Dharwad | ಸಾರಿಗೆ ಬಸ್ ಪಲ್ಟಿ; ವೃದ್ಧೆ ಸಾವು, 20ಕ್ಕೂ ಹೆಚ್ಚು ಮಂದಿಗೆ ಗಾಯ
ಧಾರವಾಡ : ಧಾರವಾಡ ತಾಲೂಕಿನ ಅಮ್ಮಿನಭಾವಿ ಗ್ರಾಮದ ಸಮೀಪ ಧಾರವಾಡ–ಸವದತ್ತಿ ಮುಖ್ಯ ರಸ್ತೆಯಲ್ಲಿ ಬುಧವಾರ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಸಾರಿಗೆ ಬಸ್ ಪಲ್ಟಿಯಾಗಿ ಓರ್ವ ವೃದ್ಧ ಮಹಿಳೆ ಮೃತಪಟ್ಟಿದ್ದು, 20ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ. ಗಾಯಾಳುಗಳಲ್ಲಿ ಮೂವರ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.
ದಾವಣಗೆರೆಯಿಂದ ಮಹಾರಾಷ್ಟ್ರದ ಮಿರಜ್ ಕಡೆಗೆ ತೆರಳುತ್ತಿದ್ದ ಸಾರಿಗೆ ಬಸ್‌ನ ಎಕ್ಸಲ್ ತುಂಡಾದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಕಾಲುವೆಗೆ ಪಲ್ಟಿಯಾಗಿದೆ ಎಂದು ತಿಳಿದುಬಂದಿದೆ.
ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮುನವಳ್ಳಿ ಗ್ರಾಮದ ನಿವಾಸಿ ಮಹಿಳೆ ಹುಸೇನ್ ಬಿ ಕೆಂಗನೂರ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು,ಬಸ್ ಚಾಲಕ ಸೇರಿದಂತೆ 20ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ.
108 ಆಂಬ್ಯುಲೆನ್ಸ್ ಸಹಾಯದಿಂದ ಧಾರವಾಡ ಜಿಲ್ಲಾಸ್ಪತ್ರೆಗೆ ಗಾಯಾಳುಗಳನ್ನು ದಾಖಲಿಸಿದ್ದು ಗಾಯಾಳುಗಳ ಪೈಕಿ ಮೂವರ ಸ್ಥಿತಿ ಚಿಂತಾಜನಕವಾಗಿರುವ ಹಿನ್ನೆಲೆಯಲ್ಲಿ ಅವರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.
ಅಪಘಾತ ಸಂಭವಿಸಿದ ಕೂಡಲೇ ಸಹಪ್ರಯಾಣಿಕರು ಮತ್ತು ಸ್ಥಳೀಯರು ರಕ್ಷಣಾ ಕಾರ್ಯಕ್ಕೆ ಮುಂದಾಗಿದ್ದು, ಗಾಯಾಳುಗಳನ್ನು ಸುರಕ್ಷಿತವಾಗಿ ಆಸ್ಪತ್ರೆಗೆ ಸಾಗಿಸಿದ್ದಾರೆ.
ಅಪಘಾತದ ಪರಿಣಾಮ ಧಾರವಾಡ–ಸವದತ್ತಿ ರಸ್ತೆಯಲ್ಲಿ ಕೆಲಕಾಲ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಬಳಿಕ ಪೊಲೀಸರು ಹಾಗೂ ಸ್ಥಳೀಯರ ಸಹಕಾರದಿಂದ ಬಸ್ ತೆರವುಗೊಳಿಸಿ ಸಂಚಾರವನ್ನು ಪುನಃ ಆರಂಭಿಸಲಾಯಿತು.
ಘಟನೆ ಕುರಿತು ಮಾಹಿತಿ ಪಡೆದ ಧಾರವಾಡ ಗ್ರಾಮೀಣ ಪೊಲೀಸ್ ಠಾಣೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಘಾತಕ್ಕೆ ಎಕ್ಸಲ್ ವೈಫಲ್ಯವೇ ಕಾರಣವೇ ಅಥವಾ ಬೇರೆ ತಾಂತ್ರಿಕ ದೋಷವಿದೆಯೇ ಎಂಬ ಕುರಿತು ತನಿಖೆ ಆರಂಭಿಸಲಾಗಿದ್ದು, ಪ್ರಕರಣ ದಾಖಲಾಗಿದೆ.