×
Ad

ಹನೂರು: ಜಮೀನು ಒತ್ತುವರಿ ತೆರವು ಹಿನ್ನೆಲೆ; ಮನನೊಂದ ಮಹಿಳೆ ಆತ್ಮಹತ್ಯೆ

ಮೃತದೇಹವಿಟ್ಟು ಪ್ರತಿಭಟನೆಗಿಳಿದ ಕುಟುಂಬಸ್ಥರು

Update: 2025-08-16 12:56 IST

ಚಾಮರಾಜನಗರ :  ಜಮೀನು ಒತ್ತುವರಿ ಬೆನ್ನಲ್ಲೇ ಮನನೊಂದ ಮಹಿಳೆಯೊಬ್ಬರು ನೇಣಿಗೆ ಶರಣಾಗಿರುವಂತಹ ಘಟನೆ ಶನಿವಾರ ಮುಂಜಾನೆ ಜಿಲ್ಲೆಯ ಹನೂರು ತಾಲೂಕಿನ ದೊಡ್ಡಲತೂರು ಗ್ರಾಮದಲ್ಲಿ ನಡೆದಿದೆ. ಆಕ್ರೋಶಗೊಂಡ ಆಕೆಯ ಕುಟುಂಬಸ್ಥರು ಒತ್ತುವರಿಯಾದಂತಹ ಜಮೀನಲ್ಲಿ ಮೃತ ದೇಹವನ್ನು ತಂದು ಧರಣಿ ನಡೆಸಿದ್ದಾರೆ.

 ಹನೂರು ತಾಲೂಕಿನ ಕೆಂಪಯ್ಯನಹಟ್ಟಿ ಗ್ರಾಮಸ್ಥರು ಈ ಹಿಂದೆ ಡಾ. ಬಿ.ಆರ್. ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಜಾಗ ನೀಡುವಂತೆ ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಿದ್ದರು. ಹೀಗಾಗಿ ದೊಡ್ಡಲತ್ತೂರು ಗ್ರಾಮದ ಸರ್ವೇ ನಂ. 80 ರಲ್ಲಿನ 3 ಎಕರೆ 96 ಸೆಂಟ್ ಅನ್ನು ಭವನ ನಿರ್ಮಾಣಕ್ಕೆ ಮಂಜೂರು ಮಾಡಲಾಗಿತ್ತು. ಆದರೆ ಗ್ರಾಮದ ಕೆಲವರು ಜಾಗವನ್ನು ಅಕ್ರಮಿಸಿಕೊಂಡಿದ್ದರು. ಈ ಬಗ್ಗೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಗ್ರಾಮಸ್ಥರು ದೂರು ಸಲ್ಲಿಸಿದ್ದರು.

ಅದರಂತೆ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಕೇಶವಮೂರ್ತಿ ನೇತೃತ್ವದಲ್ಲಿ ಆಗಸ್ಟ್ 6 ರಂದು ಕಂದಾಯ, ಪೊಲೀಸ್ ಅಧಿಕಾರಿಗಳು ಹಾಗೂ ಗ್ರಾಮಸ್ಥರೊಂದಿಗೆ ದೊಡ್ಡಲತ್ತೂರಿಗೆ ತೆರಳಿ ಅತಿಕ್ರಮಣ ವಾಗಿದ್ದ ಜಾಗವನ್ನು ಸರ್ವೇ ಮಾಡಲು ಮುಂದಾದರು. ಈ ವೇಳೆ ಜಾಗವನ್ನು ಅತಿಕ್ರಮಿಸಿ ಕೊಂಡಿದ್ದ ಕೆಲ ವ್ಯಕ್ತಿಗಳು ಅಂದೇ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೈಡ್ರಾಮಾ ಮಾಡಿದ್ದರು ಎನ್ನಲಾಗಿದೆ.

ಇದರಿಂದ ಕೆಲಕಾಲ ಸಂದಿಗ್ಧ ಪರಿಸ್ಥಿತಿ ಉಂಟಾಗಿತ್ತು. ಪೊಲೀಸರು ಅವರನ್ನು ಸಮಾಧಾನ ಪಡಿಸಿ ಸರ್ವೇ ಕಾರ್ಯಕ್ಕೆ ಅನುವು ಮಾಡಿಕೊಟ್ಟರು. ಬಳಿಕ ಸರ್ವೇ ಕಾರ್ಯ ನಡೆಸಿದ ಅಧಿಕಾರಿಗಳು ಕೆಂಪಯ್ಯನಹಟ್ಟಿ ಗ್ರಾಮಸ್ಥರಿಗೆ ಅಂಬೇಡ್ಕರ್ ಸಮುದಾಯ ಭವನ ನಿರ್ಮಾಣಕ್ಕೆ ಜಾಗ ನಿಗದಿಪಡಿಸಿ, ಸಮಾಜ ಕಲ್ಯಾಣ ಇಲಾಖೆ ಜಿಲ್ಲಾ ಉಪನಿರ್ದೇಶಕರ ಹೆಸರಿಗೆ ಮೀಸಲಿರಿಸುವ ಮೂಲಕ ಸ್ಥಳದಲ್ಲಿ ನಾಮಫಲಕವನ್ನು ಅಳವಡಿಸಿದರು.

ಇದರ ಬೆನ್ನಲ್ಲೇ ಶನಿವಾರ ಮುಂಜಾನೆ ಜಮೀನು ಮಾಲೀಕ ಸೋಮಣ್ಣನವರ ಪತ್ನಿ ರಾಜಮ್ಮ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತ ರಾಜಮ್ಮಳ ಕುಟುಂಬಸ್ಥರು ಒತ್ತುವರಿಯಾದ ಜಾಗಕ್ಕೆ ಮೃತದೇಹವನ್ನು ತಂದು ಕಂದಾಯ ಇಲಾಖೆ ಹಾಗು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.

ಕ್ಷೇತ್ರದ ಶಾಸಕ ಎಂ.ಆರ್. ಮಂಜುನಾಥ್ ಅವರು ಮೃತ ಮಹಿಳೆಯ ಮನೆಗೆ ಭೇಟಿ ನೀಡಿ, ಸಾಂತ್ವನ ಹೇಳಿದರು. ದೊಡ್ಡಲಾತ್ತೂರಿನಲ್ಲಿ ನಡೆದಿರುವ ಆತ್ಮಹತ್ಯೆ ದುರಂತ ಮನಸ್ಸಿಗೆ ನೋವಾಗಿದೆ. ನೊಂದಿರುವ ಕುಟುಂಬಕ್ಕೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ನ್ಯಾಯ ಒದಗಿಸುವ ಭರವಸೆ ನೀಡಿದರು.




 


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News