ವಿದ್ಯಾರ್ಥಿಗಳಲ್ಲಿರುವ ಪ್ರತಿಭೆ ಗುರುತಿಸುವ ಕೌಶಲ್ಯವನ್ನು ಶಿಕ್ಷಕರು ಬೆಳೆಸಿಕೊಳ್ಳಬೇಕು : ಯು.ಟಿ.ಖಾದರ್
ಧಾರವಾಡ : ದೈಹಿಕ ಶಿಕ್ಷಕರು ದೈಹಿಕವಾಗಿ ಸದೃಢ ಮತ್ತು ಚಟುವಟಿಕೆಯಿಂದ ಇದ್ದರೆ, ಶಾಲೆಯ ಶೇ.50ರಷ್ಟು ವಾತಾವರಣ ಮತ್ತು ಮಕ್ಕಳು ಸರಿಯಾದ ದಾರಿಯಲ್ಲಿ ಇರುತ್ತಾರೆ. ವಿದ್ಯಾರ್ಥಿಗಳಲ್ಲಿ ಕೇವಲ ಕ್ರೀಡೆ ಮಾತ್ರವಲ್ಲದೆ, ಅವರನ್ನು ನಿರ್ವಹಿಸುವ ಮತ್ತು ಅವರ ಪ್ರತಿಭೆಯನ್ನು ಗುರುತಿಸುವ ಕೌಶಲ್ಯಗಳನ್ನು ಶಿಕ್ಷಕರು ಬೆಳೆಸಿಕೊಳ್ಳಬೇಕು ಎಂದು ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆ ಸಚಿವ ಯು.ಟಿ.ಖಾದರ್ ತಿಳಿಸಿದರು.
ಶನಿವಾರ ಧಾರವಾಡದ ಜಿಲ್ಲಾ ಪಂಚಾಯತ್ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ ಆಯೋಜಿಸಿದ್ದ ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಶಿಕ್ಷಕರಿಗೆ ಶೀಘ್ರದಲ್ಲೇ 15 ದಿನಗಳ ಕಠಿಣ ತರಬೇತಿ ಆಯೋಜಿಸಲಾಗುವುದು. ಪ್ರತಿಯೊಂದು ಶಾಲೆಯಲ್ಲೂ ಫುಟ್ಬಾಲ್, ಕ್ರಿಕೆಟ್, ಹಾಕಿ, ಕಬಡ್ಡಿ, ಖೋ-ಖೋ ಮುಂತಾದ ತಂಡಗಳನ್ನು ಕಡ್ಡಾಯವಾಗಿ ರಚಿಸಬೇಕು. ಶಿಕ್ಷಕರು ಶಾಲಾ ಮಟ್ಟದಿಂದ ಅತ್ಯುತ್ತಮ ಆಟಗಾರರ ತಂಡವನ್ನು ಆಯ್ಕೆ ಮಾಡಿ ತಾಲೂಕು ಮಟ್ಟದ ತಂಡಗಳನ್ನು ರಚಿಸಬೇಕು. ತಾಲೂಕು ಮಟ್ಟದಿಂದ ಆಯ್ಕೆಯಾದವರನ್ನು ಸೇರಿಸಿ ಜಿಲ್ಲಾ ಮಟ್ಟದ ತಂಡ ಹಾಗೂ ಕೊನೆಗೆ ರಾಜ್ಯ ಮಟ್ಟದ ಪ್ರತಿಭಾವಂತ ತಂಡವನ್ನು ಸಿದ್ಧಪಡಿಸಬೇಕು ಎಂದು ಅವರು ಕರೆ ನೀಡಿದರು.
ಸರಕಾರಿ ಹಾಗೂ ಅಲ್ಪಸಂಖ್ಯಾತರ ಇಲಾಖೆ ಶಾಲೆಗಳಲ್ಲಿ ಉತ್ತಮ ಪಥ ಸಂಚಲನ ತಂಡವನ್ನು ಬೆಳೆಸಬೇಕು. ಸ್ವಾತಂತ್ರ್ಯ ದಿನಾಚರಣೆ ಮತ್ತು ಗಣರಾಜ್ಯೋತ್ಸವದಂತಹ ದೊಡ್ಡ ಸಮಾರಂಭಗಳಲ್ಲಿ ನಮ್ಮ ಶಾಲಾ ಮಕ್ಕಳು ಭಾಗವಹಿಸಿ ಗೌರವ ತರಬೇಕು. ಖಾಸಗಿ ಶಾಲೆಗಳ ಮಾದರಿಯಲ್ಲಿಯೆ ಪ್ರತಿಯೊಂದು ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಅತ್ಯುತ್ತಮ ಶಾಲಾ ಬ್ಯಾಂಡ್ ತಂಡವನ್ನು ರಚಿಸಬೇಕು. ಅದಕ್ಕೆ ಬೇಕಾದ ಆರ್ಥಿಕ ನೆರವು ಮತ್ತು ಉಪಕರಣಗಳನ್ನು ಸರಕಾರ ನೀಡಲಿದೆ ಎಂದು ಖಾದರ್ ಹೇಳಿದರು.
ತಾಲೂಕು, ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಸಾಂಸ್ಕೃತಿಕ ಮತ್ತು ಪ್ರತಿಭಾ ಸ್ಪರ್ಧೆಗಳನ್ನು ಆಯೋಜಿಸಿ, ಮಕ್ಕಳ ಹಾಗೂ ಸಿಬ್ಬಂದಿಯಲ್ಲಿ ಅಡಗಿರುವ ಪ್ರತಿಭೆಗೆ ವೇದಿಕೆ ಕಲ್ಪಿಸಬೇಕು. ಮಕ್ಕಳು ಕೇವಲ ತರಗತಿಯ ಒಳಗೆ ಮಾತ್ರವಲ್ಲ, ಹೊರಗಿನ ಸಮಾಜದಲ್ಲೂ ಚುರುಕಾಗಿ ಮತ್ತು ಜಾಣರಾಗಿ ಇರಬೇಕು. ಶಾಲಾ ಹಂತದಲ್ಲೇ ಪ್ರತಿಭೆಯನ್ನು ಗುರುತಿಸಿ, ಅಲ್ಪಸಂಖ್ಯಾತರ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಗೆ ಹೆಮ್ಮೆ ತರುವ ರೀತಿಯಲ್ಲಿ ಬೆಳೆಸಬೇಕು. ಈ ಯೋಜನೆಗಳಿಗೆ ಹೆಚ್ಚುವರಿ ಶ್ರಮ ಮತ್ತು ಕೆಲಸದ ಅಗತ್ಯವಿದೆ ಎಂದು ಅವರು ಪ್ರತಿಪಾದಿಸಿದರು.
ಅಲ್ಪಸಂಖ್ಯಾತರ ನಿರ್ದೇಶನಾಲಯದ ನಿರ್ದೇಶಕಿ ಯಾಸ್ಮೀನ್ ಬೇಗಮ್ ವಾಲಿಕಾರ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಶಿಸ್ತು, ಸಂಯಮ ಹಾಗೂ ಸೇವಾ ಮನೋಭಾವವನ್ನು ಮೂಡಿಸುವ ಉದ್ದೇಶದಿಂದ ಸೌಟ್ಸ್ ಮತ್ತು ಗೈಡ್ಸ್, ಎನ್.ಸಿ.ಸಿ ತರಬೇತಿ ನೀಡಬೇಕು. ಇಂದಿನ ಕಾಲಘಟ್ಟದಲ್ಲಿ ಮಕ್ಕಳು ದಾರಿ ತಪ್ಪುವ ಸಾಧ್ಯತೆಗಳಿದ್ದು, ಅವರಲ್ಲಿ ಹಿರಿಯರು-ಕಿರಿಯರು ಎಂಬ ಗೌರವ, ನಮ್ಮ ಸಂಸ್ಕೃ ತಿ ಮತ್ತು ಸಮಾಜ ಸೇವೆಯ ಜಾಗೃತಿ ಮೂಡಿಸುವುದು ಅತ್ಯಗತ್ಯವಾಗಿದೆ ಎಂದು ಹೇಳಿದರು.
ವೇದಿಕೆಯಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾಧಿಕಾರಿ ಪೂರ್ಣಿಮಾ ಚೂರಿ ಉಪಸ್ಥಿತರಿದ್ದರು. ಸಭೆಯಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವಸತಿ ಶಾಲೆಯ ಅಧಿಕಾರಿಗಳು, ಸೌಟ್ಸ್ ಮತ್ತು ಗೈಡ್ಸ್, ಎನ್.ಸಿ.ಸಿಯ ಅಧಿಕಾರಿಗಳು, ಶಿಕ್ಷಕರು, ಸಿಬ್ಬಂದಿಗಳು ಭಾಗವಹಿಸಿದ್ದರು.