×
Ad

ಗದಗ | ಭೀಕರ ರಸ್ತೆ ಅಪಘಾತ : 3 ಮಹಿಳೆಯರು ಸ್ಥಳದಲ್ಲೇ ಮೃತ್ಯು, 15ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯ

Update: 2026-02-05 10:28 IST

ಗದಗ : ರೋಣ ತಾಲೂಕಿನ ಜಿಗಳೂರು ಕ್ರಾಸ್ ಬಳಿ ಕ್ರೂಸರ್ ಹಾಗೂ ಕ್ಯಾಂಟರ್ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿದ ಪರಿಣಾಮ ಮೂವರು ಮಹಿಳೆಯರು ಸ್ಥಳದಲ್ಲೇ ಮೃತಪಟ್ಟಿದ್ದು, 15ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.

ಮೃತರನ್ನು ಗಜೇಂದ್ರಗಡದ ಶಿವಾಜಿ ಪೇಟೆಯ ನಿವಾಸಿಗಳಾದ ಮರಿಯಂಬ ಹುನಗುಂದ (55), ಅನ್ನಪೂರ್ಣ ಚಂಗಳಿ (45) ಹಾಗೂ ಸುಜಾತ ಹೊಸಮನಿ (30) ಎಂದು ಪೊಲೀಸರು ಗುರುತಿಸಿದ್ದಾರೆ. ಅಪಘಾತದಲ್ಲಿ ಮೃತಪಟ್ಟ ಮೂವರು ಮಹಿಳೆಯರು ಕ್ರೂಸರ್ ವಾಹನದಲ್ಲಿದ್ದರು ಎನ್ನಲಾಗಿದೆ.

ಮೃತರು ಹಾಗೂ ಗಾಯಾಳುಗಳು ಗಜೇಂದ್ರಗಡದಿಂದ ರೋಣ ಕಡೆಗೆ ಕಡಲೆ ಕೀಳುವ ಕೆಲಸಕ್ಕಾಗಿ ತೆರಳುತ್ತಿದ್ದ ಕಾರ್ಮಿಕರು ಎಂದು ತಿಳಿದು ಬಂದಿದೆ.

ಅಪಘಾತದಲ್ಲಿ ಗಾಯಗೊಂಡವರನ್ನು ತಕ್ಷಣ ರೋಣ ತಾಲೂಕು ಆಸ್ಪತ್ರೆ ಹಾಗೂ ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕೆಲ ಗಾಯಾಳುಗಳ ಸ್ಥಿತಿ ಗಂಭೀರವಾಗಿರುವುದರಿಂದ ಹೆಚ್ಚಿನ ಚಿಕಿತ್ಸೆ ಅಗತ್ಯವಾಗಿದೆ ಎಂದು ಮೂಲಗಳು ತಿಳಿಸಿವೆ.

ಘಟನೆಯ ಮಾಹಿತಿ ತಿಳಿದ ತಕ್ಷಣ ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿದ ಅವರು,

ರೋಣದಿಂದ ಗಜೇಂದ್ರಗಡದತ್ತ ಹೊರಟಿದ್ದ ಕ್ಯಾಂಟರ್ ಲಾರಿ ಕ್ರೂಸರ್ ವಾಹನ ಢಿಕ್ಕಿ ಹೊಡೆದಿದೆ. ಪ್ರಾಥಮಿಕ ತನಿಖೆ ಪ್ರಕಾರ ಅಪಘಾತದ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಪ್ರಕರಣದ ಕುರಿತು ತನಿಖೆ ಮುಂದುವರಿದಿದೆ ಎಂದು ಹೇಳಿದರು.

ಅಪಘಾತ ಸಂಭವಿಸಿದ ಕೆಲವೇ ಹೊತ್ತಲ್ಲಿ ಪೊಲೀಸ್ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯ ಕೈಗೊಂಡಿದ್ದಾರೆ. ಮೃತದೇಹಗಳನ್ನು ರೋಣ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಈ ಸಂಬಂಧ ತನಿಖೆ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - Reshma

contributor

Similar News