ತೆರಿಗೆ ಪಾಲಿನಲ್ಲಿ ರಾಜ್ಯಕ್ಕೆ ಅನ್ಯಾಯ : ಸಚಿವ ಮಧು ಬಂಗಾರಪ್ಪ
ಧಾರವಾಡ : ದೇಶದಲ್ಲಿ ಅತಿ ಹೆಚ್ಚು ತೆರಿಗೆ ಪಾವತಿಸುವ ರಾಜ್ಯಗಳಲ್ಲಿ ಕರ್ನಾಟಕವೂ ಒಂದಾಗಿದೆ. ರೈತರು ಕಷ್ಟಪಟ್ಟು ದುಡಿದು ದೇಶಕ್ಕೆ ಅನ್ನ ನೀಡುವುದರ ಜತೆಗೆ ತೆರಿಗೆಯನ್ನೂ ಪಾವತಿಸುತ್ತಾರೆ. ಆದರೆ, ಹೆಚ್ಚಿನ ತೆರಿಗೆ ನೀಡಿದರೂ ರಾಜ್ಯಕ್ಕೆ ಕಡಿಮೆ ಪಾಲು ದೊರೆಯುತ್ತಿದೆ. ಕರ್ನಾಟಕದ ತೆರಿಗೆ ಹಣವನ್ನು ಬೇರೆ ರಾಜ್ಯಗಳಿಗೆ ನೀಡಲಾಗುತ್ತಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಆರೋಪಿಸಿದ್ದಾರೆ.
ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಜನರ ಬೆವರು ಮತ್ತು ಶ್ರಮಕ್ಕೆ ನ್ಯಾಯ ಒದಗಿಸುವ ಕುರಿತು ಬಿಜೆಪಿ ನಾಯಕರು ಮಾತನಾಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಬರಗಾಲದ ಪರಿಸ್ಥಿತಿ ಇದ್ದು, ಕೇಂದ್ರ ಸರಕಾರ ಬರ ಪರಿಹಾರ ನೀಡಬೇಕು. ನಮ್ಮ ತೆರಿಗೆ ಹಣವನ್ನು ಬೇರೆ ರಾಜ್ಯಗಳಿಗೆ ನೀಡಿ ಕರ್ನಾಟಕಕ್ಕೆ ನ್ಯಾಯಯುತ ಪಾಲು ನೀಡದಿರುವ ಅನ್ಯಾಯವನ್ನು ವಿರೋಧಿಸಬೇಕಿದೆ. ಜಿಎಸ್ಟಿ ಸಂಗ್ರಹದಲ್ಲಿಯೂ ಕರ್ನಾಟಕದ ಕೊಡುಗೆ ಹೆಚ್ಚಿದೆ. ಶಿಕ್ಷಣ ಇಲಾಖೆ ಸೇರಿದಂತೆ ಎಲ್ಲ ಇಲಾಖೆಗಳಲ್ಲೂ ತೆರಿಗೆ ಕಡಿತವಾಗುತ್ತಿದೆ ಎಂದರು.
ಮೆಟ್ರೋ ಉದ್ಘಾಟನೆ ಸಹಭಾಗಿತ್ವದ ಸಂಕೇತ : ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಒಟ್ಟಾಗಿ ಮೆಟ್ರೋ ಸೇವೆಗೆ ಹಸಿರು ನಿಶಾನೆ ತೋರಿರುವ ಕುರಿತು ಪ್ರತಿಕ್ರಿಯಿಸಿದ ಮಧು ಬಂಗಾರಪ್ಪ, ಪ್ರಧಾನಿ ದೇಶದ ಪ್ರತಿನಿಧಿಯಾಗಿದ್ದರೆ, ಮುಖ್ಯಮಂತ್ರಿ ರಾಜ್ಯದ ಪ್ರತಿನಿಧಿಯಾಗಿದ್ದಾರೆ. ಇಬ್ಬರೂ ಸೇರಿ ಮೆಟ್ರೋಗೆ ಚಾಲನೆ ನೀಡಿರುವುದು ಕೇಂದ್ರ ಮತ್ತು ರಾಜ್ಯ ಸರಕಾರಗಳ ಸಹಭಾಗಿತ್ವದ ಸಂಕೇತವಾಗಿದೆ ಎಂದರು.
ಕಳಪೆ ಶೂ ವಿತರಣೆ ಆರೋಪ ತಳ್ಳಿಹಾಕಿದ ಸಚಿವರು : ವಿದ್ಯಾರ್ಥಿಗಳಿಗೆ ಕಳಪೆ ಗುಣಮಟ್ಟದ ಶೂ ವಿತರಿಸಲಾಗಿದೆ ಎಂಬ ಆರೋಪವನ್ನು ತಳ್ಳಿ ಹಾಕಿದ ಮಧು ಬಂಗಾರಪ್ಪ, ಹಳೆಯ ಶೂಗಳನ್ನು ತೋರಿಸಿ ಸುದ್ದಿ ಮಾಡಲಾಗಿದೆ. ಸರಕಾರ ವಿತರಿಸಿರುವ ಶೂಗಳಲ್ಲಿ ಯಾವುದೇ ಕಳಪೆ ಗುಣಮಟ್ಟದ ಶೂ ಗಳಿಲ್ಲ. ಎಲ್ಲಿಯಾದರೂ ಕಳಪೆ ಶೂಗಳು ಬಂದಿದ್ದರೆ ಅದರ ಮಾಹಿತಿ ನೀಡಲಿ ಎಂದು ಸವಾಲು ಹಾಕಿದರು.
ಶೂಗಳ ಗುಣಮಟ್ಟದಲ್ಲಿ ಯಾವುದೇ ಸಮಸ್ಯೆಯಿಲ್ಲ. ಬದಲಾಗಿ ಅಳತೆಯಲ್ಲಿ ವ್ಯತ್ಯಾಸವಾಗಿದೆ. ಈ ಹಿಂದೆ ಈ ಭಾಗದಲ್ಲಿ ಮಧ್ಯವರ್ತಿಗಳ ಮೂಲಕ ಶೂಗಳನ್ನು ಪೂರೈಸಲಾಗುತ್ತಿತ್ತು. ಈಗ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ(ಎಸ್ಡಿಎಂಸಿ)ಗಳ ಮೂಲಕ ವಿತರಣೆ ವ್ಯವಸ್ಥೆ ನಡೆಯುತ್ತಿದೆ. ಯಾವುದೇ ಕಳಪೆ ಶೂಗಳನ್ನು ವಿತರಿಸಿಲ್ಲ ಎಂದು ಮಧು ಬಂಗಾರಪ್ಪ ಸ್ಪಷ್ಟಪಡಿಸಿದರು.
ದೇಶದಲ್ಲಿ ಫೋನ್ ಟ್ಯಾಪಿಂಗ್ ಇಂದಿನ ಬೆಳವಣಿಗೆಯಲ್ಲ. ಬಹಳ ದಿನಗಳಿಂದಲೂ ನಡೆಯುತ್ತಿದೆ. ನಿರ್ದಿಷ್ಟ ಪಕ್ಷಕ್ಕೆ ಯಾರು ಸೇರುತ್ತಾರೋ ಆಗ ಅವರ ವಿರುದ್ಧದ ಫೋನ್ ಟ್ಯಾಪಿಂಗ್, ಈ.ಡಿ. ಮತ್ತು ಐಟಿ ದಾಳಿಗಳು ನಿಲ್ಲುತ್ತವೆ, ಸನ್ಮಾನ ಮಾಡಿ ಪಕ್ಷಕ್ಕೆ ಸೇರಿಸಿಕೊಳ್ಳಲಾಗುತ್ತದೆ ಎಂದು ಬಿಜೆಪಿ ವಿರುದ್ಧ ಸಚಿವರು ಆಕ್ರೋಶ ವ್ಯಕ್ತಪಡಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರೇ ಮೊದಲು ಬಿಜೆಪಿ ನಾಯಕರನ್ನು ಕೆಟ್ಟ ರಾಜಕಾರಣಿಗಳು ಎಂದು ಟೀಕಿಸುತ್ತಾರೆ. ಬಳಿಕ ಅವರನ್ನು ‘ವಾಷಿಂಗ್ ಮಷಿನ್’ಗೆ ಹಾಕಿ ಸ್ವಚ್ಛಗೊಳಿಸಿದಂತೆ ಮಾಡಿ ಅಧಿಕಾರ ನೀಡುತ್ತಾರೆ ಎಂದು ವ್ಯಂಗ್ಯವಾಡಿದರು.