ಹಾಸನ: ಚೆನ್ನಮ್ಮ ಅಂತ್ಯಕ್ರಿಯೆಗೆ ಸಿದ್ಧತೆ; 5 ತಾತ್ಕಾಲಿಕ ಹೆಲಿಪ್ಯಾಡ್ ನಿರ್ಮಾಣ
ಹಾಸನ, ಜು. 20: ಮಾಜಿ ಪ್ರಧಾನಮಂತ್ರಿ ಎಚ್.ಡಿ. ದೇವೇಗೌಡ ಅವರ ಧರ್ಮಪತ್ನಿ ಚೆನ್ನಮ್ಮ ಅವರ ಅಂತ್ಯಕ್ರಿಯೆ ಸೋಮವಾರ ನಡೆಯಲಿರುವ ಹಿನ್ನೆಲೆಯಲ್ಲಿ, ರಾಜ್ಯ ಹಾಗೂ ರಾಷ್ಟ್ರಮಟ್ಟದ ಗಣ್ಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ನಿರೀಕ್ಷೆಯಿದ್ದು, ಹಾಸನ ಜಿಲ್ಲಾಡಳಿತ ವ್ಯಾಪಕ ಸಿದ್ಧತೆಗಳನ್ನು ಕೈಗೊಂಡಿದೆ.
ಗಣ್ಯರ ಹೆಲಿಕಾಪ್ಟರ್‌ಗಳ ಸುರಕ್ಷಿತ ಲ್ಯಾಂಡಿಂಗ್ ಹಾಗೂ ಸುಗಮ ಸಂಚಾರಕ್ಕಾಗಿ ಹರದನಹಳ್ಳಿಯಲ್ಲಿ ಎರಡು ಹಾಗೂ ಹೊಳೆನರಸೀಪುರದಲ್ಲಿ ಮೂರು ಸೇರಿ ಒಟ್ಟು ಐದು ತಾತ್ಕಾಲಿಕ ಹೆಲಿಪ್ಯಾಡ್‌ಗಳನ್ನು ನಿರ್ಮಿಸಲಾಗಿದೆ.
ಅಂತ್ಯಕ್ರಿಯೆ ಕಾರ್ಯಕ್ರಮದ ವೇಳೆ ಯಾವುದೇ ಅಡಚಣೆ ಉಂಟಾಗದಂತೆ ಭದ್ರತೆ, ಸಂಚಾರ ವ್ಯವಸ್ಥೆ, ಗಣ್ಯರ ಓಡಾಟ ಮತ್ತು ಸಾರ್ವಜನಿಕರ ಅನುಕೂಲಕ್ಕಾಗಿ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಲಾಗಿದೆ. ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಪ್ರತ್ಯೇಕ ಜವಾಬ್ದಾರಿಗಳನ್ನು ವಹಿಸಲಾಗಿದ್ದು, ಸ್ಥಳದಲ್ಲೇ ಸಿದ್ಧತೆಗಳ ಮೇಲ್ವಿಚಾರಣೆ ನಡೆಯುತ್ತಿದೆ.
ಈ ಸಂಬಂಧ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಅಧಿಕೃತ ಆದೇಶ ಹೊರಡಿಸಿದ್ದು, ಕಾರ್ಯಕ್ರಮವು ಶಾಂತಿಯುತ ಹಾಗೂ ಸುಸೂತ್ರವಾಗಿ ನಡೆಯುವಂತೆ ಅಗತ್ಯ ಎಲ್ಲಾ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ರಾಜ್ಯ ಮತ್ತು ರಾಷ್ಟ್ರಮಟ್ಟದ ರಾಜಕೀಯ ನಾಯಕರು, ಜನಪ್ರತಿನಿಧಿಗಳು ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು ಅಂತ್ಯಕ್ರಿಯೆಯಲ್ಲಿ ಭಾಗವಹಿಸುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ, ಜಿಲ್ಲಾಡಳಿತ ಅನೇಕ ವ್ಯವಸ್ಥೆಗಳನ್ನು ಜಾರಿಗೆ ತಂದಿದೆ.