×
Ad

ಬೂಕರ್ ಬಾನು ಮುಷ್ತಾಕ್ ಬುಕ್ ಕವರ್ಸ್!

Update: 2026-03-02 12:42 IST

ಈ ಕಾಲದಲ್ಲಂತೂ ಪುಸ್ತಕ ಬಿಡುಗಡೆಯಾಗುವ ಮೊದಲೇ ಪುಸ್ತಕದ ಕವರುಗಳು ಡಿಜಿಟಲ್ ಮಾಧ್ಯಮದ ಮೂಲಕ ಹಲ ಬಗೆಯ ತೆರೆಗಳ ಮೇಲೆ ಮೂಡುತ್ತಿರುತ್ತವೆ. ಈ ಕಾಲ ಪುಸ್ತಕ ವಿನ್ಯಾಸಕಾರರಿಗೆ ಇನ್ನಷ್ಟು ಚಾಲೆಂಜಿಂಗ್ ಎಂಬುದನ್ನೂ ಅಹ್ಲಾವತ್ ಗಮನಿಸಿದ್ದಾರೆ: ‘ಈ ಸನ್ನಿವೇಶದಲ್ಲಿ ಜಾಣ ವಿನ್ಯಾಸಕಾರನೊಬ್ಬ ಡಿಜಿಟಲ್ ಮಾಧ್ಯಮದಲ್ಲಿ ಪರಿಣಾಮಕಾರಿಯಾಗಬಲ್ಲ ಅಕ್ಷರಗಳು, ಬಣ್ಣಗಳು, ಪ್ರತಿಮೆಗಳನ್ನು ಬಳಸುತ್ತಲೇ, ಕವರ್ ಮುದ್ರಣವಾದಾಗ ಕೂಡ ತನ್ನ ಸಮಗ್ರತೆಯನ್ನು ಕಾಪಾಡಿಕೊಳ್ಳುವ ಕಡೆ ಗಮನ ಕೊಡಬೇಕಾಗುತ್ತದೆ.’

ಪುಸ್ತಕ ಓದುವ ಎಷ್ಟು ಜನ ಪುಸ್ತಕದ ಕವರುಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಾರೋ ಗೊತ್ತಿಲ್ಲ. ಈ ಮುಖಪುಟ ಕಲಾವಿದರು ಮೂಲತಃ ಸೃಜನಶೀಲ ಲೇಖಕ, ಲೇಖಕಿಯರಷ್ಟೇ ಸೂಕ್ಷ್ಮಜೀವಿಗಳು, ಪ್ರತಿಭಾವಂತರು ಎಂಬುದನ್ನು ನಾವು ಸರಿಯಾಗಿ ಯೋಚಿಸಿರುವುದೇ ಇಲ್ಲ.

ಅದೇನೇ ಇರಲಿ, ಬಾನು ಮುಷ್ತಾಕ್ ಅವರ ‘ಹಾರ್ಟ್ ಲ್ಯಾಂಪ್’ (ಅನುವಾದ: ದೀಪಾ ಭಾಸ್ತಿ) ಅನುವಾದಿತ ಕೃತಿಗೆ ಹಲ ಬಗೆಯ ರಕ್ಷಾಪುಟಗಳನ್ನು ಮಾಡಿದ ಕಲಾವಿದ ಅಹ್ಲಾವತ್ ಗುಂಜನ್ ಅವರ ಸಂದರ್ಶನ ಮುಖಪುಟ ವಿನ್ಯಾಸದ ಕಲೆ ಕುರಿತು ನನ್ನ ಕಣ್ಣನ್ನಂತೂ ತೆರೆಸಿತು.

ಸಂದರ್ಶನದ ಶುರುವಿಗೇ ಅಹ್ಲಾವತ್, ‘ಪುಸ್ತಕ ವಿನ್ಯಾಸ ಒಂದು ‘ಸರ್ವಿಸ್’ ಎಂದ ತಕ್ಷಣ, ಸರ್ವಿಸ್ ಎಂಬ ಪದಕ್ಕಿರುವ ವಿಶಾಲ ಅರ್ಥಗಳು ನನ್ನನ್ನು ತಟ್ಟಿದವು. ಈ ಸರ್ವಿಸ್- ಪುಸ್ತಕಕ್ಕೆ, ಪುಸ್ತಕ ಬರೆದವರಿಗೆ, ಪುಸ್ತಕದ ಸೂಕ್ಷ್ಮ ವಿವರಗಳಿಗೆ, ವಸ್ತುವಿಗೆ, ನಿರೂಪಣೆಗೆ, ಪುಸ್ತಕ ಸಂಸ್ಕೃತಿಗೆ, ಒಟ್ಟಾರೆ ಸಂಸ್ಕೃತಿಗೆ, ಓದುಗ ಓದುಗಿಯರಿಗೆ, ಪುಸ್ತಕ ಪ್ರಕಾಶಕರಿಗೆ...ಹೀಗೆ ಅಹ್ಲಾವತ್ ಹೇಳುವ ‘ಸರ್ವಿಸ್’ ಎಂಬುದರ ಅರ್ಥಗಳು ವಿಸ್ತಾರವಾಗುತ್ತಾ ಹೋದವು.

ಅಹ್ಲಾವತ್ ಪ್ರಕಾರ, ಪುಸ್ತಕ ವಿನ್ಯಾಸಕಾರನ ಈ ಸರ್ವಿಸ್ ಎಂಥದೆಂದರೆ, ‘ಅದು ಕೃತಿಗೆ, ಪಠ್ಯಕ್ಕೆ ನಿಷ್ಠೆ. ನನ್ನ ಪಾತ್ರ ಏನು ಅಂದರೆ, ಪದಗಳ ಮೂಲಸತ್ವವನ್ನು ಒಂದು ರೂಪಕ್ಕೆ, ಆಕಾರಕ್ಕೆ -ಫಾರ್ಮ್‌ಗೆ- ಭಟ್ಟಿ ಇಳಿಸುವುದು. ಆ ರೂಪ ನೋಡಿದ ತಕ್ಷಣ ನೋಡಿದವರಿಗೆ ಅರ್ಥ ಎಟುಕಬೇಕು, ಸಂದರ್ಭ ಕರಾರುವಾಕ್ಕಾಗಿರಬೇಕು; ಸೌಂದರ್ಯದ ದೃಷ್ಟಿಯಿಂದ ಅದು ನೋಡಲೇಬೇಕು ಎನ್ನಿಸುವಂತಿರಬೇಕು.’

‘ಅಂದರೆ, ಬರೆಯುವವರಿಗೆ ಇಲ್ಲದ ಒತ್ತಡ, ಆಹ್ವಾನ ಪುಸ್ತಕ ಕಲಾವಿದನ ಸೃಜನಶೀಲ ನೋಟಕ್ಕೆ ಇರುತ್ತದೆ: ಈ ಕಣ್ಣು ಕೃತಿಯ ಒಳಗೆ ನೋಡಬೇಕು; ಕೃತಿಯಲ್ಲಿ ಕೇಂದ್ರ ಅರ್ಥ ಹೊಮ್ಮಿಸುವ ವಿವರಗಳನ್ನು, ಪ್ರತಿಮೆಗಳನ್ನು ಹುಡುಕಬೇಕು; ಓದುಗಿ-ಓದುಗರನ್ನೂ ಗಮನದಲ್ಲಿಟ್ಟುಕೊಳ್ಳಬೇಕು.’ ಇದು ಅಹ್ಲಾವತ್ ಗ್ರಹಿಕೆ.

‘ಹಾರ್ಟ್ ಲ್ಯಾಂಪ್’ ಕೃತಿಗೆ ಬೂಕರ್ ಅವಾರ್ಡ್ ಬಂದ ಕಾಲಕ್ಕೆ ಪುಸ್ತಕ ಹಾಗೂ ಅದರ ಅನುವಾದ ಕುರಿತು ವಿಧಾನಸೌಧದ ಬಾಂಕ್ವೆಟ್ ಹಾಲ್‌ನಲ್ಲಿ ನಡೆದ ಅಭಿನಂದನೆಯ ಸಂದರ್ಭದಲ್ಲಿ ಹತ್ತು ನಿಮಿಷ ಮಾತಾಡುವ ಸಂದರ್ಭ ನನಗೆ ಬಂದಿತ್ತು. ಆಗ ಈ ಪುಸ್ತಕದ ಕವರ್ ಕುರಿತು ಸರಿಯಾಗಿ ಯೋಚಿಸಿರಲೇ ಇಲ್ಲ. ಮನಸ್ಸೆಲ್ಲ ಇದ್ದದ್ದು ಒಂದೇ ದಿನದಲ್ಲಿ ಪುಸ್ತಕ ಓದಿ ಮಾತಾಡುವುದರ ಕಡೆಗೇ! ಮೊನ್ನೆ ಅಹ್ಲಾವತ್ ಈ ಕತೆಗಳನ್ನು ಓದಿದ ಕ್ರಮ ನನ್ನನ್ನು ಅಚ್ಚರಿಗೊಳಿಸಿತು.

‘ಡಿಸೈನರ್ ಒಬ್ಬ ಟ್ರಾನ್ಸ್‌ಲೇಟರ್’ ಎನ್ನುವ ಅಹ್ಲಾವತ್‌ಗೆ,

‘ಡಿಸೈನರ್ ಕೇವಲ ಅಲಂಕಾರಪಟುವಲ್ಲ’ ಎಂಬ ನಂಬಿಕೆ. ಬಾನು ಮುಷ್ತಾಕರ ಕತೆಗಳನ್ನು ಅನುವಾದಿಸಿದ ದೀಪಾ ಭಾಸ್ತಿ ಒಮ್ಮೆ ಅಹ್ಲಾವತ್ ತಲೆಯಲ್ಲಿ ಬಿತ್ತಿದ ದಾಳಿಂಬೆ ಬೀಜಗಳ ಐಡಿಯಾ ಅವರ ಕಲಾವಿದ ಪ್ರತಿಭೆಯಲ್ಲಿ ಮೊಳೆಯತೊಡಗಿತು: ‘ಹಾರ್ಟ್ ಲ್ಯಾಂಪ್’ನ ಕತೆಗಳು ನನ್ನಲ್ಲಿ ಉಳಿದವು: ಅವುಗಳ ಸದ್ದಿಲ್ಲದ ಶಕ್ತಿ, ಅವು ಸ್ತ್ರೀತನವನ್ನು ಶೋಧಿಸುವ ರೀತಿ, ಪ್ರೀತಿ, ಕಳೆದುಕೊಂಡ ಸಂಗತಿಗಳು, ಸಂಪ್ರದಾಯದ ಭಾರ... ಎಲ್ಲವೂ ನನ್ನೊಳಗೆ ಉಳಿದವು. ಪ್ರತಿದಿನ ಕಾಣುವ ಚಿತ್ರಗಳ ಬಗ್ಗೆ ಬಾನು ಮುಷ್ತಾಕ್ ಕತೆಗಳಲ್ಲಿ ಎಷ್ಟೊಂದು ಕೋಮಲತೆಯಿತ್ತು; ಅವರ ಪಾತ್ರಗಳ ಮೌನದಲ್ಲಿ ಎಷ್ಟೊಂದು ಶಕ್ತಿಯಿತ್ತು! ನನ್ನ ಮನಸ್ಸು ಮತ್ತೆ ಮತ್ತೆ ದಾಳಿಂಬೆಯ ಪ್ರತಿಮೆಗೆ ಮರಳುತ್ತಿತ್ತು. ಅವುಗಳ ದಿಟ್ಟ, ಪೂರ್ಣ ಜೀವಂತಿಕೆ, ಆದರೆ ಅದೇ ವೇಳೆಗೆ ಅವುಗಳ ತಾತ್ಕಾಲಿಕತೆ, ನಶ್ವರತೆ...’

ಅಹ್ಲಾವತ್ ನೋಟಗಳು ಲೇಖಕ-ಲೇಖಕಿ-

ಕಲಾವಿದ-ಕಲಾವಿದೆ-ಪ್ರಕಾಶಕ-ಪ್ರಕಾಶಕಿ

-ಓದುಗ-ಓದುಗಿ ಎಲ್ಲರನ್ನೂ ಎಜುಕೇಟ್ ಮಾಡಬಲ್ಲವು:

‘ಬುಕ್ ಕವರ್ ಬರಿ ಪ್ಯಾಕೇಜಿಂಗ್ ಅಂತ ನಾನು ತಿಳಿದಿಲ್ಲ. ಅದು ತನ್ನದೇ ಆದ ಸ್ಟ್ರಕ್ಚರ್-ಐಡೆಂಟಿಟಿ ಇರುವ ಪ್ರಕ್ರಿಯೆ. ಇವೆರಡೂ ಸೇರಿ ಕೃತಿ ಬರೆದವರ ಅರ್ಥ, ಸಂದೇಶಗಳಿಗೆ ಆಕಾರ ಕೊಟ್ಟು, ಕೃತಿಯೊಳಗಿನ ಶಬ್ದಗಳಿಗೆ ಒಂದು ಮುಖ ಕೊಡುತ್ತವೆ. ಇದು ನಾವು ಪುಸ್ತಕ ತೆರೆಯುವ ಮೊದಲೇ ಕಾಣುವ ಮುಖ. ಪುಸ್ತಕ ತೆರೆಯುವ ಆ ಗಳಿಗೆಯಲ್ಲಿ ಮುಖಪುಟಕ್ಕೆ ನಿರ್ಣಾಯಕ ಪಾತ್ರವಿದೆ. ಅದು ಪುಸ್ತಕ ಓದುವವರಲ್ಲಿ ಪ್ರತಿಧ್ವನಿ ಪಡೆಯಬೇಕು. ಆಹ್ವಾನಿಸಬೇಕು. ಪುಸ್ತಕ ಓದಲು ಒತ್ತಾಯಿಸಬೇಕು. ಎಲ್ಲವೂ ಪುನರಾವರ್ತನೆಯಾಗುವ ಈ ಕಾಲದಲ್ಲಿ ವಿನ್ಯಾಸಕಾರ ಅತ್ಯಂತ ವಿಭಿನ್ನವಾಗಿಯೇ ಯೋಚಿಸಬೇಕಾಗುತ್ತದೆ; ತನ್ನೊಳಗಿನ ಪಿಸುದನಿಯನ್ನು ಕೇಳಿಸಿಕೊಂಡು ರಿಸ್ಕ್ ತೆಗೆದುಕೊಳ್ಳಬೇಕಾಗುತ್ತದೆ. ಅಲ್ಲಿ ಓದುವವರ ನಿರೀಕ್ಷೆಗೆ ಮೀರಿದ್ದನ್ನು ಕೊಡುವುದು ಅನಿವಾರ್ಯ.’

‘ಹಾರ್ಟ್ ಲ್ಯಾಂಪ್’ ಕೃತಿ ಮರುಮುದ್ರಣವಾದಾಗಲೆಲ್ಲ ಅಹ್ಲಾವತ್ ಮೂಲದ ದಾಳಿಂಬೆ ಪ್ರತಿಮೆಯನ್ನು ಬೇರೆ ಬೇರೆ ಥರದಲ್ಲಿ ಬಳಸಿದರು: ‘‘ಒಂದು ಪ್ರಕಾಶನ ಸಂಸ್ಥೆಯಲ್ಲಿ ಮುಖಪುಟ ವಿನ್ಯಾಸ ಎನ್ನುವುದು ಹಲವರು ಸೇರಿ ಮಾಡುವ ಕೆಲಸ. ಎಡಿಟರುಗಳು, ಮಾರಾಟ ವಿಭಾಗ, ಕೃತಿ ಬರೆದವರು ಅನುವಾದಿಸಿದವರು... ಎಲ್ಲರ ಜೊತೆಗೂ ನಾವು ಕೆಲಸ ಮಾಡಬೇಕಾಗುತ್ತದೆ. ‘ಹಾರ್ಟ್ ಲ್ಯಾಂಪ್’ ಕೃತಿಯ ವಿನ್ಯಾಸದ ಸಂದರ್ಭದಲ್ಲಿ ದೀಪಾ ಭಾಸ್ತಿ ದಾಳಿಂಬೆ ಬೀಜದ ಐಡಿಯಾ ಸೂಚಿಸಿದ ಮೇಲೆ, ಕಥಾ ಸಂಕಲನದ ಹಸ್ತಪ್ರತಿ ಓದಿದಾಗ ಈ ಸಲಹೆಯ ಅರ್ಥ ಹಾಗೂ ಸೌಂದರ್ಯ ನನ್ನೊಳಗೆ ಇಳಿಯತೊಡಗಿದವು.’’

‘ಹಾರ್ಟ್ ಲ್ಯಾಂಪ್ ಮುಖಪುಟ ಬಾನು ಮುಷ್ತಾಕರ ಲೋಕಕ್ಕೆ ನನ್ನ ಸ್ಪಂದನ. ಈ ಕತೆಗಳಂತೆ ಈ ಮುಖಪುಟ ಕೂಡ ಓದುಗ ಓದುಗಿಯರನ್ನು ಮೆಲ್ಲಗೆ ಹಾಗೂ ಬಲವಾಗಿ ಆಹ್ವಾನಿಸುತ್ತದೆ ಎಂಬುದು ನನ್ನ ನಿರೀಕ್ಷೆ’ ಎನ್ನುವ ಆಹ್ಲಾವತ್, ನಂತರ ‘ಹಾರ್ಟ್ ಲ್ಯಾಂಪ್’ನ ಹತ್ತಾರು ಮುದ್ರಣಗಳಿಗೆ ಬಗೆಬಗೆಯ ಬಣ್ಣಗಳ ಕವರುಗಳನ್ನು ಮಾಡುತ್ತಲೇ ಇದ್ದಾರೆ.

ವಿನ್ಯಾಸ ಕಲಾವಿದ ಒಳ್ಳೆಯ ರೀಡರ್ ಕೂಡ ಆಗಿದ್ದರೆ ಅದು ಇನ್ನೂ ಚಂದ: ಆಗ ಇಡೀ ಕೆಲಸ ಆಳವಾಗಿ ತೊಡಗುವ, ಒಳ್ಳೆಯ ಫಲ ಕೊಡುವ, ಆನಂದದ ಕೆಲಸವಾಗುತ್ತದೆ. ಕಲಾವಿದ ಪುಸ್ತಕ ಓದಿದ್ದರೆ, ಇಡೀ ವಿನ್ಯಾಸ ರಚನೆಯ ಪಯಣದಲ್ಲಿ ನಡೆಯುವ ಚರ್ಚೆಗಳು, ಆಲೋಚನೆಗಳು ತೀರ್ಮಾನಗಳು, ಅರ್ಥಪೂರ್ಣವಾಗುತ್ತವೆ... ಇವೆಲ್ಲದರ ಬಗ್ಗೆ ಅಹ್ಲಾವತ್ ಸ್ಪಷ್ಟವಾಗಿದ್ದರು.

ಈ ಕಾಲದಲ್ಲಂತೂ ಪುಸ್ತಕ ಬಿಡುಗಡೆಯಾಗುವ ಮೊದಲೇ ಪುಸ್ತಕದ ಕವರುಗಳು ಡಿಜಿಟಲ್ ಮಾಧ್ಯಮದ ಮೂಲಕ ಹಲ ಬಗೆಯ ತೆರೆಗಳ ಮೇಲೆ ಮೂಡುತ್ತಿರುತ್ತವೆ. ಈ ಕಾಲ ಪುಸ್ತಕ ವಿನ್ಯಾಸಕಾರರಿಗೆ ಇನ್ನಷ್ಟು ಚಾಲೆಂಜಿಂಗ್ ಎಂಬುದನ್ನೂ ಅಹ್ಲಾವತ್ ಗಮನಿಸಿದ್ದಾರೆ: ‘ಈ ಸನ್ನಿವೇಶದಲ್ಲಿ ಜಾಣ ವಿನ್ಯಾಸಕಾರನೊಬ್ಬ ಡಿಜಿಟಲ್ ಮಾಧ್ಯಮದಲ್ಲಿ ಪರಿಣಾಮಕಾರಿಯಾಗಬಲ್ಲ ಅಕ್ಷರಗಳು, ಬಣ್ಣಗಳು, ಪ್ರತಿಮೆಗಳನ್ನು ಬಳಸುತ್ತಲೇ, ಕವರ್ ಮುದ್ರಣವಾದಾಗ ಕೂಡ ತನ್ನ ಸಮಗ್ರತೆಯನ್ನು ಕಾಪಾಡಿಕೊಳ್ಳುವ ಕಡೆ ಗಮನ ಕೊಡಬೇಕಾಗುತ್ತದೆ.’

ಒಬ್ಬ ಗಂಭೀರ ಹೆಣ್ಣು ಅಥವಾ ಗಂಡು ಸಂಗೀತ, ಸಾಹಿತ್ಯ, ನಟನೆ, ಚಿತ್ರಕಲೆ... ಹೀಗೆ ಯಾವುದೇ ರಂಗದಲ್ಲಿರಲಿ, ಅವರು ಮನದಾಳದಿಂದ ಪ್ರಾಮಾಣಿಕವಾಗಿ ಮಾತಾಡಿದಾಗ, ಗಂಭೀರವಾಗಿ ಸ್ಪಂದಿಸಿದಾಗ ಎಂಥ ತೂಕವಿರುತ್ತದೆ ಎಂಬುದನ್ನು ಅಹ್ಲಾವತ್ ಮಾತುಗಳು ಕೂಡ ಸೂಚಿಸುತ್ತವೆ. ಹಾಗೆಯೇ ಅವರ ಜೊತೆ ಅಷ್ಟೇ ತೂಕವಾಗಿ ಮಾತಾಡಿರುವ ಐಶ್ವರ್ಯ ಖೋಸ್ಲಾರ ಪ್ರಬುದ್ಧತೆ, ಸಿದ್ಧತೆ...

ನಮ್ಮ ಕನ್ನಡ ಪತ್ರಿಕೆಗಳಲ್ಲಿ ಇಂಥದ್ದಕ್ಕೆಲ್ಲ ಜಾಗವಿರದಿದ್ದರೆ ಹೋಗಲಿ, ಅವುಗಳ ಡಿಜಿಟಲ್ ಮಾಧ್ಯಮದಲ್ಲಾದರೂ

ವಿವಿಧ ಸಾಂಸ್ಕೃತಿಕ ಕ್ಷೇತ್ರಗಳ ಇಂಥ ತೂಕದ ಮಾತುಕತೆಗಳು ಬಂದರೆ ಸಂಸ್ಕೃತಿಗಳ ವಿಕಾಸಕ್ಕೆ ಘನತೆ ಬರಬಲ್ಲದು.

ಅಂದ ಹಾಗೆ, ಮುಖಪುಟದ ಕೊನೇ ಗಳಿಗೆಯ ಕೆತ್ತನೆಯಲ್ಲಿ ತೊಡಗುವ ಕಲಾವಿದ-ಲೇಖಕ-ಪ್ರಕಾಶಕ ಬಳಗ; ಕಲಾವಿದರ ಸಂಭಾವನೆಯನ್ನು ಏರಿಸದೆ ಇಪ್ಪತ್ತು ವರ್ಷಗಳ ಹಿಂದಿನ ಸಂಭಾವನೆಯನ್ನೇ ಕೊಸರಾಡಿ ಕೊಡುವ ಜನ; ಅಥವಾ ಪುಸ್ತಕದ ಮೇಲೆ ಕಣ್ಣಾಡಿಸದೇ ಮುಖಪುಟ ಮಾಡುವ ಮಂದಿ, ತಮ್ಮ ಐಡಿಯಾವನ್ನೇ ವಿನ್ಯಾಸಕಾರರ ಮೇಲೆ ಹೇರುವವರು ...ಎಲ್ಲರೂ ಅಹ್ಲಾವತ್ ಅವರ ಒಳನೋಟದ ನಿವೇದನೆಗಳನ್ನು, ತನಗೆ ತಾನೇ ಆಡಿಕೊಂಡಂತಿರುವ ಪಿಸುದನಿಗಳನ್ನು ಗಮನವಿಟ್ಟು ಕೇಳಿಸಿಕೊಂಡರೆ ಒಳ್ಳೆಯದಾಗುತ್ತದೆ.

ಎರಡು ವಾರಗಳ ಕೆಳಗೆ ಇಂಡಿಯನ್ ಎಕ್ಸ್‌ಪ್ರೆಸ್ ಡಿಜಿಟಲ್ ಆವೃತ್ತಿಯಲ್ಲಿ ಬಂದ ಈ ಸಂದರ್ಶನವನ್ನು ಬಾನು ಮುಷ್ತಾಕ್ ನೋಡಿರಲಿಕ್ಕಿಲ್ಲ ಎಂದು ಬೆಳಬೆಳಗ್ಗೆಯೇ ಫೋನ್ ಮಾಡಿ, ‘ಅಕ್ಕಾವ್ರಾ?’ ಎಂದೆ.

ಅಷ್ಟೊತ್ತಿಗಾಗಲೇ ಬಾನು ಮುಷ್ತಾಕ್ ಅಹ್ಲಾವತ್ ಮಾತುಗಳನ್ನು ಓದಿದ್ದರು.

‘ಅಹ್ಲಾವತ್ ಗುಂಜನ್ ನಿಮ್ಮ ಕತೆಗಳನ್ನ ಓದಿರೋ ರೀತಿಯೇ ಬೇರೆ! ನಾನು ಮೊದಲ ಸಲ ಈ ಪುಸ್ತಕ ನೋಡಿದಾಗ ಇದ್ಯಾಕೆ ಈ ದಾಳಿಂಬೆ ಬೀಜ... ಅಂದುಕೊಂಡು ಸುಮ್ಮನಾಗಿದ್ದೆ. ಈಗ ನೋಡಿದರೆ ಈ ಕವರ್ ಪೇಜಿನ ಪ್ರತಿಮೆಗಳು ಎಷ್ಟೊಂದು ಅರ್ಥಪೂರ್ಣ ಅನ್ನಿಸುತ್ತಿವೆ!’ ಎಂದೆ.

‘ಹೂಂ’ ಎಂದ ಬಾನು ಕೂಡ ಅಹ್ಲಾವತ್ ತಮ್ಮ ಕತೆಗಳನ್ನು ಓದಿದ ರೀತಿಗೆ ವಿಸ್ಮಯಗೊಂಡಿದ್ದರು.

ಒಂದು ಪ್ರತಿಭೆ ಮತ್ತೊಂದು ಪ್ರತಿಭೆಯನ್ನು ಭೇಟಿ ಮಾಡುವುದೆಂದರೆ ಇದೇ; ‘ಕವಿಗೆ ಕವಿ ಮಣಿವಂ’ ಎಂದು ನಮ್ಮ ಹಿರಿಯ ಕವಿಗಳು ಹೇಳಿದ್ದೂ ಇದೇ!

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ನಟರಾಜ್ ಹುಳಿಯಾರ್

contributor

Similar News