ಸಕಲ ಸರ್ಕಾರಿ ಗೌರವಗಳೊಂದಿಗೆ ಚೆನ್ನಮ್ಮ ಅಂತ್ಯಕ್ರಿಯೆ

Update: 2026-07-20 18:47 IST

Photo source: X/@DKShivakumar

ಹೊಳೆನರಸೀಪುರ: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ಪತ್ನಿ ದಿವಂಗತ ಚೆನ್ನಮ್ಮ ದೇವೇಗೌಡ ಅವರ ಅಂತ್ಯಕ್ರಿಯೆ ಸೋಮವಾರ ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನ ಹರದನಹಳ್ಳಿಯ ಸಮೀಪದ ಮಾವಿನಕೆರೆ ಶ್ರೀ ರಂಗನಾಥಸ್ವಾಮಿ ಬೆಟ್ಟದ ತಪ್ಪಲಲ್ಲಿ ಒಕ್ಕಲಿಗರ ಸಂಪ್ರದಾಯದಂತೆ, ಪೂರ್ಣ ಸರ್ಕಾರಿ ಗೌರವದೊಂದಿಗೆ ನೆರವೇರಿತು.

ಕುಟುಂಬದ ಸದಸ್ಯರು, ಬಂಧು-ಬಳಗ ಹಾಗೂ ಸಾವಿರಾರು ಸಾರ್ವಜನಿಕರ ಸಮ್ಮುಖದಲ್ಲಿ ಧಾರ್ಮಿಕ ವಿಧಿವಿಧಾನಗಳೊಂದಿಗೆ ಅಂತಿಮ ಸಂಸ್ಕಾರ ನಡೆಯಿತು. ಅಂತಿಮ ದರ್ಶನಕ್ಕಾಗಿ ಅಪಾರ ಸಂಖ್ಯೆಯಲ್ಲಿ ಜನರು ಆಗಮಿಸಿ ಶ್ರದ್ಧಾಂಜಲಿ ಸಲ್ಲಿಸಿದರು.

ಅಂತ್ಯಕ್ರಿಯೆಯಲ್ಲಿ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿ, ಹಾಸನ-ಕೊಡಗು ಶಾಖಾ ಮಠದ ಶಂಭುನಾಥ ಸ್ವಾಮೀಜಿ, ಚುಂಚನಗಿರಿ ಮಠದ ವಿವಿಧ ಶಾಖೆಗಳ ಸ್ವಾಮೀಜಿಗಳು ಹಾಗೂ ನಂಜಾವಧೂತ ಸ್ವಾಮೀಜಿ ಸೇರಿದಂತೆ ಹಲವು ಧಾರ್ಮಿಕ ಮುಖಂಡರು ಅಂತಿಮ ನಮನ ಸಲ್ಲಿಸಿದರು.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕೇಂದ್ರ ಸಚಿವರಾದ ಶಿವರಾಜ್ ಸಿಂಗ್ ಚೌಹಾಣ್, ಪ್ರಹ್ಲಾದ್ ಜೋಶಿ ಹಾಗೂ ವಿ.ಸೋಮಣ್ಣ, ರಾಜ್ಯ ಸಚಿವರಾದ ಕೃಷ್ಣ ಬೈರೇಗೌಡ ಮತ್ತು ಕೆ.ಜೆ. ಜಾರ್ಜ್, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಸೇರಿದಂತೆ ಸಂಸದರು, ಶಾಸಕರು, ಮಾಜಿ ಸಚಿವರು ಹಾಗೂ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಅಂತಿಮ ಗೌರವ ಸಲ್ಲಿಸಿದರು.

ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳ ಗಣ್ಯರು ದೇವೇಗೌಡ ಕುಟುಂಬಕ್ಕೆ ಸಾಂತ್ವನ ಸೂಚಿಸಿ, ಚೆನ್ನಮ್ಮ ದೇವೇಗೌಡ ಅವರ ಸರಳತೆ, ಸಮಾಜಮುಖಿ ಜೀವನ ಹಾಗೂ ಕುಟುಂಬದ ಬೆನ್ನೆಲುಬಾಗಿ ಸಲ್ಲಿಸಿದ ಸೇವೆಯನ್ನು ಸ್ಮರಿಸಿದರು.

ಅಂತ್ಯಕ್ರಿಯೆ ಹಿನ್ನೆಲೆಯಲ್ಲಿ ಜಿಲ್ಲಾಡಳಿತದಿಂದ ಬಿಗಿ ಪೊಲೀಸ್ ಬಂದೋಬಸ್ತ್, ವಿಶೇಷ ಸಂಚಾರ ವ್ಯವಸ್ಥೆ ಹಾಗೂ ಗಣ್ಯರ ಆಗಮನಕ್ಕಾಗಿ ತಾತ್ಕಾಲಿಕ ಹೆಲಿಪ್ಯಾಡ್‌ಗಳ ವ್ಯವಸ್ಥೆ ಮಾಡಲಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News