ಹುಬ್ಬಳ್ಳಿ : ಕುಟುಂಬದವರೊಂದಿಗೆ ಉಂಟಾದ ಮನಸ್ತಾಪದಿಂದ ಮನೆ ಬಿಟ್ಟು ಹೊರಟಿದ್ದ ಬಾಲಕಿಯೊಬ್ಬಳನ್ನು ಹುಬ್ಬಳ್ಳಿ-ಧಾರವಾಡ ಪೊಲೀಸರು ಹಾಗೂ ಕೆಎಸ್‌ಆರ್‌ಟಿಸಿ ಸಿಬ್ಬಂದಿ ಜಂಟಿ ಕಾರ್ಯಾಚರಣೆ ನಡೆಸಿ ಸುರಕ್ಷಿತವಾಗಿ ಪತ್ತೆಹಚ್ಚಿದ್ದಾರೆ.

ಪೊಲೀಸರ ಸಮಯಪ್ರಜ್ಞೆ, ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆ ಹಾಗೂ ಸಾರಿಗೆ ಸಿಬ್ಬಂದಿಯ ಸಹಕಾರದಿಂದ ಬಾಲಕಿ ಮಂತ್ರಾಲಯಕ್ಕೆ ತೆರಳುವ ಮುನ್ನವೇ ಆಕೆಯನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. 

ಕುಟುಂಬದವರೊಂದಿಗೆ ಮನಸ್ತಾಪ ಉಂಟಾದ ಹಿನ್ನೆಲೆಯಲ್ಲಿ ಬಾಲಕಿ ಮನೆ ಬಿಟ್ಟು ಸಂಬಂಧಿಕರ ಮನೆಗೆ ತೆರಳಿದ್ದಳು. ಬಳಿಕ ಆಕೆಯನ್ನು ಮನೆಗೆ ಕಳುಹಿಸುವ ಉದ್ದೇಶದಿಂದ ಸಂಬಂಧಿಕರು ಹುಬ್ಬಳ್ಳಿಯ ಗಬ್ಬೂರಿನಿಂದ ಬಸ್ ಹತ್ತಿಸಿದ್ದರು. ಆದರೆ ಬಾಲಕಿ ನಿಗದಿತ ಸಮಯಕ್ಕೆ ಮನೆಗೆ ತಲುಪದ ಹಿನ್ನೆಲೆಯಲ್ಲಿ ಆತಂಕಗೊಂಡ ಪೋಷಕರು ಹುಡುಕಾಟ ಆರಂಭಿಸಿದ್ದರು. ಈ ಸಂಬಂಧ ಬಾಲಕಿ ಕಾಣೆಯಾಗಿರುವ ಕುರಿತು ಆಕೆಯ ಸ್ವಂತ ಜಿಲ್ಲೆಯ ಪೊಲೀಸ್ ಠಾಣೆಯಲ್ಲಿ ಪ್ರಕರಣವೂ ದಾಖಲಾಗಿತ್ತು.

ಬಾಲಕಿ ಹುಬ್ಬಳ್ಳಿಯ ಕಸಬಾಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಿಂದ ಬಸ್ ಹತ್ತಿ ತೆರಳಿರುವ ಮಾಹಿತಿ ತಿಳಿಯುತ್ತಿದ್ದಂತೆಯೇ ಕಸಬಾಪೇಟೆ ಠಾಣೆಯ ಇನ್ಸ್‌ಪೆಕ್ಟರ್ ಲಕ್ಷ್ಮಣ ನಾಯ್ಕ ಅವರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತಕ್ಷಣ ಕಾರ್ಯಪ್ರವೃತ್ತರಾದರು. ಬಾಲಕಿಯ ಸುರಕ್ಷಿತ ಪತ್ತೆಗಾಗಿ ಸಿಬ್ಬಂದಿಗೆ ಅಗತ್ಯ ಸೂಚನೆ ನೀಡಿ ಹುಡುಕಾಟಕ್ಕೆ ಮಾರ್ಗದರ್ಶನ ಮಾಡಿದರು.

ಬಾಲಕಿಯ ಬಳಿ ಮೊಬೈಲ್ ಫೋನ್ ಇಲ್ಲದಿರುವುದು ಪೊಲೀಸರ ಕಾರ್ಯಾಚರಣೆಗೆ ಸವಾಲಾಗಿತ್ತು. ಆದರೂ ಇನ್ಸ್‌ಪೆಕ್ಟರ್ ಅವರ ಮಾರ್ಗದರ್ಶನದಲ್ಲಿ ಪೊಲೀಸ್ ಸಿಬ್ಬಂದಿಗಳಾದ ಹಜರತ್ ರಾಮಾಪುರಿ ಹಾಗೂ ರಾಮು ಹರಕಿ ಅವರು ಹಾವೇರಿಗೆ ತೆರಳಿ, ಬಸ್ ನಿಲ್ದಾಣ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಸತತವಾಗಿ ಪರಿಶೀಲಿಸಿದರು. ಈ ಸಂದರ್ಭದಲ್ಲಿ ಬಾಲಕಿ ಹಾವೇರಿಯಿಂದ ಯಲ್ಲಮ್ಮನಗುಡ್ಡಕ್ಕೆ ಬಸ್‌ನಲ್ಲಿ ತೆರಳಿರುವುದು ಗೊತ್ತಾಯಿತು.

ತಕ್ಷಣ ಕಾರ್ಯಾಚರಣೆಯನ್ನು  ಚುರುಕುಗೊಳಿಸಿದ ಇನ್ಸ್‌ಪೆಕ್ಟರ್ ಲಕ್ಷ್ಮಣ ನಾಯ್ಕ ಅವರು ಬಾಲಕಿಯ ಭಾವಚಿತ್ರ ಹಾಗೂ ಅಗತ್ಯ ಮಾಹಿತಿಯನ್ನು ಕೆಎಸ್‌ಆರ್‌ಟಿಸಿ ಚಾಲಕರು ಮತ್ತು ನಿರ್ವಾಹಕರ ವಿವಿಧ ವಾಟ್ಸ್‌ಆ್ಯಪ್ ಗುಂಪುಗಳಿಗೆ ಹಂಚಿಕೊಂಡರು. ಯಾವುದೇ ಬಸ್‌ನಲ್ಲಿ ಬಾಲಕಿ ಕಂಡುಬಂದಲ್ಲಿ ಕೂಡಲೇ ಪೊಲೀಸರಿಗೆ ಮಾಹಿತಿ ನೀಡುವಂತೆ ಮನವಿ ಮಾಡಿದರು.

ಇತ್ತ ಬಾಲಕಿ ಯಲ್ಲಮ್ಮನಗುಡ್ಡದಿಂದ ಮತ್ತೆ ಬಸ್‌ನಲ್ಲಿ ಹುಬ್ಬಳ್ಳಿಯ ಹೊಸ ಬಸ್ ನಿಲ್ದಾಣಕ್ಕೆ ಆಗಮಿಸಿದ್ದಳು. ಅಲ್ಲಿಂದ ಮಂತ್ರಾಲಯಕ್ಕೆ ತೆರಳುವ ಉದ್ದೇಶದಿಂದ ಮತ್ತೊಂದು ಬಸ್ ಹತ್ತಿದ್ದಳು. ಇದೇ ಸಂದರ್ಭದಲ್ಲಿ ಹಾವೇರಿ ಕೆಎಸ್‌ಆರ್‌ಟಿಸಿ ಡಿಪೋದ ಚಾಲಕ ಕಂ ನಿರ್ವಾಹಕ ಶರಣಬಸಪ್ಪ ಹನುಮಪ್ಪ ಚಲವಾದಿ  ಅವರು ಪೊಲೀಸರ ವಾಟ್ಸ್‌ಆ್ಯಪ್ ಗುಂಪಿನಲ್ಲಿ ಹಂಚಿಕೊಂಡಿದ್ದ ಭಾವಚಿತ್ರ ಮತ್ತು ಮಾಹಿತಿಯನ್ನು ಗಮನಿಸಿ ಬಸ್‌ನಲ್ಲಿದ್ದ ಬಾಲಕಿಯನ್ನು ಗುರುತಿಸಿದರು.

ಕಸಬಾಪೇಟೆ ಪೊಲೀಸ್ ಇನ್ಸ್‌ಪೆಕ್ಟರ್ ಲಕ್ಷ್ಮಣ ನಾಯ್ಕ ಅವರಿಗೆ ದೂರವಾಣಿ ಮೂಲಕ ಮಾಹಿತಿ ನೀಡಿದರು. ಮಾಹಿತಿ ಲಭ್ಯವಾಗುತ್ತಿದ್ದಂತೆಯೇ ಇನ್ಸ್‌ಪೆಕ್ಟರ್ ಅವರು ಗೋಕುಲ್ ರೋಡ್ ಪೊಲೀಸ್ ಠಾಣೆಯ ವಿಶೇಷ ಶಾಖೆಯ ಸಿಬ್ಬಂದಿ  ಅವರಿಗೆ ವಿಷಯ ತಿಳಿಸಿದರು. ಅವರು ತಕ್ಷಣ ಹೊಸ ಬಸ್ ನಿಲ್ದಾಣಕ್ಕೆ ತೆರಳಿದರು. ಬಳಿಕ ಕಸಬಾಪೇಟೆ ಇನ್ಸ್‌ಪೆಕ್ಟರ್ ಕೂಡ ಸ್ಥಳಕ್ಕೆ ಧಾವಿಸಿ, ಮಹಿಳಾ ಪೊಲೀಸ್ ಸಿಬ್ಬಂದಿಯ ನೆರವಿನಿಂದ ಬಾಲಕಿಯನ್ನು ಸುರಕ್ಷಿತವಾಗಿ ರಕ್ಷಿಸಿದರು.

ನಂತರ ಬಾಲಕಿಯನ್ನು ಬೆಂಡಿಗೇರಿಯ ಬಾಲಮಂದಿರಕ್ಕೆ ಕರೆದೊಯ್ದು ಸುರಕ್ಷಿತ ಆಶ್ರಯ ಕಲ್ಪಿಸಲಾಯಿತು. ಬಾಲಕಿ ಸುರಕ್ಷಿತವಾಗಿ ಪತ್ತೆಯಾಗಿರುವ ಕುರಿತು ಪೋಷಕರಿಗೂ ಮಾಹಿತಿ ನೀಡಲಾಗಿದ್ದು, ಮಕ್ಕಳ ಕಲ್ಯಾಣ ಸಮಿತಿಯ ಮೂಲಕ ಮುಂದಿನ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

ಪೊಲೀಸ್ ಆಯುಕ್ತರ ಮೆಚ್ಚುಗೆ

ಈ ಕಾರ್ಯಾಚರಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಕಸಬಾಪೇಟೆ ಪೊಲೀಸ್ ಇನ್ಸ್‌ಪೆಕ್ಟರ್ ಲಕ್ಷ್ಮಣ ನಾಯ್ಕ, ಪೊಲೀಸ್ ಸಿಬ್ಬಂದಿ ಹಜರತ್ ರಾಮಾಪುರಿ, ರಾಮು ಹರಕಿ, ಗೋಕುಲ್ ರೋಡ್ ಪೊಲೀಸ್ ಠಾಣೆಯ ವಿಶೇಷ ಶಾಖೆಯ ಸಿಬ್ಬಂದಿ ಲಕ್ಷ್ಮಣ ನಾಯ್ಕ ಹಾಗೂ ಬಾಲಕಿಯನ್ನು ಗುರುತಿಸಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ ಕೆಎಸ್‌ಆರ್‌ಟಿಸಿ ಚಾಲಕ ಕಂ ನಿರ್ವಾಹಕ ಶರಣಬಸಪ್ಪ ಹನುಮಪ್ಪ ಚಲವಾದಿ ಅವರ ಸಮಯಪ್ರಜ್ಞೆ, ಕರ್ತವ್ಯನಿಷ್ಠೆ ಮತ್ತು ಮಾನವೀಯ ಸೇವೆಯನ್ನು ಹುಬ್ಬಳ್ಳಿ-ಧಾರವಾಡ ನಗರ ಪೊಲೀಸ್ ಆಯುಕ್ತ ಭೂಷಣ್ ಬೊರಸೆ ಅವರು ಶ್ಲಾಘಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor