ಗದಗ: ಕಾಮಗಾರಿಗಳಿಗೆ ಅನುದಾನ ಕೊರತೆ ಹಾಗೂ ಪಾವತಿ ಸಮಸ್ಯೆಯಿಂದ ಮಾನಸಿಕವಾಗಿ ನೊಂದಿದ್ದಾಗಿ ಪತ್ರ ಬರೆದಿಟ್ಟು ಗದಗದ ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮದ (KRIDL) ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ (AEE) ಪರ್ವಿಝ್ ಧಾರವಾಡ್ ನಾಪತ್ತೆಯಾಗಿರುವ ಘಟನೆ ನಡೆದಿದೆ.

ಸೆ.12ರಂದು ಕೆಆರ್ ಐಡಿಎಲ್ ಬೆಂಗಳೂರಿನ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆದಿರುವ ಪರ್ವಿಝ್ ಧಾರವಾಡ್, ಸೆ.13ರಂದು ಬೆಂಗಳೂರಿನಲ್ಲಿ ಸಭೆ ಇದೆ ಎಂದು ತೆರಳಿದ್ದವರು ಬಳಿಕ ನಾಪತ್ತೆಯಾಗಿದ್ದಾರೆ. ಈ ಸಂಬಂಧ ಸೆ.16ರಂದು ಬೆಟಗೇರಿ ಬಡಾವಣೆ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ.

ಈ ಮಧ್ಯೆ ಪರ್ವೀಝ್ ಬರೆದಿದ್ದು ಎನ್ನಲಾದ ಪತ್ರ ಲಭಿಸಿದ್ದು, ಗದಗ ಕೆಆರ್ ಐಡಿಎಲ್ ಉಪವಿಭಾಗದಲ್ಲಿ ಅನುದಾನ ಕೊರತೆಯಿಂದ ಹಲವು ಕಾಮಗಾರಿಗಳು ಸ್ಥಗಿತಗೊಂಡಿರುವುದು ಹಾಗೂ ಪೂರ್ಣಗೊಂಡ ಕಾಮಗಾರಿಗಳಿಗೆ ಗ್ರೂಪ್ ಲೀಡರ್‌ಗಳಿಗೆ ಹಣ ಪಾವತಿಸಲು ಸಾಧ್ಯವಾಗುತ್ತಿಲ್ಲ ಎಂದು ಉಲ್ಲೇಖಿಸಿದ್ದಾರೆ. ಸುಮಾರು ಆರು ಕೋಟಿ ರೂ. ಅನುದಾನ ಬಿಡುಗಡೆಗೆ ಇಲಾಖೆಗೆ ಪತ್ರ ಬರೆದಿದ್ದರೂ ಹಣ ಬಿಡುಗಡೆಯಾಗಿಲ್ಲ. ಇನ್ನೂ ಕೆಲವು ಕಾಮಗಾರಿಗಳಿಗೆ ಸಂಬಂಧಿಸಿದ ಸುಮಾರು ಎರಡು ಕೋಟಿ ರೂ. ಅನುದಾನ ಕೇಂದ್ರ ಕಚೇರಿಯಲ್ಲಿ ಲಭ್ಯವಿದ್ದರೂ ಪಾವತಿ ಸಮಸ್ಯೆ ಎದುರಾಗಿದೆ ಎಂದು ಪತ್ರದಲ್ಲಿ ಆರೋಪಿಸಿದ್ದಾರೆ.

ಅನುದಾನ ಹಾಗೂ ಪಾವತಿ ವಿಚಾರವಾಗಿ ಜನಪ್ರತಿನಿಧಿಗಳು, ಕಾಮಗಾರಿ ನೀಡಿದ ಇಲಾಖೆಗಳು ಹಾಗೂ ಗ್ರೂಪ್ ಲೀಡರ್ ಗಳಿಂದ ಒತ್ತಡ ಎದುರಾಗುತ್ತಿದೆ. ಕೆಲವರು ಪ್ರತಿನಿತ್ಯ ಕಿರುಕುಳ ನೀಡುವುದು, ಮನೆಗೆ ಬರುವುದು ಹಾಗೂ ಕಚೇರಿಯಲ್ಲಿ ಕೂಗಾಡುವುದು ತಮ್ಮ ಮನಸ್ಸಿಗೆ ಆಘಾತ ತಂದಿದೆ ಎಂದು ಪರ್ವೀಝ್ ಪತ್ರದಲ್ಲಿ ತಿಳಿಸಿದ್ದಾರೆ.

ಪತ್ರದ ಕೊನೆಯಲ್ಲಿ ತಮ್ಮ ಜೀವನವನ್ನು ಕೊನೆಗೊಳಿಸುವ ನಿರ್ಧಾರ ಕೈಗೊಂಡಿರುವುದಾಗಿ ಹಾಗೂ ತಮ್ಮ ಸಾವಿಗೆ ಯಾರೂ ಕಾರಣರಲ್ಲ ಎಂದು ಬರೆದಿರುವುದು ಕುಟುಂಬಸ್ಥರಲ್ಲಿ ಆತಂಕ ಹೆಚ್ಚಿಸಿದೆ. ಕುಟುಂಬಕ್ಕೆ ಯಾವುದೇ ರೀತಿಯ ಕಿರುಕುಳ ನೀಡಬಾರದು ಹಾಗೂ ಗದಗ ಉಪವಿಭಾಗಕ್ಕೆ ಅನುದಾನ ಕೊರತೆ ಪರಿಹರಿಸಿ, ಬೇರೆ AEEಯನ್ನು ನಿಯೋಜಿಸುವಂತೆ ಮನವಿ ಮಾಡಿದ್ದಾರೆ.

ಸದ್ಯ ಪರ್ವೀಝ್ ಧಾರವಾಡ್ ಎಲ್ಲಿದ್ದಾರೆ ಎಂಬುದು ಪತ್ತೆಯಾಗಿಲ್ಲ. ಪೊಲೀಸರು ನಾಪತ್ತೆ ಪ್ರಕರಣ ದಾಖಲಿಸಿಕೊಂಡು ಶೋಧ ಕಾರ್ಯ ಆರಂಭಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor