ದುಬೈ: ಆರೋಗ್ಯಕರ ಜೀವನಶೈಲಿ, ದೈಹಿಕ ಕ್ಷಮತೆ ಹಾಗೂ ಸಾಮಾಜಿಕ ಒಗ್ಗಟ್ಟಿನ ಸಂದೇಶ ಸಾರುವ ಉದ್ದೇಶದಿಂದ ದುಬೈನ ವಿಶ್ವವಿಖ್ಯಾತ ಶೇಖ್ ಝಾಯೆದ್ ರಸ್ತೆಯಲ್ಲಿ ರವಿವಾರ ನಡೆದ ಪ್ರತಿಷ್ಠಿತ ‘ದುಬೈ ರನ್ 2026’ರಲ್ಲಿ ‘ದುಬೈ ಬ್ಯಾರೀಸ್’ ಸಮುದಾಯದ ಸಾವಿರಾರು ಸದಸ್ಯರು ಅತ್ಯುತ್ಸಾಹದಿಂದ ಪಾಲ್ಗೊಂಡು ಗಮನ ಸೆಳೆದರು.

ಸಾವಿರಾರು ಸದಸ್ಯರ ಸಾಮೂಹಿಕ ಭಾಗವಹಿಸುವಿಕೆಯು ದುಬೈನ ಸಾರ್ವಜನಿಕ ವೇದಿಕೆಯಲ್ಲಿ ಬ್ಯಾರೀಸ್ ಸಮುದಾಯದ ಒಗ್ಗಟ್ಟು, ಸಂಘಟನಾ ಸಾಮರ್ಥ್ಯ ಹಾಗೂ ಆರೋಗ್ಯದ ಬಗೆಗಿನ ಕಾಳಜಿಯನ್ನು ಪ್ರತಿಬಿಂಬಿಸಿತು. ದುಬೈನಲ್ಲಿ ಕನ್ನಡಿಗರ ಉಪಸ್ಥಿತಿ ಮತ್ತು ಸಂಘಟನಾ ಶಕ್ತಿಯನ್ನು ಎದ್ದು ಕಾಣುವಂತೆ ಮಾಡಿದ ಈ ಪ್ರಯತ್ನಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಯಿತು.

ಯುಎಇಯ ವಿವಿಧ ಭಾಗಗಳಲ್ಲಿ ನೆಲೆಸಿರುವ ಬ್ಯಾರೀಸ್ ಸಮುದಾಯದ ಪುರುಷರು, ಮಹಿಳೆಯರು, ಯುವಕರು ಹಾಗೂ ಮಕ್ಕಳು ಸೇರಿದಂತೆ ಎಲ್ಲ ವಯೋಮಾನದವರು ‘ದುಬೈ ಬ್ಯಾರೀಸ್’ ವೇದಿಕೆಯಡಿ ಒಂದಾಗಿ ಓಟದಲ್ಲಿ ಪಾಲ್ಗೊಂಡಿದ್ದು ಈ ಬಾರಿಯ ವಿಶೇಷ ಆಕರ್ಷಣೆಯಾಗಿತ್ತು. ನೀಲಿ ಬಣ್ಣದ ಏಕರೂಪದ ಟಿ-ಶರ್ಟ್‌ಗಳನ್ನು ಧರಿಸಿ, ಸಮುದಾಯದ ಒಗ್ಗಟ್ಟು, ಶಿಸ್ತು ಮತ್ತು ಸಾಮೂಹಿಕ ಉತ್ಸಾಹವನ್ನು ಪ್ರತಿಬಿಂಬಿಸುತ್ತಾ ರಸ್ತೆಯುದ್ದಕ್ಕೂ ಹೆಜ್ಜೆ ಹಾಕಿದ ಬ್ಯಾರೀಸ್ ಸದಸ್ಯರ ತಂಡವು ದುಬೈ ರನ್‌ನ ಕ್ರೀಡಾ ಸಂಭ್ರಮಕ್ಕೆ ವಿಶೇಷ ಮೆರುಗು ನೀಡಿತು.

ದುಬೈ ರನ್‌ನಲ್ಲಿ ಸಮುದಾಯದ ಈ ಸಾಮೂಹಿಕ ಭಾಗವಹಿಸುವಿಕೆಯು ದುಬೈನ ಬಹುಸಂಸ್ಕೃತಿಯ ಸಮಾಜದಲ್ಲಿ ಬ್ಯಾರೀಸ್ ಸಮುದಾಯದ ಸಕ್ರಿಯ ಪಾಲ್ಗೊಳ್ಳುವಿಕೆ ಹಾಗೂ ಸಾಮಾಜಿಕ ಬದ್ಧತೆಯನ್ನು ಮತ್ತೊಮ್ಮೆ ಎತ್ತಿ ತೋರಿಸಿತು.

ದುಬೈ ರನ್‌ನ ವಿಶೇಷತೆಯೆಂದರೆ, ನಗರದ ಸದಾ ವಾಹನ ಸಂಚಾರದಿಂದ ಗಿಜಿಗುಡುವ ಶೇಖ್ ಝಾಯೆದ್ ರಸ್ತೆಯು ಈ ದಿನ ವಾಹನಮುಕ್ತವಾಗಿ ಬೃಹತ್ ಓಟದ ಹಾದಿಯಾಗಿ ಪರಿವರ್ತನೆಗೊಂಡಿತ್ತು. ಬೆಳಗ್ಗೆ 6.30ಕ್ಕೆ ಆರಂಭಗೊಂಡ ಓಟದಲ್ಲಿ ಲಕ್ಷಾಂತರ ಮಂದಿ ಓಟಗಾರರು, ಜಾಗಿಂಗ್ ಪ್ರಿಯರು ಹಾಗೂ ಕುಟುಂಬ ಸಮೇತ ಭಾಗವಹಿಸಿದವರು ನಗರದ ಪ್ರಮುಖ ಹೆಗ್ಗುರುತುಗಳ ನಡುವೆ ಹೆಜ್ಜೆ ಹಾಕಿದರು.

ಈ ಬಾರಿಯ ದುಬೈ ರನ್‌ನಲ್ಲಿ ಭಾಗವಹಿಸುವವರಿಗೆ 5 ಕಿ.ಮೀ. ಮತ್ತು 10 ಕಿ.ಮೀ. ಉದ್ದದ ಎರಡು ಮಾರ್ಗಗಳನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶವಿತ್ತು. ಬ್ಯಾರೀಸ್ ಸಮುದಾಯದ ಸದಸ್ಯರು 5 ಕಿ.ಮೀ. ಮಾರ್ಗದಲ್ಲಿ ಸಾಮೂಹಿಕವಾಗಿ ಪಾಲ್ಗೊಂಡರು.

ಸಾಮೂಹಿಕ ನಮಾಝ್; ಒಂದಾಗಿ ಪ್ರಯಾಣ ಬೆಳೆಸಿದ ಬ್ಯಾರೀಸ್ ಸದಸ್ಯರು :

‘ದುಬೈ ರನ್ 2026’ರಲ್ಲಿ ಭಾಗವಹಿಸಲು ನಿರ್ಧರಿಸಿದ್ದ ‘ದುಬೈ ಬ್ಯಾರೀಸ್’ ಸಮುದಾಯದ ಸದಸ್ಯರು ರವಿವಾರ ಮುಂಜಾನೆಯೇ ಸಕಲ ಸಿದ್ಧತೆಗಳೊಂದಿಗೆ ದುಬೈನ ಅಲ್ ಗರ್ಹೂದ್ ಮೆಟ್ರೋ ನಿಲ್ದಾಣದ ಎಕ್ಸಿಟ್ 2ರಲ್ಲಿ ಒಗ್ಗೂಡಿದರು. ಬಳಿಕ ಸಾಮೂಹಿಕವಾಗಿ ನಮಾಝ್ ನೆರವೇರಿಸಿ, ಅಲ್ಲಿಂದ ಮೆಟ್ರೋ ಮೂಲಕ ಶೇಖ್ ಝಾಯೆದ್ ರಸ್ತೆಯತ್ತ ಪ್ರಯಾಣ ಬೆಳೆಸಿದರು. ನಂತರ ಓಟದಲ್ಲಿ ಉತ್ಸಾಹದಿಂದ ಪಾಲ್ಗೊಂಡರು.

ಹಾಡು, ದಫ್ ಹಾಗೂ ಘೋಷಣೆಗಳೊಂದಿಗೆ ಸಂಭ್ರಮದ ಹೆಜ್ಜೆ :

ಹಿರಿಯರು, ಮಕ್ಕಳು ಹಾಗೂ ಕುಟುಂಬ ಸಮೇತ ಪಾಲ್ಗೊಂಡ ದುಬೈನ ಬ್ಯಾರೀಸ್ ಸಮುದಾಯದ ಸದಸ್ಯರು ಕನ್ನಡ ಮತ್ತು ಬ್ಯಾರಿ ಹಾಡುಗಳನ್ನು ಹಾಡುತ್ತ, ದಫ್ ಬಾರಿಸುತ್ತ, ಕನ್ನಡಪರ ಘೋಷಣೆಗಳನ್ನು ಕೂಗುತ್ತ ಸಂಭ್ರಮದಿಂದ ಹೆಜ್ಜೆ ಹಾಕಿದರು.

‘Proud of UAE’ ಬ್ಯಾನರ್, ಯುಎಇ ಧ್ವಜ ವಿಶೇಷ ಆಕರ್ಷಣೆ :

ಕಳೆದ ವರ್ಷ (2025)ದ ದುಬೈ ರನ್‌ನಲ್ಲಿ ಭಾರಿ ಗಮನ ಸೆಳೆದಿದ್ದ 30 ಮೀಟರ್ ಉದ್ದ ಹಾಗೂ 3 ಮೀಟರ್ ಅಗಲದ ಬೃಹತ್ ಯುಎಇ ರಾಷ್ಟ್ರಧ್ವಜವನ್ನು ಈ ಬಾರಿಯೂ ಹಿಡಿದು ಸಾಗುವ ಮೂಲಕ ‘ದುಬೈ ಬ್ಯಾರೀಸ್’ ಸದಸ್ಯರು ಎಲ್ಲರ ಗಮನ ಸೆಳೆದರು. ಇದರೊಂದಿಗೆ ಬೃಹತ್ ಗಾತ್ರದ ‘Proud of UAE’ ಬ್ಯಾನರ್ ಕೂಡ ವಿಶೇಷ ಆಕರ್ಷಣೆಯ ಕೇಂದ್ರಬಿಂದುವಾಗಿತ್ತು.

ಆರೋಗ್ಯ, ಒಗ್ಗಟ್ಟು, ಶಿಸ್ತು ಮತ್ತು ಸಮುದಾಯ ಬಾಂಧವ್ಯವನ್ನು ಬೆಸೆಯುವ ವೇದಿಕೆಯಾಗಿ ದುಬೈ ರನ್ ಬ್ಯಾರೀಸ್ ಸದಸ್ಯರಿಗೆ ಸ್ಮರಣೀಯ ಅನುಭವ ನೀಡಿತು. ಅರಬರ ನಾಡಿನಲ್ಲಿ ಕನ್ನಡಿಗರ, ಅದರಲ್ಲೂ ಬ್ಯಾರೀಸ್ ಸಮುದಾಯದ ಈ ಒಗ್ಗಟ್ಟಿನ ಹೆಜ್ಜೆ ದುಬೈನ ಕನ್ನಡಿಗರ ಸಮುದಾಯ ಚಟುವಟಿಕೆಗಳಲ್ಲಿ ಗಮನಾರ್ಹ ಅಧ್ಯಾಯವಾಗಿ ಗುರುತಿಸಿಕೊಳ್ಳುವಂತಾಯಿತು.

ದುಬೈ ರನ್‌ ನಲ್ಲಿ ದುಬೈ ಬ್ಯಾರೀಸ್‌ ನ ಹಿದಾಯತ್ ಅಡ್ಡೂರು, ಸಲೀಂ ಮೂಡಬಿದ್ರೆ, ಬಷೀರ್ ಕಿನ್ನಿಂಗಾರ್, ಮುಹಮ್ಮದ್ ಆಶಿಕ್, ಮುಸ್ತಾಕ್ ಕದ್ರಿ, ಸಮದ್ ಬಿರಾಲಿ, ಆಸಿಫ್ ಕಣ್ಣಂಗಾರ್, ಮುಹಮ್ಮದ್ ಇಕ್ರಂ ಮೂಳೂರು, ಸಂಶುದ್ದೀನ್ ಪಿಲಿಗೊಡು, ಯೂಸುಫ್ ಭಟ್ಕಳ್, ಮೂಸಾ ಪೆರುವಹಿ, ನವಾಝ್ ಬಜಾರ್, ಫಾರೂಕ್ ಇಂಗ್ಲೆಂಡ್, ಫಾರೂಕ್ ಮೂರ್ಜೆ, ನವಾಝ್ ಕೋಟೆಕಾರ್, ಅಕ್ಬರ್ ಕೊಣಾಜೆ, ಮಕ್ಬೂಲ್ ವಿಟ್ಲ, ಸನಾನ್ ಮೂಡಬಿದ್ರೆ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಎಂ.ಇಕ್ಬಾಲ್ ಉಚ್ಚಿಲ, ದುಬೈ

contributor