Hubballi | ಬಸವಣ್ಣನವರ ಅವಹೇಳನ: ರವಿ ಹಂಜ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜನಪರ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನೆ
ಹುಬ್ಬಳ್ಳಿ: ಬಸವಣ್ಣನವರ ಕುರಿತು ಅವಹೇಳನಕಾರಿ, ಆಧಾರರಹಿತ ಹೇಳಿಕೆ ನೀಡುವ ಮೂಲಕ ಸಮಾಜದಲ್ಲಿ ಶಾಂತಿ, ಸೌಹಾರ್ದತೆಗೆ ಧಕ್ಕೆ ಉಂಟುಮಾಡುತ್ತಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಜನಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಗುರುವಾರ ನಗರದಲ್ಲಿ ಪ್ರತಿಭಟನೆ ನಡೆಯಿತು.
ನಗರದ ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆಯಿಂದ ತಹಸೀಲ್ದಾರ್ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ವಿವಿಧ ಸಂಘಟನೆಗಳ ಮುಖಂಡರು, ರವಿ ಹಂಜ್, ಕನ್ಹೇರಿ ಮಠದ ಶ್ರೀಗಳ ಹಾಗೂ ವಿಶ್ವೇಶ್ವರ ಭಟ್ ಅವರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಮನಗುಂಡಿಯ ಬಸವಾನಂದ ಶ್ರೀ, ಬಸವಣ್ಣನವರ ಕುರಿತು ಉದ್ದೇಶಪೂರ್ವಕವಾಗಿ ಸುಳ್ಳುಗಳನ್ನು ಹರಡುವ ಪ್ರಯತ್ನ ನಡೆದಿದೆ. ರವಿ ಹಂಜ್ ಬರೆದಿರುವ ಪುಸ್ತಕದಲ್ಲಿ ಸತ್ಯಕ್ಕೆ ದೂರವಾದ ವಿಚಾರಗಳನ್ನು ಉಲ್ಲೇಖಿಸಲಾಗಿದೆ. ಪುಸ್ತಕ ಓದುವ ಅಗತ್ಯವಿಲ್ಲ, ಅದರಲ್ಲಿರುವ ಉದ್ದೇಶವೇ ಬಸವಣ್ಣನವರ ವ್ಯಕ್ತಿತ್ವವನ್ನು ಕುಗ್ಗಿಸಿ, ಚೆನ್ನಬಸವಣ್ಣನವರನ್ನು ಎತ್ತಿಹಿಡಿಯುವುದಾಗಿದೆ ಎಂದು ಆರೋಪಿಸಿದರು.
ರವಿ ಹಂಜ್ ಕಾರ್ಯನಿರ್ವಹಿಸುತ್ತಿದ್ದ ಕಂಪನಿಗೆ ಬಸವಭಕ್ತರು ಇ-ಮೇಲ್ ಮೂಲಕ ಅವರ ಚಟುವಟಿಕೆಗಳ ಕುರಿತು ಮಾಹಿತಿ ನೀಡಿದ್ದರು. ಇದರ ಪರಿಣಾಮವಾಗಿ ಕಂಪನಿಯು ಅವರನ್ನು ಕೆಲಸದಿಂದ ವಜಾಗೊಳಿಸಿರುವುದಾಗಿ ತಿಳಿದು ಬಂದಿದೆ. ನ್ಯಾಯಾಲಯ ಅಥವಾ ವ್ಯಕ್ತಿಗಳು ನೀಡಲಾಗದ ಶಿಕ್ಷೆಯನ್ನು ಕಂಪನಿಯೇ ನೀಡಿದೆ. ಬಸವಣ್ಣನವರ ಕುರಿತು ಅವಹೇಳನ ಮಾಡುವವರಿಗೆ ಕಾನೂನಿನ ಪ್ರಕಾರ ಶಿಕ್ಷೆಯಾಗಬೇಕು. ಈ ವಿಚಾರದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ ಹಾಗೂ ವಿಶ್ವ ಹಿಂದೂ ಪರಿಷತ್ ತಮ್ಮ ನಿಲುವು ಸ್ಪಷ್ಟಪಡಿಸಿ, ಪುಸ್ತಕವನ್ನು ಖಂಡಿಸಬೇಕು. ಮೌನ ವಹಿಸುವುದರಿಂದ ಇಂತಹ ಕೃತ್ಯಗಳಿಗೆ ಬೆಂಬಲ ನೀಡಿದಂತಾಗುತ್ತದೆ ಎಂದು ಹೇಳಿದರು.
ಬಸವಣ್ಣನವರು ಕಾಯಕ, ದಾಸೋಹ, ಸಮಾನತೆ ಮತ್ತು ಮಾನವೀಯತೆಯ ತತ್ವಗಳನ್ನು ಜಗತ್ತಿಗೆ ಸಾರಿದವರು. 770 ಶರಣರ 20 ಸಾವಿರಕ್ಕೂ ಅಧಿಕ ವಚನಗಳಲ್ಲಿ ಬಸವಣ್ಣನವರು ಖಜಾನೆ ಲೂಟಿ ಮಾಡಿದ ಉಲ್ಲೇಖವಿಲ್ಲ. ಇಂತಹ ದಾರ್ಶನಿಕರ ಕುರಿತು ಆಧಾರರಹಿತ ಆರೋಪ ಮಾಡುವುದು ಕನ್ನಡ ನಾಡಿನ ಸಾಂಸ್ಕೃತಿಕ ಪರಂಪರೆಗೆ ಮಾಡುವ ಅಪಮಾನವಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ರವಿ ಹಂಜ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯಡಿ ಪ್ರಕರಣ ದಾಖಲಿಸಿ ತನಿಖೆ ನಡೆಸಬೇಕು. ವಿವಾದಿತ 'ಬಸವ ಮಂಟಪ' ಪುಸ್ತಕವನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು. ಪ್ರಕರಣದ ಹಿಂದಿರುವ ಶಕ್ತಿಗಳನ್ನು ಪತ್ತೆಹಚ್ಚಲು ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿಗಳ ಮೇಲ್ವಿಚಾರಣೆಯಲ್ಲಿ ವಿಶೇಷ ತನಿಖಾ ತಂಡ ರಚಿಸಬೇಕು ಎಂದು ಒತ್ತಾಯಿಸಿದರು.
ಈ ವೇಳೆ ರುದ್ರಾಕ್ಷಿ ಮಠದ ಬಸವಲಿಂಗ ಶ್ರೀಗಳು, ಮುಳ್ಳೊಳ್ಳಿಯ ಶಿವಯೋಗಿ ಶ್ರೀಗಳು, ವಿಧಾನ ಪರಿಷತ್ ಮಾಜಿ ಸದಸ್ಯ ಮೋಹನ ಲಿಂಬಿಕಾಯಿ, ಬಸವರಾಜ ಸೂಳಿಬಾವಿ, ಗುರುನಾಥ ಉಳ್ಳಿಕಾಶಿ, ಸದಾನಂದ ಡಂಗನವರ, ಬಾಬಾಜಾನ ಮುಧೋಳ, ಮಹೇಶ ಪತ್ತಾರ, ಶಿವಕುಮಾರ ಮೆಣಸಿನಕಾಯಿ, ಭಾಷಾಸಾಬ ತಳೆವಾಡ, ಲಿಂಗರಾಜ ಅಂಗಡಿ, ಅನ್ವರ್ ಮುಧೋಳ, ಸಮೀಮ್ ಮುಲ್ಲಾ, ಮೌಲಾಲಿ ಮುಲ್ಲಾ, ಕುಮಾರ ಪಾಟೀಲ, ಗಂಗಾಧರ ತೆರೂರ, ಮಂಜುನಾಥ ಉಳ್ಳಿಕಾಶಿ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.