ದ್ವೇಷ ಭಾಷಣ ಆರೋಪ: ಕನ್ನೇರಿ ಸ್ವಾಮೀಜಿ ವಿರುದ್ಧ ಸುಮೋಟೊ ಪ್ರಕರಣ ದಾಖಲಿಸಲು ಆಗ್ರಹ
ಗದಗ: ಸೋಮವಾರ ಗದಗನಲ್ಲಿ ನಡೆದ ಹಿಂದೂ ಸಮಾವೇಶದಲ್ಲಿ ಕನ್ನೇರಿ ಸ್ವಾಮೀಜಿ ದ್ವೇಷ ಭಾಷಣ ಮಾಡಿದ್ದಾರೆ ಎಂದು ಆರೋಪಿಸಿರುವ ಗದಗ ದಲಿತ ಸಂಘಟನೆಗಳ ಒಕ್ಕೂಟವು, ಅವರ ವಿರುದ್ಧ ಗದಗ ಜಿಲ್ಲಾಡಳಿತ ಹಾಗೂ ಜಿಲ್ಲಾ ಪೊಲೀಸ್ ಇಲಾಖೆ ಸ್ವಯಂಪ್ರೇರಿತ ಸುಮೋಟೊ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದೆ.
ಈ ಕುರಿತು ಪ್ರಕಟಣೆ ನೀಡಿರುವ ಒಕ್ಕೂಟವು, ಈ ಹಿಂದೆ ವಿಜಯಪುರ ಜಿಲ್ಲಾಧಿಕಾರಿಗಳು ಜಿಲ್ಲೆಯ ಶಾಂತಿ ಮತ್ತು ಸೌಹಾರ್ದತೆ ಹಿತದೃಷ್ಟಿಯಿಂದ ಕನ್ನೇರಿ ಸ್ವಾಮೀಜಿಯನ್ನು ವಿಜಯಪುರ ಜಿಲ್ಲೆಗೆ ನಿರ್ಬಂಧಿಸಿ ಆದೇಶ ಹೊರಡಿಸಿದ್ದರು. ಈ ಆದೇಶವನ್ನು ಪ್ರಶ್ನಿಸಿ ಅವರು ಹೈಕೋರ್ಟ್ ಹಾಗೂ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಈ ವೇಳೆ ಸುಪ್ರೀಂಕೋರ್ಟ್, ಸ್ವಾಮೀಜಿಗಳ ಭಾಷೆ ಮಿತಿಯಲ್ಲಿರಬೇಕು ಹಾಗೂ ಅಶ್ಲೀಲ ಅಥವಾ ಯಾವುದೇ ಸಮುದಾಯಕ್ಕೆ ಅವಹೇಳನಕಾರಿ ಮಾತುಗಳನ್ನು ಆಡಬಾರದು ಎಂದು ಎಚ್ಚರಿಕೆ ನೀಡಿತ್ತು ಎಂದು ಹೇಳಿದೆ.
ಆದರೆ, ನಿನ್ನೆ ಗದಗನಲ್ಲಿ ನಡೆದ ಹಿಂದೂ ಸಮಾವೇಶದಲ್ಲಿ ಮತ್ತೆ ಒಂದು ಧರ್ಮದ ವಿರುದ್ಧ ಅವರು ಮಾತನಾಡಿದ್ದಾರೆ ಎಂದು ಒಕ್ಕೂಟ ಆರೋಪಿಸಿದೆ.
ಸಮಾವೇಶದಲ್ಲಿ ಈ ನಾಡಿನ ಚಿಂತಕರು, ಜಾನಪದ ತಜ್ಞರು ಹಾಗೂ ಬಸವಾನುಯಾಯಿಗಳಾದ ಕಲಬುರ್ಗಿಯ ಮೀನಾಕ್ಷಿ ಬಾಳಿ ಅವರ ಹೆಸರನ್ನು ಪ್ರಸ್ತಾಪಿಸಿ, ಅವರ ಅಡ್ಡಹೆಸರನ್ನು ಅಶ್ಲೀಲ ಭಾಷೆಯಲ್ಲಿ ನಿಂದನಾತ್ಮಕವಾಗಿ ಉಲ್ಲೇಖಿಸುವ ಮೂಲಕ ಸಾರ್ವಜನಿಕವಾಗಿ ಅವಮಾನಿಸಿ ಮಾನಹಾನಿ ಮಾಡಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಅಲ್ಲದೆ, ಬೇರೆ ಧರ್ಮದ ಹೆಸರನ್ನು ಬಳಸಿ ಅಲ್ಲಿ ನೆರೆದಿದ್ದ ಜನರನ್ನು ಮತ್ತೊಂದು ಧರ್ಮದ ವಿರುದ್ಧ ಎತ್ತಿಕಟ್ಟುವ ರೀತಿಯಲ್ಲಿ ಮಾತನಾಡಿದ್ದು, ಗದಗ ಜಿಲ್ಲೆಯಲ್ಲಿ ಪರಸ್ಪರ ಪ್ರೀತಿಸಿ ವಿವಾಹವಾದ ಅಂತರಧರ್ಮೀಯರ ಹೆಸರುಗಳನ್ನು ಬಹಿರಂಗವಾಗಿ ಉಲ್ಲೇಖಿಸಿ ‘ಲವ್ ಜಿಹಾದ್’ ಎಂದು ಆರೋಪಿಸಿ ಪ್ರಚೋದನಕಾರಿ ಭಾಷಣ ಮಾಡಿದ್ದಾರೆ. ಜಿಲ್ಲೆಯ ಕೋಮು ಸೌಹಾರ್ದತೆಗೆ ಧಕ್ಕೆ ತರುವ ಮೂಲಕ ಜನರನ್ನು ಪ್ರಚೋದಿಸಿದ್ದಾರೆ ಎಂದು ಒಕ್ಕೂಟ ಆರೋಪಿಸಿದೆ.
ಕನ್ನೇರಿ ಸ್ವಾಮೀಜಿ ಗದಗ ಜಿಲ್ಲೆಗೆ ಬರುವ ಎರಡು ದಿನಗಳ ಮುನ್ನವೇ ‘ಸಮಾನತೆಗಾಗಿ ನಾವು’ ವೇದಿಕೆಯ ವತಿಯಿಂದ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಿ, ಅವರನ್ನು ಜಿಲ್ಲೆಗೆ ಪ್ರವೇಶಿಸದಂತೆ ನಿರ್ಬಂಧಿಸಬೇಕು ಎಂದು ಆಗ್ರಹಿಸಲಾಗಿತ್ತು. ಆದರೆ ಮನವಿಯನ್ನು ನಿರ್ಲಕ್ಷಿಸಿ ಜಿಲ್ಲಾಡಳಿತ ಅನುಮತಿ ನೀಡಿದ್ದರಿಂದ ಜಿಲ್ಲೆಯ ಸೌಹಾರ್ದತೆಗೆ ಧಕ್ಕೆಯಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಮೇ 30ರಂದು ನಗರದ ಗಾಂಧಿ ವೃತ್ತದಲ್ಲಿ ಆಯೋಜಿಸಿದ್ದ ‘ಸಾಮೂಹಿಕ ವಚನ ಪಠಣ ಹಾಗೂ ಸಂವಿಧಾನದ ಪೂರ್ವಪೀಠಿಕೆಯ ಸಮಾನತೆಯ ಉದ್ಘೋಷ’ ಕಾರ್ಯಕ್ರಮದ ಕುರಿತು ಕನ್ನೇರಿ ಸ್ವಾಮೀಜಿ ಮಾಡಿರುವ ಟೀಕೆಗಳನ್ನೂ ಒಕ್ಕೂಟ ಖಂಡಿಸಿದೆ. ಕಾರ್ಯಕ್ರಮಕ್ಕೆ ನರೇಗಾ ಕಾರ್ಮಿಕರನ್ನು ಕರೆತಂದಿದ್ದಾರೆ ಎಂಬ ಆರೋಪವನ್ನು ಅವರು ಮಾಡಿದ್ದಾರೆ. ಈ ಆರೋಪವನ್ನು ಬಹಿರಂಗಪಡಿಸಬೇಕು, ಇಲ್ಲವಾದಲ್ಲಿ ‘ಸಮಾನತೆಗಾಗಿ ನಾವು’ ವೇದಿಕೆಯ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದೆ.
ಕೋಮು ಸೌಹಾರ್ದತೆ ಹಾಳು ಮಾಡುವ ರೀತಿಯ ದ್ವೇಷ ಭಾಷಣ ಮಾಡಿರುವ ಕನ್ನೇರಿ ಸ್ವಾಮೀಜಿ ವಿರುದ್ಧ ಗದಗ ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸ್ ಇಲಾಖೆ ಸುಮೋಟೊ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಗದಗ ದಲಿತ ಸಂಘಟನೆಗಳ ಒಕ್ಕೂಟ ಆಗ್ರಹಿಸಿದೆ.