಸಿ ಖರ್ಚಿಗೆ ಹಣ ಬೇಕಾದರೆ ನಾವೇ ಸಾಲ ಮಾಡಿಯಾದರೂ ಕೊಡುತ್ತೇವೆ ಎಂದು ತಿರುಗೇಟು ನೀಡಿದ ಧರಣಿನಿರತ ರೈತರು, ಸರಕಾರಕ್ಕೆ ತಾವೇ ಹಣ ನೀಡಲು ಮುಂದಾಗಿದ್ದು, ರೈತರಿಂದ ತಲಾ 500 ರೂ. ಸಂಗ್ರಹಿಸಿ ಒಟ್ಟು 3,000 ರೂ. ವನ್ನು ಧಾರವಾಡ ಜಿಲ್ಲಾಧಿಕಾರಿ ಮೂಲಕ ರಾಜ್ಯ ಸರಕಾರಕ್ಕೆ ರವಾನಿಸುತ್ತೇವೆ ಎಂದು ತಿಳಿಸಿದರು.

ರೈತರು ತಮ್ಮ ಬೇಡಿಕೆಗಳಾಗಿ, ತಕ್ಷಣವೇ 2,500 ರೂ. ಪರಿಹಾರವನ್ನು ಕೈಬಿಟ್ಟು ಕನಿಷ್ಠ 50,000 ರೂ. ಪರಿಹಾರ ಘೋಷಿಸಬೇಕು. ಹಿಂಗಾರು ಬಿತ್ತನೆಗೆ ಉಚಿತವಾಗಿ ಬೀಜ ಮತ್ತು ಗೊಬ್ಬರ ನೀಡಬೇಕು ಮತ್ತು ಬರಗಾಲದಿಂದ ಕಂಗಾಲಾದ ರೈತರಿಗೆ ಸಮರ್ಪಕ ಪರಿಹಾರ ನೀಡಬೇಕು. ಒಂದು ವೇಳೆ ಬೇಡಿಕೆ ಈಡೇರಿಸದಿದ್ದರೆ ಮುಂದಿನ ದಿನಗಳಲ್ಲಿ ವಿಧಾನಸಭೆಗೆ ಮುತ್ತಿಗೆ ಹಾಕುವುದಾಗಿ ಎಚ್ಚರಿಕೆ ನೀಡಿದರು.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor