ಹುಬ್ಬಳ್ಳಿ : ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಪಂಚ ಗ್ಯಾರಂಟಿಗಳ ಹೆಸರಿನಲ್ಲಿ ಜನರಿಗೆ ಬೆಲೆ ಏರಿಕೆಯ ಗ್ಯಾರಂಟಿ ನೀಡುತ್ತಿದೆ ಎಂದು ಆರೋಪಿಸಿ, ಬಿಜೆಪಿ ಕಾರ್ಯಕರ್ತರು ಹುಬ್ಬಳ್ಳಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು. ಹಾಲಿನ ದರ ಏರಿಕೆ ನಿರ್ಧಾರವನ್ನು ಖಂಡಿಸಿ ಹುಬ್ಬಳ್ಳಿ ಸೆಂಟ್ರಲ್ ಬಿಜೆಪಿ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ರಾಜ್ಯ ಸರಕಾರದ ವಿರುದ್ಧ ಕಾರ್ಯಕರ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ನಗರದ ಚನ್ನಮ್ಮ ವೃತ್ತದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ಬಸ್ ನಿಲ್ದಾಣದವರೆಗೆ ಸಾಗಿತು. ಈ ವೇಳೆ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ರಾಜ್ಯ ಸರಕಾರದ ಬೆಲೆ ಏರಿಕೆ ನೀತಿಯ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ಹೊರಹಾಕಿದರು.

ಪಂಚ ಗ್ಯಾರಂಟಿ ಯೋಜನೆಗಳನ್ನು ಮುಂದಿಟ್ಟುಕೊಂಡು ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರಕಾರ, ಇದೀಗ ಜನಸಾಮಾನ್ಯರ ಮೇಲೆ ಒಂದರ ಹಿಂದೆ ಒಂದರಂತೆ ಬೆಲೆ ಏರಿಕೆಯ ಹೊರೆ ಹಾಕುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿರುವ ಜನರಿಗೆ ಹಾಲಿನ ದರ ಹೆಚ್ಚಳ ಮತ್ತಷ್ಟು ಆರ್ಥಿಕ ಹೊರೆಯಾಗಲಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಹಾಲು ಎನ್ನುವುದು ಪ್ರತಿಯೊಂದು ಕುಟುಂಬದ ನಿತ್ಯ ಬಳಕೆಯ ಅಗತ್ಯ ವಸ್ತುವಾಗಿದೆ. ಅದರಲ್ಲೂ ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳು ಪ್ರತಿದಿನ ಹಾಲು ಖರೀದಿಸಬೇಕಾದ ಅನಿವಾರ್ಯತೆ ಹೊಂದಿವೆ. ಇಂತಹ ಸಂದರ್ಭದಲ್ಲಿ ಹಾಲಿನ ದರ ಹೆಚ್ಚಳ ಮಾಡಿರುವುದು ಸಾಮಾನ್ಯ ಜನರ ಕುಟುಂಬದ ಬಜೆಟ್ ಮೇಲೆ ಪರಿಣಾಮ ಬೀರಲಿದೆ ಎಂದು ಬಿಜೆಪಿ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದರು.

ಪ್ರತಿಭಟನೆಯ ವೇಳೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಪ್ರತಿಕೃತಿಯನ್ನು ದಹಿಸುವ ಮೂಲಕ ಬಿಜೆಪಿ ಕಾರ್ಯಕರ್ತರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯ ಸರಕಾರ ಕೂಡಲೇ ಬೆಲೆ ಏರಿಕೆ ನಿರ್ಧಾರವನ್ನು ಮರುಪರಿಶೀಲಿಸಿ ಜನಸಾಮಾನ್ಯರಿಗೆ ಅನುಕೂಲವಾಗುವ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor