ಕುಂದಗೋಳ : ತಾಲೂಕಿನ ಗುಡಗೇರಿ ಗ್ರಾಮದಲ್ಲಿ ಹುಬ್ಬಳ್ಳಿಯಿಂದ ಅತ್ತಿಗೇರಿಗೆ ತೆರಳುತ್ತಿದ್ದ ಸಾರಿಗೆ ಬಸ್‌ನ ಮುಖ್ಯ ಹೆಡ್‌ಲೈಟ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಪರಿಣಾಮ, ಪ್ರಯಾಣಿಕರ ಮೊಬೈಲ್ ಫೋನ್‌ಗಳ ಬೆಳಕಿನಲ್ಲೇ ಬಸ್ ಚಲಾಯಿಸಿ ಸುರಕ್ಷಿತವಾಗಿ ಗ್ರಾಮಗಳನ್ನು ತಲುಪಿಸಿದ ಘಟನೆ ಶುಕ್ರವಾರ ಸಂಶಿ–ಗುಡಗೇರಿ ಮಾರ್ಗದಲ್ಲಿ ನಡೆದಿದೆ.

ಹುಬ್ಬಳ್ಳಿಯಿಂದ ರಾತ್ರಿ 8.05ಕ್ಕೆ ಹೊರಟು ಗುಡಗೇರಿಗೆ ರಾತ್ರಿ 9.20ಕ್ಕೆ ತಲುಪಬೇಕಿದ್ದ ಬಸ್, ಸಂಶಿ ಬಸ್ ನಿಲ್ದಾಣದ ಸಮೀಪ ಬರುತ್ತಿದ್ದಂತೆ ಮುಖ್ಯ ಹೆಡ್‌ಲೈಟ್ ಬೆಳಗದೆ ಮಾರ್ಗಮಧ್ಯೆಯೇ ಕತ್ತಲಾವರಿಸಿತು. ಇದರಿಂದ ಬಸ್‌ನಲ್ಲಿದ್ದ ಪ್ರಯಾಣಿಕರು ಆತಂಕಕ್ಕೊಳಗಾದರು.

ಸಂಶಿಯಿಂದ ಗುಡಗೇರಿಗೆ ಸಾಮಾನ್ಯವಾಗಿ ಸುಮಾರು 20 ನಿಮಿಷಗಳ ಪ್ರಯಾಣವಿದೆ. ಆದರೆ ಹೆಡ್‌ಲೈಟ್ ಇಲ್ಲದೆ ಕಗ್ಗತ್ತಲಲ್ಲಿ ಸಂಚರಿಸುವ ಪರಿಸ್ಥಿತಿ ಎದುರಾದ ಹಿನ್ನೆಲೆಯಲ್ಲಿ ಪ್ರಯಾಣಿಕರು ತಮ್ಮ ಮೊಬೈಲ್ ಫೋನ್‌ಗಳ ಟಾರ್ಚ್ ಬೆಳಕನ್ನು ಆನ್ ಮಾಡಿ ಚಾಲಕನಿಗೆ ನೆರವಾಗಿದ್ದಾರೆ. ಈ ಬೆಳಕಿನ ಆಸರೆಯಲ್ಲೇ ಚಾಲಕ ಅತ್ಯಂತ ಜಾಗರೂಕತೆಯಿಂದ ಬಸ್ ಚಲಾಯಿಸಿ, ಸುಮಾರು ಒಂದು ಗಂಟೆ ಕಾಲ ಪ್ರಯಾಸಪಟ್ಟು ಪ್ರಯಾಣಿಕರನ್ನು ಸುರಕ್ಷಿತವಾಗಿ ಗುಡಗೇರಿ ತಲುಪಿಸಿದ್ದಾರೆ.

ಗುಡಗೇರಿಯಿಂದ ಮುಂದಿನ ಅತ್ತಿಗೇರಿ ಗ್ರಾಮಕ್ಕೂ ಇದೇ ರೀತಿಯಲ್ಲಿ ಮೊಬೈಲ್ ಫೋನ್‌ಗಳ ಬೆಳಕಿನ ಆಸರೆಯಲ್ಲೇ ಬಸ್ ಚಲಾಯಿಸಿಕೊಂಡು ಹೋಗಬೇಕಾದ ಅನಿವಾರ್ಯತೆ ಎದುರಾಯಿತು ಎಂದು ಬಸ್ ಚಾಲಕ ತಿಳಿಸಿದ್ದಾರೆ.

ಇಕ್ಕಟ್ಟಿನ ಪರಿಸ್ಥಿತಿಯಲ್ಲೂ ಸಂಯಮ ಕಳೆದುಕೊಳ್ಳದೆ, ಪ್ರಯಾಣಿಕರ ಸುರಕ್ಷತೆಗೆ ಆದ್ಯತೆ ನೀಡಿ ಬಸ್‌ನ್ನು ನಿಧಾನವಾಗಿ ಚಲಾಯಿಸಿ ಸುರಕ್ಷಿತವಾಗಿ ಊರು ತಲುಪಿಸಿದ ಚಾಲಕನ ಕಾರ್ಯಕ್ಕೆ ಪ್ರಯಾಣಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor