ದೇವರ ಸರ್ವಾಧಿಕಾರಕ್ಕೆ ಸವಾಲ್!
ಈಸ್ಕಿಲಸ್ನ ನಾಟಕ ನೆನಪಾದಾಗಲೆಲ್ಲ ಹಳೆಯ ಕನ್ನಡ ಸಿನೆಮಾ ‘ದೇವರ ಗೆದ್ದ ಮಾನವ’ ನೆನಪಾಗುತ್ತಿತ್ತು. ಆ ಸಿನೆಮಾದ ಪೋಸ್ಟರ್ನಲ್ಲಿ ರಾಜ್ಕುಮಾರ್ ಫೋಟೊ ನೋಡಿದ ನೆನಪು. ಮೊನ್ನೆ ಕುತೂಹಲದಿಂದ ಹತ್ತು ನಿಮಿಷ ಈ ಸಿನೆಮಾ ನೋಡಿದರೆ, ಅದು ಎಂದಿನಂತೆ ದೇವರು ಮನುಷ್ಯನನ್ನು ಪರಿವರ್ತಿಸುವ ಹಳಸಲು ಕತೆಯಂತೆಯೇ ಕಾಣತೊಡಗಿತು. ಇದರ ತಂಟೆಯೇ ಬೇಡವೆಂದು ದೇವರಿಗೆ ಸವಾಲೆಸೆದ ‘ಪ್ರೊಮಿಥ್ಯೂಸ್ ಬೌಂಡ್’ ನಾಟಕ ಓದಲು ಶುರು ಮಾಡಿದೆ. ಮತ್ತೆ ಈ ಹಿಂದೆ ಪ್ರೊಮಿಥ್ಯೂಸ್ ಕತೆ ಕೇಳಿದಾಗ ಹುಟ್ಟಿದ ಅದೇ ರೋಮಾಂಚನ! ಸ್ಯೂಸ್ ದೇವನಿಗೆ ಸವಾಲೆಸೆವ ಪ್ರೊಮಿಥ್ಯೂಸ್ನ ಒಂದೊಂದು ಬಂಡಾಯದ ಡೈಲಾಗಿಗೂ ಅದೇ ಮುಗ್ಧ ಪುಳಕ!
ಲೋಕದ ಶ್ರೇಷ್ಠ ಪ್ರಾಚೀನ ದುರಂತನಾಟಕಕಾರ ಈ ಸ್ಕಿಲಸ್ ಎರಡೂವರೆ ಸಾವಿರ ವರ್ಷಗಳ ಕೆಳಗೆ ಬರೆದ ಗ್ರೀಕ್ ನಾಟಕ ‘ಪ್ರೊಮಿಥ್ಯೂಸ್ ಬೌಂಡ್.’ ಈ ನಾಟಕಕ್ಕೆ ಮೂಲವಾದ ಪುರಾಣವನ್ನು ಗ್ರೀಕ್ ಜಾನಪದ ಈ ಮೊದಲೇ ಸೃಷ್ಟಿಸಿತ್ತು. ಜಗತ್ತಿನ ಸಾಹಿತ್ಯ ಕೃತಿಗಳಲ್ಲಿ ನನ್ನ ಅತ್ಯಂತ ಪ್ರಿಯವಾದ ಪಾತ್ರಗಳಲ್ಲಿ ಒಬ್ಬನಾದ ಪ್ರೊಮಿಥ್ಯೂಸ್ ನಮ್ಮೆಲ್ಲರ ಒಳಗಿರುವ, ನಾವು ಅದುಮಿಡಬಯಸುವ, ಅದುಮಿಟ್ಟಿರುವ, ಅಕಸ್ಮಾತ್ ಹೊರ ಚೆಲ್ಲುವ, ಒಬ್ಬ ಬಂಡುಕೋರ.
ಪ್ರೊಮಿಥ್ಯೂಸ್ ಗ್ರೀಕ್ ದೇವತೆ. ಕಾರ್ಲ್ ಮಾರ್ಕ್ಸ್ ಕೂಡ ಮೆಚ್ಚಿದ್ದ ಸ್ವತಂತ್ರ ಮನಸ್ಸಿನ ಬಂಡಾಯಗಾರ. ಗ್ರೀಕ್ ಪುರಾಣಗಳಲ್ಲಿ ಭಾರತೀಯ ಪುರಾಣಗಳ ದೇವೇಂದ್ರನಂತೆ ‘ದೇವತೆಗಳ ಹೆಡ್ ಆಫ್ ದಿ ಡಿಪಾರ್ಟ್ಮೆಂಟ್’ ಆಗಿರುವ ದೇವತೆ ಸ್ಯೂಸ್. ಇಂದ್ರನ ಹಾಗೆಯೇ ಕಂಡ ಕಂಡ ಹೆಣ್ಣುಗಳ ಮೇಲೆ ಕಣ್ಣು ಹಾಕುವವನು! ಪ್ರೊಮಿಥ್ಯೂಸ್ ಸ್ಯೂಸನ ಸರ್ವಾಧಿಕಾರಕ್ಕೆ ಕೇರ್ ಮಾಡುವವನಲ್ಲ. ಮಾನವಜೀವಿಗಳನ್ನು ಕಂಡರೆ ಪ್ರೀತಿ, ಕಾಳಜಿಯುಳ್ಳ ಪ್ರೊಮಿಥ್ಯೂಸ್ಗೆ ಮಾನವರ ಸಹಾಯಕ್ಕೆ ಧಾವಿಸುವುದು ಪ್ರಿಯವಾದ ಕೆಲಸ. ಆದರೆ ‘ಮಾನವರಿಗೆ ಸವಲತ್ತು ಕೊಟ್ಟರೆ ಅವರು ದೇವರಿಗೆ ವಿಧೇಯರಾಗಿರುವುದಿಲ್ಲ; ತಮಗೆ ಪೂಜೆ ಮಾಡುವುದಿಲ್ಲ’ ಎಂಬುದು ಸ್ಯೂಸ್ ಹಾಗೂ ಇನ್ನಿತರ ದೇವತೆಗಳ ಧೋರಣೆ.
ಇದೇ ಧೋರಣೆಯನ್ನು ಲೋಕದ ಲಕ್ಷಾಂತರ ಸಾಮಾಜಿಕ- ರಾಜಕೀಯ ನಾಯಕರುಗಳು ಕೂಡ ಅನುಸರಿಸುತ್ತಾ ಬಂದಿದ್ದಾರೆ! ಅಂದರೆ, ಮಾನವರನ್ನು ಕುರಿತ ಈ ಉಪೇಕ್ಷೆಗೆ ದೈವ ಪ್ರೇರಣೆಯೂ ಇದ್ದಂತಿದೆ! ‘ಮಾನವರಿಗೆ ಸಹಾಯ ಮಾಡಕೂಡದು’ ಎಂದು ಸ್ಯೂಸ್ ಪ್ರೊಮಿಥ್ಯೂಸ್ಗೆ
ಆಜ್ಞೆ ಮಾಡುತ್ತಾನೆ. ಆದರೆ ಮಾನವರಿಗೆ ಸಹಾಯ ಮಾಡಲು ಪ್ರೊಮಿಥ್ಯೂಸ್ ಬಳ್ಳಿಯ ಕಾಂಡದಲ್ಲಿ ಬೆಂಕಿ ಬಚ್ಚಿಟ್ಟುಕೊಂಡು ಬಂದು ಮಾನವರಿಗೆ ಕೊಡುತ್ತಾನೆ. ಬೆಂಕಿ ಮಾನವರ ಪ್ರಗತಿಯ ಹಾದಿ ತೆರೆಯುತ್ತದೆ. ಮಾನವರಿಗೆ ಸಹಾಯ ಮಾಡಿದ್ದಕ್ಕಾಗಿ ಸ್ಯೂಸ್ ಪ್ರೊಮಿಥ್ಯೂಸನಿಗೆ ಕ್ರೂರ ಶಿಕ್ಷೆಯನ್ನು ಆದೇಶಿಸುತ್ತಾನೆ. ಸ್ಯೂಸನ ಅಂತ್ಯ ಯಾರಿಂದ ಆಗುತ್ತದೆ ಎಂಬ ಗುಟ್ಟು ಪ್ರೊಮಿಥ್ಯೂಸ್ಗೆ
ಮಾತ್ರ ಗೊತ್ತಿದೆ. ಅವನನ್ನು ಹಿಂಸಿಸಿ ಈ ಗುಟ್ಟು ತಿಳಿಯಬೇಕೆಂದು ಸ್ಯೂಸನ ಕ್ರೌರ್ಯ ಕೂಡ ಈ ಶಿಕ್ಷೆಯ ಹಿನ್ನೆಲೆಯಲ್ಲಿದೆ.
‘ಪ್ರೊಮಿಥ್ಯೂಸ್ ಬೌಂಡ್’ ನಾಟಕದ ಆರಂಭದಲ್ಲಿ ಸ್ಯೂಸನ ಆಜ್ಞೆಯಂತೆ ಪ್ರೊಮಿಥ್ಯೂಸ್ನನ್ನು ಮರುಭೂಮಿಯಲ್ಲಿ ಕೋಡುಗಲ್ಲಿಗೆ ಕಟ್ಟಿಹಾಕಲು ಬಂದಿರುವ ಇಬ್ಬರು ದೂತರಲ್ಲಿ ಒಬ್ಬ ‘ಸ್ಯೂಸ್ ಮನಸ್ಸು ಬದಲಿಸಬಹುದೆ?’ ಎಂದು ಕೇಳುತ್ತಾನೆ.
ಅದಕ್ಕೆ ಮತ್ತೊಬ್ಬನ ಉತ್ತರ:
‘ಸ್ಯೂಸನ ಮನ ಬದಲಾಗುವ ಮಾತೇ ಇಲ್ಲ
ಹೊಸದಾಗಿ ಅಧಿಕಾರ ಪಡೆದವರ ಆಳ್ವಿಕೆಯಲ್ಲಿ ಹೃದಯವೆಂಬುದೇ ಇಲ್ಲ.’
ಇನ್ನು ಮುಂದೆ ತಾನು ಸಾವಿರ ವರ್ಷ ಇಲ್ಲೇ ಕೊಳೆಯಬೇಕು ಎಂಬ ಬೆದರಿಕೆ-ವಾಸ್ತವ ಎದುರಿಗಿದ್ದರೂ ಪ್ರೊಮಿಥ್ಯೂಸ್ಗೆ, ತಾನು ಮನುಷ್ಯನಿಗೆ ನಾಗರಿಕತೆಯ ಮೂಲವಾದ ಬೆಂಕಿ ಕೊಟ್ಟವನು; ಎಲ್ಲ ಕಲೆಗಳನ್ನೂ ಕಲಿಸಿಕೊಟ್ಟವನು ಎಂಬ ಸಾರ್ಥಕ ಭಾವ ಹಾಗೇ ಇದೆ. ‘ಸ್ಯೂಸನ ರಾಜ್ಯಭಾರಕ್ಕೆ ಕೊನೆ ಎಂಬುದೇ ಇಲ್ಲ, ಸ್ಯೂಸನಿಗೆ ಶರಣಾಗು’ ಎಂದು ಮೇಳದ ಮಂದಿ ಪ್ರೊಮಿಥ್ಯೂಸನಿಗೆ ಕಿವಿಮಾತು ಹೇಳುತ್ತಾರೆ. ದೇವರ ಸರ್ವಾಧಿಕಾರಕ್ಕೂ ಅಂತ್ಯವಿದೆ ಎನ್ನುತ್ತಾನೆ ಪ್ರೊಮಿಥ್ಯೂಸ್. ಸ್ಯೂಸನ ಸಕಲ ಶಸ್ತ್ರಾಸ್ತ್ರಗಳು ಒಟ್ಟಾದರೂ ಅವನ ನಾಚಿಕೆಗೇಡಿ ಅಂತ್ಯವನ್ನು, ಕೊನೆಯಿಲ್ಲದ ಪತನವನ್ನು ತಡೆಯಲಾರವು. ಸ್ಯೂಸನಿಗೆ ಹುಟ್ಟಿದ ಮಗುವೇ ಅವನನ್ನು ಮುಗಿಸುತ್ತದೆಂಬ ಗುಟ್ಟು ಬಲ್ಲ ಪ್ರೊಮಿಥ್ಯೂಸನ ಖಚಿತ ನಂಬಿಕೆಯಿದು. ಆದ್ದರಿಂದ ಅವನು ಎಲ್ಲದಕ್ಕೂ ಸಿದ್ಧ; ಸ್ಯೂಸನನ್ನು ಎದುರಿಸಲು ಬದ್ಧ.
ಕೊನೆಗೆ ಸ್ಯೂಸನ ಸಂದೇಶ ತರುವ ಹರ್ಮಿಸ್, ‘ಸ್ಯೂಸನನ್ನು ಕೊನೆಗಾಣಿಸುವ ಮಗು ಯಾರು ಹೇಳಿಬಿಡು. ನಿನ್ನ ಪ್ರಾಣ ಉಳಿಸಿಕೊ’ ಎಂದು ಬುದ್ಧಿ ಹೇಳುತ್ತಾನೆ. ‘ಸ್ಯೂಸ್ ನಿರ್ದಯ. ಅವನಿಗೆ ‘ಅಯ್ಯೋ’ ಎಂಬ ಪದವೇ ಗೊತ್ತಿಲ್ಲ’ ಎಂದು ಎಚ್ಚರಿಸುತ್ತಾನೆ. ‘ಕಾಲ ಎಲ್ಲವನ್ನೂ ಕಲಿಸುತ್ತದೆ’ ಎನ್ನುತ್ತಾನೆ ಪ್ರೊಮಿಥ್ಯೂಸ್. ನನ್ನ ಎದೆಯಲ್ಲಿರುವ ಗುಟ್ಟನ್ನು ಅವನಿಗೆ ಹೇಳಲು ‘ನಾನೇನು ಅವನ ಸಾಲಗಾರನೆ?’ ಎಂದು ಸವಾಲೆಸೆಯುತ್ತಾನೆ. ‘ಬೇಡಾ ನೋಡು, ಸ್ಯೂಸ್ ತನ್ನ ಸಿಡಿಲಿನಿಂದ ನಿನಗೆ ಬಾರಿಸುತ್ತಾನೆ. ಅವನ ಹದ್ದು ಬಂದು ನಿನ್ನ ಮೈಯ ಖಂಡಖಂಡಗಳನ್ನು ಕುಕ್ಕುತ್ತಲೇ ಇರುತ್ತದೆ’ ಎಂದು ಹರ್ಮಿಸ್ ಎಚ್ಚರಿಸುತ್ತಾನೆ.
ಅದಕ್ಕೆ ಪ್ರೊಮಿಥ್ಯೂಸನ ಉತ್ತರ:
ನಾನವನ ಶತ್ರು ಅವನು ನನಗೆ ಶತ್ರು
ಅವನ ಮಿಂಚಿನ ಕವಲುಗಳು ಮಿಂಚಲಿ
ಅವನ ಸ್ವರ್ಗದಿಂದ ಎರಗುವ ಸೀಳುವ ಸಿಡಿಲುಗಳು ನನ್ನ ಸೀಳಲಿ
ಭೀಕರ ಬಿರುಗಾಳಿ ಬೀಸಿ ಬರಲಿ, ಭೂಮಿಯ ತಳವೇ ಅಲ್ಲಾಡಲಿ
ರೊಚ್ಚಿಗೆದ್ದ ಅಲೆಗಳು ಮೇಲೇರಿ ತಾರೆಗಳ ತೋಯಿಸಲಿ
ನನ್ನ ಈ ಅಸಹಾಯಕ ಮೈ ರಸಾತಳಕ್ಕೆ ಎಸೆಯಲ್ಪಡಲಿ.
ಅಷ್ಟೇ!
ಅಲ್ಲಿಗೆ ಅವನ ಶಕ್ತಿ ಕೊನೆಯಾಗುತ್ತದೆ.
ನಾನಂತೂ ಸಾಯುವುದಿಲ್ಲ.
ಪ್ರೊಮಿಥ್ಯೂಸನನ್ನು ಬಗ್ಗಿಸಲಾಗದೆ ಹರ್ಮಿಸ್ ಹೊರಡುತ್ತಾನೆ. ಭೂಮಿ ಗರಗರ ತಿರುಗುತ್ತದೆ. ಸ್ವರ್ಗದಿಂದ ಸಿಡಿಲು ಎರಗುತ್ತದೆ. ದಶದಿಕ್ಕುಗಳಿಂದಲೂ ಗಾಳಿ ಮೊರೆಯುತ್ತದೆ. ಇವೆಲ್ಲವನ್ನೂ ನೋಡುವ ಪ್ರೊಮಿಥ್ಯೂಸ್ ತನ್ನ ಮೇಲೆರಗುವ ಶಕ್ತಿಗಳನ್ನು ನೋಡನೋಡುತ್ತಾ ಹೇಳುತ್ತಾನೆ: ‘ಓ ಪವಿತ್ರ ಮಾತೆಯೇ, ನೋಡು ನೋಡು! ಓ ಬೆಳಕಿನ ದೇವತೆಯೇ ನೋಡಲ್ಲಿ- ನ್ಯಾಯವನ್ನು ಅಧಿಕಾರ ಶಕ್ತಿ ನುಂಗಲು ಬರುತ್ತಿದೆ...’
ನಾಟಕ ಇದ್ದಕ್ಕಿದ್ದಂತೆ ಇಲ್ಲಿಗೆ ಕೊನೆಯಾಗುತ್ತದೆ. ಇದರಾಚೆಗೂ ನಾಟಕ ಇದ್ದಂತಿದೆ; ಆದರೆ ಆ ಪುಟಗಳು ಸಿಕ್ಕಿಲ್ಲ. ಇರುವ ಕೆಲವೇ ಪುಟಗಳಲ್ಲಿ ಈ ನಾಟಕ ದೇವರ ಸರ್ವಾಧಿಕಾರದ ವಿರುದ್ಧ ಪ್ರೊಮಿಥ್ಯೂಸನ ಬಂಡಾಯದ ರೋಮಾಂಚಕ ಕತೆ ಹೇಳುತ್ತದೆ; ತನ್ನ ಕಾಲದ ರಾಜರ ಸರ್ವಾಧಿಕಾರದ ವಿರುದ್ಧದ ಬಂಡಾಯವನ್ನೂ, ಎಲ್ಲ ಕಾಲದಲ್ಲೂ ಸರ್ವಾಧಿಕಾರಿಗಳಿಗೆ ಮಣಿಯದ ಮಾನವನ ಅದಮ್ಯ ಚೈತನ್ಯವನ್ನೂ ಬಿಂಬಿಸುತ್ತದೆ.
ಈಸ್ಕಿಲಸ್ನ ನಾಟಕಗಳ ಸಂಪುಟಕ್ಕೆ ಮುನ್ನುಡಿ ಬರೆದ ಸಂಪಾದಕನೊಬ್ಬ ‘ದೈವಭಕ್ತ ಈಸ್ಕಿಲಸ್ ಈ ದೈವವಿರೋಧದ ನಾಟಕವನ್ನು ಹೇಗೆ ಬರೆದ!’ ಎಂದು ಅಚ್ಚರಿಪಡುತ್ತಾನೆ. ಇದನ್ನು ಓದಿದಾಗ, ಭಾರತದಂತೆಯೇ ಪಶ್ಚಿಮದಲ್ಲೂ ಸೋಮಾರಿ ಊಹೆಗಳನ್ನು ಮಾಡುವ ದಡ್ಡ ಸಂಪಾದಕರು, ದಡ್ಡ ವಿಮರ್ಶಕರಿದ್ದಾರೆ ಎಂದು ಸಮಾಧಾನವಾಯಿತು!
ಇಲ್ಲಿ ನೆನಪಿಡಬೇಕಾದ ಮಾತು: ಲೇಖಕಿ ಅಥವಾ ಲೇಖಕ ಎರಡೂವರೆ ಸಾವಿರ ವರ್ಷದ ಹಿಂದೆಯೇ ಬರೆಯಲಿ, ಇಪ್ಪತ್ತೊಂದನೆಯ ಶತಮಾನದಲ್ಲೇ ಬರೆಯಲಿ, ಅವರು ತಮ್ಮ ಚರ್ಮ ಮೀರಿ ಬರೆದಾಗ ಮಾತ್ರ, ತಮ್ಮ ಮೇಲೆ ಹೇರಲಾದ ಪರಂಪರಾಗತ ನಂಬಿಕೆಗಳ ಸರ್ವಾಧಿಕಾರವನ್ನು ಮೀರಿ, ಪ್ರಶ್ನಿಸಿ ಬರೆದಾಗ ಮಾತ್ರ ಸ್ವತಂತ್ರ ಬರವಣಿಗೆ ಹುಟ್ಟುವುದು! ಅದು ದೈವ ಸರ್ವಾಧಿಕಾರವಿರಲಿ, ದೇಶದ ರಾಷ್ಟ್ರಾಧ್ಯಕ್ಷ, ಪ್ರಧಾನಮಂತ್ರಿ, ಮುಖ್ಯಮಂತ್ರಿ ಯಾರದೇ ಸರ್ವಾಧಿಕಾರವಿರಲಿ, ಕೊನೇ ಪಕ್ಷ ಲೇಖಕನಿಗೆ, ಲೇಖಕಿಗೆ ತನ್ನ ಮನದಾಳದಲ್ಲಾದರೂ ಅದಕ್ಕೆ ವಿರೋಧವಿರದಿದ್ದರೆ ನಿಜವಾದ ಬರವಣಿಗೆ ಹೇಗೆ ಹುಟ್ಟೀತು? ನಾಟಕಕಾರ ಅಥವಾ ಲೇಖಕಿ ತನ್ನ ಕಾಲದ ಜಡ-ಸಿದ್ಧ, ಜನಜನಿತ ನಂಬಿಕೆಗಳನ್ನು ಮೀರಿ ಬರೆದರೆ ತಾನೇ ಸತ್ಯಶೋಧಕರಾಗುವುದು! ಪಿತೃ ಸರ್ವಾಧಿಕಾರವನ್ನು ವಿರೋಧಿಸುವ ಸ್ತ್ರೀವಾದಿಗೆ ದೈವ ಸರ್ವಾಧಿಕಾರದ ಬಗ್ಗೆ ವಿರೋಧವಿರದಿದ್ದರೆ ಸ್ವತಂತ್ರ ಸ್ತ್ರೀಪ್ರಜ್ಞೆ ಎಲ್ಲಿಂದ ಹುಟ್ಟೀತು? ಧಾರ್ಮಿಕ ಲೋಕದಲ್ಲಿರುವುದೂ ಪುರುಷ ದೈವದ ಸರ್ವಾಧಿಕಾರದ ಅಬ್ಬರವೇ ತಾನೆ!
ಹೀಗೆ ದೇವರ ಸರ್ವಾಧಿಕಾರವನ್ನು, ದುರಂತ ನಾಟಕಗಳಲ್ಲಿ ರಾಜರ ಹಮ್ಮು, ಬಿಮ್ಮು, ಪತನ, ದುರಂತಗಳ ಕತೆಯನ್ನು; ವಿನೋದ ನಾಟಕಗಳಲ್ಲಿ ರಾಜರ ಕೊಬ್ಬಿನ ಅಣಕವನ್ನು ಮಾಡಿದ ಗ್ರೀಕ್ ನಾಟಕಕಾರರು ಎರಡೂವರೆ ಸಾವಿರ ವರ್ಷಗಳ ಹಿಂದೆಯೇ ಪ್ರಜಾಪ್ರಭುತ್ವದ ಬೀಜಗಳನ್ನು ಬಿತ್ತತೊಡಗಿದ್ದರು. ದೇವರ ವಿರುದ್ಧದ ಬಂಡಾಯಕ್ಕೂ, ಪ್ರತ್ಯಕ್ಷ ದೇವತೆಗಳೆಂದು ಮೆರೆಯುತ್ತಿದ್ದ ರಾಜರ ವಿರುದ್ಧ ಬಂಡಾಯಕ್ಕೂ, ಪಶ್ಚಿಮದ ಡೆಮಾಕ್ರಸಿಯ ಹುಟ್ಟಿಗೂ ಸಂಬಂಧವಿದೆ. ಅಂದರೆ, ಧಾರ್ಮಿಕ, ರಾಜಕೀಯ, ಸಾಮಾಜಿಕ ಮುಂತಾಗಿ ಯಾವುದೇ ಬಗೆಯ ಅಥಾರಿಟಿಯನ್ನು ಪ್ರಶ್ನಿಸುವ ಬಂಡಾಯಕ್ಕೂ, ಡೆಮಾಕ್ರಸಿಯ ಹುಟ್ಟಿಗೂ ಸಂಬಂಧವಿದೆ. ಚರಿತ್ರೆಯ ಈ ಮಹತ್ವದ ತಿರುವುಗಳನ್ನು, ಸತ್ಯಗಳನ್ನು, ಮೈಲಿಗಲ್ಲುಗಳನ್ನು ನಾವು ಮರೆಯಬಾರದು.
ಗ್ರೀಕ್ ದುರಂತ ನಾಟಕಗಳು ದೇವರ, ರಾಜರ ಕತೆಗಳನ್ನು ಕೇಂದ್ರದಲ್ಲಿಟ್ಟುಕೊಂಡು ಹೇಳುತ್ತಾ, ವಿಧಿಯ ಕೈವಾಡ ಸೂಚಿಸುತ್ತಿದ್ದರೂ, ಜನರ ವಿವೇಚನೆಯನ್ನು ಬಡಿದೆಬ್ಬಿಸುವ ಪ್ರಶ್ನೆಗಳನ್ನು ಸೃಷ್ಟಿಸುತ್ತಿದ್ದವು. ಈ ಥರದ ಪ್ರಾಚೀನ ನಾಟಕಗಳಿಗೂ ಧಾರ್ಮಿಕ ಕತೆಗಳ ಮೂಲಕ ಜನರನ್ನು ಮಾನಸಿಕ ಗುಲಾಮಗಿರಿಗೆ ತಳ್ಳಿದ ಪ್ರಾಚೀನ ಸಾಹಿತ್ಯಕ್ಕೂ ಇರುವ ವ್ಯತ್ಯಾಸವನ್ನು ಗಮನಿಸಿ. ಅಂಬೇಡ್ಕರ್, ಪೆರಿಯಾರ್ ಈ ಅಂಶಗಳನ್ನು ಖಚಿತವಾಗಿ ಗುರುತಿಸಿ ವೈಚಾರಿಕತೆಯ ಘಟ್ಟವನ್ನು ಉದ್ಘಾಟಿಸಿದರು. ಈಚಿನ ವರ್ಷಗಳ ಕನ್ನಡ ಸಾಹಿತ್ಯ ಹಾಗೂ ಸಾಹಿತ್ಯಾಧ್ಯಯನಗಳ ಕೆಲವು ಧಾರೆಗಳು ಹಿಮ್ಮುಖವಾಗಿ ಚಲಿಸುತ್ತಾ ಜನಪದ ದೇವತೆಗಳು, ಸುಡುಗಾಡು ಸಿದ್ಧರ ಕೀರ್ತನೆಯಲ್ಲಿ ತೊಡಗಿ ಕರ್ನಾಟಕದಲ್ಲಿ ಸೃಷ್ಟಿಯಾಗಿದ್ದ ಅಷ್ಟಿಷ್ಟು ವೈಚಾರಿಕತೆಯನ್ನೂ ಹಿನ್ನೆಲೆಗೆ ಸರಿಸತೊಡಗಿವೆ ಎಂದು ನನಗನ್ನಿಸುತ್ತಿದೆ.
ಕ್ಯಾಪಿಟಲಿಸಂ ಹಾಗೂ ಜಮೀನ್ದಾರಿ ಪ್ರವೃತ್ತಿಗಳ ಅಥಾರಿಟಿಯನ್ನು ವೈಜ್ಞಾನಿಕವಾಗಿ ವಿಶ್ಲೇಷಿಸಿ, ವಿರೋಧಿಸಿದ ಮಾರ್ಕ್ಸ್ಗೆ, ಎಂಥ ಅಪಾಯ ಎದುರಾದರೂ ಅಸಹಾಯಕ ಮಾನವರ ನೆರವಿಗೆ ಬರುವ ಪ್ರೊಮಿಥ್ಯೂಸ್ ಪ್ರಿಯವಾದದ್ದು ಅಚ್ಚರಿಯಲ್ಲ. ಪ್ರೊಮಿಥ್ಯೂಸ್ ದೈವದ ಸರ್ವಾಧಿಕಾರವನ್ನು ವಿರೋಧಿಸಿದ್ದನೆಂಬ ಅಂಶ ಕೂಡ ನಾಸ್ತಿಕ ಮಾರ್ಕ್ಸ್ಗೆ ಪ್ರಿಯವಾಗಿರಬಹುದು. ಮಾರ್ಕ್ಸ್ನನ್ನು ಪ್ರೊಮೀಥಿಯಸ್ ಆಗಿ ತೋರಿಸುವ 1843ರ ಒಂದು ಪೇಂಟಿಂಗ್ ಮಾರ್ಕ್ಸ್ನಲ್ಲಿ ಕೂಡ ಪ್ರೊಮೀಥಿಯಸ್ ಎಳೆ ಇತ್ತು ಎಂಬುದನ್ನು ಸೂಚಿಸುತ್ತದೆ.