ಧಾರವಾಡದಲ್ಲಿ ಕಬ್ಬು ಬೆಳೆಗಾರರ ಆಕ್ರೋಶ: ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ
ಬೇಡಿಕೆ ಈಡೇರದಿದ್ದರೆ ಅಹೋರಾತ್ರಿ ಹೋರಾಟದ ಎಚ್ಚರಿಕೆ
ಧಾರವಾಡ : ಕಬ್ಬಿಗೆ ವೈಜ್ಞಾನಿಕ ಬೆಂಬಲ ಬೆಲೆ ನಿಗದಿಪಡಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಬ್ಬು ಬೆಳೆಗಾರರು ಧಾರವಾಡ ತಾಲೂಕಿನ ಯರಿಕೊಪ್ಪ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ-4 ತಡೆದು ಮಂಗಳವಾರ ಪ್ರತಿಭಟನೆ ನಡೆಸಿದರು.
ಬೆಂಗಳೂರು–ಪುಣೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೃಹತ್ ಮಾನವ ಸರಪಳಿ ನಿರ್ಮಿಸಿದ ರೈತರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯಿಂದಾಗಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿದ್ದು, ವಾಹನಗಳನ್ನು ಪರ್ಯಾಯ ಮಾರ್ಗದಲ್ಲಿ ಸಂಚರಿಸುವಂತೆ ಪೊಲೀಸರು ವ್ಯವಸ್ಥೆ ಮಾಡಿದರು.
ದೆಹಲಿಯಲ್ಲಿ ರೈತರ ಬೇಡಿಕೆಗಳ ಕುರಿತು ನಡೆದ ಮಹತ್ವದ ಸಭೆ ವಿಫಲವಾದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಹೋರಾಟ ತೀವ್ರಗೊಳಿಸಲು ರೈತ ಸಂಘಟನೆಗಳು ಕರೆ ನೀಡಿದ್ದವು. ಅದರಂತೆ ಯರಿಕೊಪ್ಪ ಕ್ರಾಸ್ ಬಳಿ ಜಮಾಯಿಸಿದ ನೂರಾರು ರೈತರು ಹಸಿರು ಶಾಲು ಬೀಸಿ, ಕಬ್ಬಿಗೆ ನ್ಯಾಯಯುತ ಬೆಲೆ ನಿಗದಿಪಡಿಸುವಂತೆ ಆಗ್ರಹಿಸಿದರು. ಬೇಡಿಕೆ ಈಡೇರುವವರೆಗೆ ಹೋರಾಟ ಹಿಂಪಡೆಯುವುದಿಲ್ಲ ಎಂದು ಎಚ್ಚರಿಸಿದರು.
ಜೋಶಿ ವಿರುದ್ಧ ರೈತರ ಆಕ್ರೋಶ :
ಪ್ರತಿಭಟನೆಯಲ್ಲಿ ಮಾತನಾಡಿದ ರೈತ ಮುಖಂಡ ಶಂಕರ್ ಬೊಬಾಟೆ, ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ರೈತರನ್ನು ಅವಮಾನಿಸಿದ್ದಾರೆ. ಸುಮಾರು ಐದು ಲಕ್ಷ ರೈತರ ಭಾವನೆಗಳಿಗೆ ಬೆಲೆ ನೀಡದೆ, ದೆಹಲಿಗೆ ಕರೆಸಿಕೊಂಡು ರೈತರ ನಡುವೆಯೇ ವೈಮನಸ್ಸು ಮೂಡಿಸುವ ಪ್ರಯತ್ನ ಮಾಡಲಾಗಿದೆ ಎಂದು ದೂರಿದರು.
ಅನ್ನ ಬೆಳೆಯುವ ರೈತರು ತಮ್ಮ ನ್ಯಾಯಯುತ ಬೇಡಿಕೆಗಳಿಗಾಗಿ ಬೀದಿಗಿಳಿಯುವ ಪರಿಸ್ಥಿತಿ ನಿರ್ಮಾಣವಾಗಿರುವುದು ದುರದೃಷ್ಟಕರ. ರೈತರ ಸಮಸ್ಯೆಗಳಿಗೆ ಸ್ಪಂದಿಸಿ ಕಬ್ಬಿಗೆ ವೈಜ್ಞಾನಿಕ ಬೆಂಬಲ ಬೆಲೆ ನಿಗದಿಪಡಿಸಬೇಕು ಎಂದು ಒತ್ತಾಯಿಸಿದರು. ಈ ವೇಳೆ ಪ್ರತಿಭಟನಾಕಾರರು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಿರುದ್ಧ ಘೋಷಣೆಗಳನ್ನು ಕೂಗಿದರು.
300ಕ್ಕೂ ಹೆಚ್ಚು ಪೊಲೀಸರ ನಿಯೋಜನೆ :
ಪ್ರತಿಭಟನೆಯ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಡಿಸಿಪಿ ಶ್ರುತಿ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಸ್ಥಳದಲ್ಲಿ 300ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿತ್ತು. ಪ್ರತಿಭಟನೆ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಿ, ಪೊಲೀಸ್ ಸಿಬ್ಬಂದಿಗೆ ಬಾಡಿ ಪ್ರೊಟೆಕ್ಟರ್‌ಗಳನ್ನು ಒದಗಿಸಲಾಗಿತ್ತು.
ವಾಹನ ಸಂಚಾರಕ್ಕೆ ಪರ್ಯಾಯ ಮಾರ್ಗ :
ರಾಷ್ಟ್ರೀಯ ಹೆದ್ದಾರಿ ತಡೆ ಹಿನ್ನೆಲೆಯಲ್ಲಿ ವಾಹನ ಸವಾರರು ಪರದಾಡುವಂತಾಯಿತು. ಪೊಲೀಸರು ವಾಹನಗಳನ್ನು ಪರ್ಯಾಯ ಮಾರ್ಗಗಳಲ್ಲಿ ಸಂಚರಿಸುವಂತೆ ಸೂಚಿಸಿದರು.
ನರೇಂದ್ರ ಬೈಪಾಸ್‌ನಿಂದ ಹುಬ್ಬಳ್ಳಿಗೆ ಬರುವ ವಾಹನಗಳು ಕೃಷಿ ವಿಶ್ವವಿದ್ಯಾಲಯ, ಹೊಸ ಬಸ್ ನಿಲ್ದಾಣ, ಹಳೇ ಎಸ್‌ಪಿ ಕಚೇರಿ ಸರ್ಕಲ್ ಹಾಗೂ ಜುಬ್ಬಿ ಸರ್ಕಲ್ ಮಾರ್ಗವಾಗಿ ಸಂಚರಿಸಿದವು. ಇನ್ನು ಬೆಳಗಾವಿಯಿಂದ ಸವದತ್ತಿ, ನವಲಗುಂದ ಹಾಗೂ ವಿಜಯಪುರಕ್ಕೆ ತೆರಳುವ ವಾಹನಗಳು ಹಳೇ ಎಸ್‌ಪಿ ಕಚೇರಿ ಸರ್ಕಲ್ ಮತ್ತು ಮರಾಠಾ ಕಾಲನಿ ಮಾರ್ಗದಲ್ಲಿ, ಧಾರವಾಡದಿಂದ ಕಾರವಾರ ಹಾಗೂ ಬೆಂಗಳೂರಿಗೆ ತೆರಳುವ ಲಘು ವಾಹನಗಳು ಹೊಸೂರು, ವಾಣಿ ವಿಲಾಸ, ಎಂ.ಟಿ. ಮಿಲ್ ಹಾಗೂ ಇಂಡಿ ಪಂಪ್ ಸರ್ಕಲ್ ಮಾರ್ಗವಾಗಿ ಸಂಚರಿಸಿದವು. ಇನ್ನು ಭಾರಿ ವಾಹನಗಳು ಗೋಕುಲ ರಸ್ತೆ ಹಾಗೂ ತಾರಿಹಾಳ ಅಂಡರ್ ಬ್ರಿಡ್ಜ್ ಮಾರ್ಗವಾಗಿ ತೆರಳಿದವು. ಒಟ್ಟಾರೆಯಾಗಿ ಕಬ್ಬು ಬೆಳೆಗಾರರ ಎರಡನೇ ಹಂತದ ಹೋರಾಟ ತೀವ್ರ ಸ್ವರೂಪ ಪಡೆದಿದೆ. ಈಗ ಕಬ್ಬು ಬೆಳೆಗಾರರ ಬೇಡಿಕೆಗಳಿಗೆ ಸರ್ಕಾರ ಯಾವ ರೀತಿಯಲ್ಲಿ ಸ್ಪಂದಿಸಲಿದೆ ಎಂಬುದರ ಮೇಲೆ ಮುಂದಿನ ಹೋರಾಟದ ರೂಪುರೇಷೆ ನಿರ್ಧಾರವಾಗಲಿದೆ.
ಪ್ರತಿಭಟನೆಯಲ್ಲಿ ರೈತ ಮುಖಂಡ, ಪರಶುರಾಮ್ ಎತ್ತಿನಗುಡ್ಡ, ಸುಭಾಸ್ ಮಾದನ್ನವರ್, ಉಳವಪ್ಪ ಬಳಿಗೇರ್, ಚನ್ನಪ್ಪ ಜಗದಪ್ಪನವರ್, ಬಸನಗೌಡ ಸಿದ್ದನಗೌಡ, ಭರತೇಶ್ ಪಾಟೀಲ್, ಶಿವು ತಡಸ, ಸಂಜೀವ್ ಕುಮಾರ್, ಮಂಜಯ್ಯ ಅಣ್ಣಿಗೇರಿ ಸೇರಿದಂತೆ ಕಾರವಾರ ಮತ್ತು ಧಾರವಾಡ ಜಿಲ್ಲೆಯ ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.