ಇಂಗ್ಲೆಂಡ್ ವಿರುದ್ಧ ಸರಣಿ | ಹೊಸ ಮುಖಗಳಿಗೆ ಮಣೆ ಹಾಕಿದ ಆಸ್ಟ್ರೇಲಿಯ
Photo Credit : PTI
ಮೆಲ್ಬರ್ನ್, ನ. 2: ಇಂಗ್ಲೆಂಡ್ ತಂಡದ ವಿರುದ್ಧ ಮುಂಬರುವ ಸೀಮಿತ ಓವರ್ ಗಳ ಕ್ರಿಕೆಟ್ ಸರಣಿಗೆ ಆಸ್ಟ್ರೇಲಿಯ ತಂಡವು ಹಲವು ಹೊಸ ಮುಖಗಳಿಗೆ ಮಣೆ ಹಾಕಿದೆ. ಯುವ ವೇಗದ ಬೌಲರ್ ಮಹ್ಲಿ ಬಿಯರ್ಡ್ಮನ್ ಹಾಗೂ ಆಲ್ರೌಂಡರ್ ಗಳಾದ ಜಾಕ್ ಎಡ್ವರ್ಡ್ಸ್ ಮತ್ತು ಲಿಯಾಮ್ ಸ್ಕಾಟ್ ಮೊದಲ ಬಾರಿ ಕರೆ ಪಡೆದಿದ್ದಾರೆ.
ಬ್ಯಾಟರ್ ಗಳಾದ ಒಲಿ ಪೀಕ್ ಹಾಗೂ ಜೇಕ್ ಫ್ರೆಸರ್-ಮೆಕ್ಗರ್ಕ್ ಕೂಡ ತಂಡವನ್ನು ಸೇರಿದ್ದಾರೆ. ಏಕದಿನ ಹಾಗೂ ಟಿ-20 ಎರಡೂ ತಂಡಗಳನ್ನು ಮಿಚೆಲ್ ಮಾರ್ಷ್ ನಾಯಕನಾಗಿ ಮುನ್ನಡೆಸಲಿದ್ದಾರೆ.
ಬಿಯರ್ಡ್ಮನ್, ಪೀಕ್, ಎಡ್ವರ್ಡ್ಸ್, ಸ್ಕಾಟ್, ನಿಖಿಲ್ ಚೌಧರಿ ಹಾಗೂ ಜೊಯೆಲ್ ಡೇವಿಸ್ ಇತ್ತೀಚೆಗೆ ಸೀಮಿತ ಓವರ್ ಗಳ ಪಂದ್ಯಕ್ಕೆ ಪಾದಾರ್ಪಣೆಗೈದಿದ್ದರು. ಲಚ್ಲನ್ ಶಾ ಹಾಗೂ ಸ್ಯಾಮ್ ಹಾರ್ಪರ್ ತಂಡದಲ್ಲಿರುವ ಹೊಸ ಮುಖಗಳಾಗಿದ್ದಾರೆ.
ಆಸ್ಟ್ರೇಲಿಯ ತಂಡವು ಸ್ವದೇಶದಲ್ಲಿ ನ. 13ರಿಂದ 18ರವರೆಗೆ ಇಂಗ್ಲೆಂಡ್ ವಿರುದ್ಧ ಮೂರು ಏಕದಿನ ಪಂದ್ಯಗಳನ್ನು ಆಡಲಿದೆ. ಆನಂತರ ನ. 21ರಿಂದ ಡಿಸೆಂಬರ್ 2ರವರೆಗೆ ಐದು ಪಂದ್ಯಗಳ ಟಿ-20 ಸರಣಿಯನ್ನಾಡಲಿದೆ. ಈ ಪಂದ್ಯಗಳು 2027ರ ಏಕದಿನ ವಿಶ್ವಕಪ್ಗೆ ಆಸ್ಟ್ರೇಲಿಯದ ಯುವ ಆಟಗಾರರು ಆಯ್ಕೆಯಾಗಲು ಇದೊಂದು ಅವಕಾಶವಾಗಿದೆ.
ನ್ಯೂಝಿಲ್ಯಾಂಡ್ ವಿರುದ್ಧದ ಟೆಸ್ಟ್ ಸರಣಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ವೇಗದ ಬೌಲರ್ ಗಳಾದ ಪ್ಯಾಟ್ ಕಮಿನ್ಸ್, ಮಿಚೆಲ್ ಸ್ಟಾರ್ಕ್ ಹಾಗೂ ಜೋಶ್ ಹೇಝಲ್ವುಡ್ಗೆ ಏಕದಿನ ಹಾಗೂ ಟಿ-20 ತಂಡಗಳಿಂದ ವಿಶ್ರಾಂತಿ ನೀಡಲಾಗಿದೆ.
ಟ್ರಾವಿಸ್ ಹೆಡ್, ಅಲೆಕ್ಸ್ ಕ್ಯಾರಿ, ಮ್ಯಾಟ್ ರೆನ್ಶಾ, ಜೋಶ್ ಇಂಗ್ಲಿಸ್, ಕೂಪರ್ ಕಾನಲಿ ಹಾಗೂ ಕ್ಯಾಮರೂನ್ ಗ್ರೀನ್ ಏಕದಿನ ತಂಡದಲ್ಲಿದ್ದಾರೆ. ಆದರೆ ಅವರು ಟಿ-20 ತಂಡದಲ್ಲಿಲ್ಲ.
ನ್ಯೂಝಿಲ್ಯಾಂಡ್ ವಿರುದ್ಧದ ಸರಣಿಯ ನಂತರ ಆಸ್ಟ್ರೇಲಿಯವು ಐದು ಪಂದ್ಯಗಳ ಟೆಸ್ಟ್ ಸರಣಿಗಾಗಿ ಭಾರತಕ್ಕೆ ಪ್ರಯಾಣಿಸಲಿದೆ. ಆ ನಂತರ ಮೆಲ್ಬರ್ನ್ ನಲ್ಲಿ ಇಂಗ್ಲೆಂಡ್ ವಿರುದ್ಧ 150ನೇ ಟೆಸ್ಟ್ ವಾರ್ಷಿಕೋತ್ಸವವನ್ನು ಆಚರಿಸಲಿದೆ.
►ಆಸ್ಟ್ರೇಲಿಯ ತಂಡಗಳು
ಏಕದಿನ: ಮಿಚೆಲ್ ಮಾರ್ಷ್ (ನಾಯಕ), ಕ್ಸೇವಿಯರ್ ಬಾರ್ಟ್ಲೆಟ್, ಮಹ್ಲಿ ಬಿಯರ್ಡ್ಮನ್, ಅಲೆಕ್ಸ್ ಕ್ಯಾರಿ, ಕೂಪರ್ ಕಾನಲಿ, ಜಾಕ್ ಎಡ್ವರ್ಡ್ಸ್, ಕ್ಯಾಮರೂನ್ ಗ್ರೀನ್, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್, ಸ್ಪೆನ್ಸರ್ ಜಾನ್ಸನ್, ಒಲಿ ಪೀಕ್, ಮ್ಯಾಟ್ ರೆನ್ಶಾ, ಲಿಯಾಮ್ ಸ್ಕಾಟ್, ಝಂಪಾ.
ಟಿ-20: ಮಿಚೆಲ್ ಮಾರ್ಷ್ (ನಾಯಕ), ಕ್ಸೇವಿಯರ್ ಬಾರ್ಟ್ಲೆಟ್, ಮಹ್ಲಿ ಬಿಯರ್ಡ್ಮನ್, ನಿಖಿಲ್ ಚೌಧರಿ, ಟಿಮ್ ಡೇವಿಡ್, ಜೊಯೆಲ್ ಡೇವಿಸ್, ಜಾಕ್ ಎಡ್ವರ್ಡ್ಸ್, ನಾಥನ್ ಎಲ್ಲಿಸ್, ಜೇಕ್ ಫ್ರೆಸರ್-ಮೆಕ್ಗರ್ಕ್, ಸ್ಯಾಮ್ ಹಾರ್ಪರ್, ಸ್ಪೆನ್ಸರ್ ಜಾನ್ಸನ್, ಮಿಚೆಲ್ ಓವನ್, ಲಚ್ಲನ್ ಶಾ, ಝಂಪಾ.