ನಕಲಿ ವೈದ್ಯರು, ಔಷಧಿಗಳ ವಿರುದ್ಧ ಶೂನ್ಯ ಸಹಿಷ್ಣುತೆ : ಯು.ಟಿ.ಖಾದರ್
ಹುಬ್ಬಳ್ಳಿ : ನಕಲಿ ವೈದ್ಯರು ಹಾಗೂ ನಕಲಿ ಔಷಧಿಗಳ ಕುರಿತು ಶೂನ್ಯ ಸಹಿಷ್ಣುತೆ ನೀತಿ ಅನುಸರಿಸುತ್ತಿದ್ದು, ಇಂತಹ ಪ್ರಕರಣಗಳು ಪತ್ತೆಯಾದರೆ ಸಂಬಂಧಿಸಿದ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಿ ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ಎಚ್ಚರಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿ ತಾಲೂಕು ಹಾಗೂ ಜಿಲ್ಲೆಗೆ ಆಹಾರ ಸುರಕ್ಷತಾ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಅಧಿಕಾರಿಗಳು ಸಮರ್ಪಕವಾಗಿ ಕಾರ್ಯನಿರ್ವಹಿಸದಿರುವುದು ಕಂಡುಬಂದರೆ ಅವರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು. ಅಧಿಕಾರಿಗಳ ಗಮನಕ್ಕೆ ಬಾರದಂತೆ ಯಾವುದೇ ಕೆಲಸ ನಡೆಯಲು ಸಾಧ್ಯವಿಲ್ಲ. ನಕಲಿ ವೈದ್ಯರ ಪ್ರಕರಣ ಪತ್ತೆಯಾದರೆ ಅದಕ್ಕೆ ಸಂಬಂಧಿಸಿದ ಅಧಿಕಾರಿಗಳೇ ಹೊಣೆ ಎಂದು ಹೇಳಿದರು.
ನಕಲಿ ಔಷಧಿಗಳ ಮಾರಾಟದ ಕುರಿತು ಮಾಹಿತಿ ಬಂದ ತಕ್ಷಣ ಪರಿಶೀಲಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕರ ಆರೋಗ್ಯದ ವಿಚಾರದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜಕೀಯ ನಿವೃತ್ತಿ ಕುರಿತು ಮಾತನಾಡದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೂಚಿಸಿದ್ದಾರೆ ಎಂಬ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಅವರು ಮುಂದುವರಿಯಬೇಕು ಎಂಬುದು ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮುಖಂಡರ ಬಯಕೆಯಾಗಿದೆ. ಕಾರ್ಯಕರ್ತರ ಈ ಬಯಕೆಯನ್ನೇ ರಾಹುಲ್ ಗಾಂಧಿ ಅವರು ವ್ಯಕ್ತಪಡಿಸಿರಬಹುದು ಎಂದರು.