Gadag | ಭೋಪಾಲ್ ರೈಲು ನಿಲ್ದಾಣದ ಸಿಸಿಟಿವಿ ಕ್ಯಾಮರಾದಲ್ಲಿ ಫರ್ವೇಝ್ ಚಲನವಲನ ಸೆರೆ
18 ದಿನಗಳು ಕಳೆದರೂ ಪತ್ತೆಯಾಗದ ಕೆಆರ್ ಐಡಿಎಲ್ ಎಇಇ
ಗದಗ: ಕಳೆದ 18 ದಿನಗಳಿಂದ ನಾಪತ್ತೆಯಾಗಿರುವ ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಯಮಿತ(ಕೆಆರ್ ಐಡಿಎಲ್)ದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ (ಎಇಇ) ಫರ್ವೇಝ್ ಧಾರವಾಡ ಅವರ ಚಲನವಲನ ಭೋಪಾಲ್ ರೈಲು ನಿಲ್ದಾಣದ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಫರ್ವೇಝ್ ಪತ್ತೆಗಾಗಿ ಗದಗ ಪೊಲೀಸರು ಶೋಧ ಕಾರ್ಯವನ್ನು ಚುರುಕುಗೊಳಿಸಿದ್ದಾರೆ. ಫರ್ವೇಝ್ ಆಂಧ್ರ ಪ್ರದೇಶದ ವಿಜಯವಾಡದವರೆಗೆ ತೆರಳಿರುವ ಸುಳಿವು ಪೊಲೀಸರಿಗೆ ಲಭ್ಯವಾಗಿದ್ದು, ಬಳಿಕ ಭೋಪಾಲ್ ಕಡೆಗೆ ಪ್ರಯಾಣಿಸಿರುವ ಮಾಹಿತಿ ದೊರೆತಿದೆ. ಈ ಮಧ್ಯೆ ಭೋಪಾಲ್ ರೈಲು ನಿಲ್ದಾಣದ ಸಿಸಿಟಿವಿ ಕ್ಯಾಮರಾ ದೃಶ್ಯಗಳಲ್ಲಿ ಫರ್ವೇಝ್ ಕಾಣಿಸಿಕೊಂಡಿರುವುದಾಗಿ ತಿಳಿದುಬಂದಿದೆ.
ಫರ್ವೇಝ್ ರ ಮೊಬೈಲ್ ಲೊಕೇಷನ್ ವಿಜಯವಾಡದಲ್ಲಿ ಸ್ಥಗಿತಗೊಂಡ ಬಳಿಕವೂ ಪೊಲೀಸರು ಸುಮಾರು 1,200 ಕಿ.ಮೀ. ವ್ಯಾಪ್ತಿಯ ರೈಲು ಮಾರ್ಗದಲ್ಲಿನ ಸಿಸಿಟಿವಿ ಕ್ಯಾಮರಾ ದೃಶ್ಯಗಳನ್ನು ಪರಿಶೀಲಿಸಿದಾಗ ಅವರ ಚಲನವಲನ ಭೋಪಾಲ್ ರೈಲು ನಿಲ್ದಾಣದಲ್ಲಿ ಪತ್ತೆಯಾಗಿದೆ.
18 ದಿನಗಳಿಂದ ಮೊಬೈಲ್ ಫೋನ್ ಆನ್ ಮಾಡದಿರುವುದರಿಂದ ಫರ್ವೇಝ್ ಪತ್ತೆ ಕಾರ್ಯಕ್ಕೆ ಸವಾಲು ಎದುರಾಗಿದ್ದರೂ, ಸಿಸಿಟಿವಿ ಕ್ಯಾಮರಾ ಸೇರಿದಂತೆ ಲಭ್ಯವಿರುವ ತಾಂತ್ರಿಕ ಸುಳಿವುಗಳ ಆಧಾರದಲ್ಲಿ ಪೊಲೀಸರು ಶೋಧ ಮುಂದುವರಿಸಿದ್ದಾರೆ.
ಗದಗದ ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಫರ್ವೀಝ್ ಧಾರವಾಡ ಕಾಮಗಾರಿಗಳಿಗೆ ಅನುದಾನ ಕೊರತೆ ಹಾಗೂ ಪಾವತಿ ಸಮಸ್ಯೆಯಿಂದ ಮಾನಸಿಕವಾಗಿ ನೊಂದಿರುವುದಾಗಿ ಪತ್ರ ಬರೆದಿಟ್ಟು ಸೆ.13ರಿಂದ ನಾಪತ್ತೆಯಾಗಿದ್ದಾರೆ. ಈ ಸಂಬಂಧ ಸೆ.16ರಂದು ಬೆಟಗೇರಿ ಬಡಾವಣೆ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ.