×
Ad

ನ್ಯಾಯಾಧೀಶರೊಂದಿಗೆ ಅನುಚಿತ ವರ್ತನೆ ಆರೋಪ: ಅರಕಲಗೂಡು ಪೊಲೀಸ್ ಠಾಣೆಯ ಸಿಬ್ಬಂದಿ ಅಮಾನತು

Update: 2026-07-06 15:47 IST

ಹಾಸನ: ಜು.6: ಕರ್ತವ್ಯ ಲೋಪ, ಮೇಲಾಧಿಕಾರಿಗಳ ಆದೇಶ ಉಲ್ಲಂಘನೆ ಹಾಗೂ ನ್ಯಾಯಾಧೀಶರೊಂದಿಗೆ ಅನುಚಿತವಾಗಿ ವರ್ತಿಸಿದ ಆರೋಪದ ಹಿನ್ನೆಲೆಯಲ್ಲಿ ಅರಕಲಗೂಡು ಪೊಲೀಸ್ ಠಾಣೆಯ ಸಿಬ್ಬಂದಿ ಜಗದೀಶ್ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಹಾಸನ ಜಿಲ್ಲಾ ಪೊಲೀಸ್ ಅಧೀಕ್ಷಕರು ಆದೇಶ ಹೊರಡಿಸಿದ್ದಾರೆ.

ಘಟನೆಯ ವಿವರ:

ಜೂನ್ 28ರಂದು ರಾತ್ರಿ ಇಆರ್ಎಸ್ಎಸ್ (ERSS) ಕರ್ತವ್ಯದಲ್ಲಿದ್ದ ಜಗದೀಶ್ ರಿಗೆ ಪಟ್ಟಣದ ಅನಕೃ ವೃತ್ತದ ಬಳಿ ಸಾರ್ವಜನಿಕ ಸ್ಥಳದಲ್ಲಿ ಸಿಗರೇಟು ಸೇದುತ್ತಿದ್ದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ನ್ಯಾಯಾಧೀಶ ಲೋಕೇಶ್ ಸೂಚಿಸಿದ್ದರು. ಈ ವೇಳೆ ನ್ಯಾಯಾಧೀಶರ ಸೂಚನೆಯನ್ನು ನಿರ್ಲಕ್ಷಿಸಿ, ಜಗದೀಶ್ ಉದ್ಧಟತನದಿಂದ ವರ್ತಿಸಿದ್ದಾರೆ ಎಂದು ಆರೋಪಿಸಲಾಗಿದೆ.

ವಾಗ್ವಾದದ ಸಂದರ್ಭದಲ್ಲಿ ಜಗದೀಶ್ ಅವರು ನ್ಯಾಯಾಧೀಶರ ಮೊಬೈಲ್ ಫೋನ್ ಕಸಿದುಕೊಳ್ಳಲು ಯತ್ನಿಸಿದ್ದಾರೆ. ಸ್ಥಳದಲ್ಲಿದ್ದ ನ್ಯಾಯಾಲಯದ ಸಿಬ್ಬಂದಿ ಮತ್ತು ಇತರರು ಸಮಾಧಾನಪಡಿಸಲು ಪ್ರಯತ್ನಿಸಿದರೂ ಜಗದೀಶ್, ತಮ್ಮ ತಪ್ಪನ್ನು ಒಪ್ಪಿಕೊಳ್ಳುವ ಬದಲು ಸಮರ್ಥನೆಗೆ ಮುಂದಾಗಿದ್ದರು ಎಂದು ತಿಳಿದುಬಂದಿದೆ.

ನ್ಯಾಯಾಂಗದ ಪ್ರತಿನಿಧಿಯಾದ ನ್ಯಾಯಾಧೀಶರೊಂದಿಗೆ ಅಸಭ್ಯವಾಗಿ ವರ್ತಿಸಿ ಇಲಾಖೆಯ ಗೌರವಕ್ಕೆ ಧಕ್ಕೆ ತಂದಿರುವುದು. ಕರ್ತವ್ಯದ ಸಮಯದಲ್ಲಿ ಇಆರ್ಎಸ್ಎಸ್ ವಾಹನವನ್ನು ಬಳಸದೇ, ಖಾಸಗಿ ವಾಹನದಲ್ಲಿ ತೆರಳಿರುವುದು. ಹಾಗೂ ವೃತ್ತಿಪರ ಮೌಲ್ಯಗಳನ್ನು ಮರೆತು ಬೇಜವಾಬ್ದಾರಿತನ ತೋರಿರುವುದು. ಈ ಎಲ್ಲಾ ಅಂಶಗಳನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರು ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಗಳ ಅನ್ವಯ ಜಗದೀಶ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News