ಹಾಸನ: ಸೆ.10: ಜಿಲ್ಲಾ ಕಾಂಗ್ರೆಸ್ ಸಮಿತಿ(DCC)ಯ ನೂತನ ಅಧ್ಯಕ್ಷರಾಗಿ ಅರಸೀಕೆರೆ ಮೂಲದ ಪ್ರಮುಖ ಕಾಂಗ್ರೆಸ್ ಮುಖಂಡ ಜಿ.ಬಿ. ಶಶಿಧರ್ ನೇಮಕಗೊಂಡಿದ್ದಾರೆ.

ಅರಸೀಕೆರೆಯ ಹಿರಿಯ ರಾಜಕೀಯ ನಾಯಕ ದಿವಂಗತ ಜಿ.ಎಸ್. ಬಸವರಾಜು ಅವರ ಪುತ್ರರಾಗಿರುವ ಶಶಿಧರ್, ಹಾಸನದ ಮಲೆನಾಡು ಇಂಜಿನಿಯರಿಂಗ್ ಕಾಲೇಜಿನಿಂದ (MCE) ಪದವಿ ಪಡೆದ ಶಿಕ್ಷಣ ತಜ್ಞ ಹಾಗೂ ಕೃಷಿ ಹಿನ್ನೆಲೆಯುಳ್ಳವರು.

ಕೇವಲ ಕುಟುಂಬದ ಹೆಸರನ್ನಷ್ಟೇ ನೆಚ್ಚಿಕೊಳ್ಳದೆ ತಳಮಟ್ಟದಲ್ಲಿ ಸ್ವಂತ ಕಾರ್ಯಕರ್ತರ ಪಡೆಯನ್ನು ಕಟ್ಟಿ ಬೆಳೆಸಿದ ಅವರು, ವಿದ್ಯಾವಂತ-ಸಂಯಮಿ ವ್ಯಕ್ತಿತ್ವದ ಮೂಲಕ ಜಿಲ್ಲಾ ರಾಜಕಾರಣದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.

2018ರ ವಿಧಾನಸಭಾ ಕದನದಲ್ಲಿ ಅರಸೀಕೆರೆ ಕ್ಷೇತ್ರದಿಂದ ಜೆಡಿಎಸ್ ಭದ್ರಕೋಟೆಯ ವಿರುದ್ಧವೇ ಸೆಣಸಾಡಿ 50 ಸಾವಿರಕ್ಕೂ ಅಧಿಕ ಮತಗಳನ್ನು ಕಲೆಹಾಕುವ ಮೂಲಕ ಕಾಂಗ್ರೆಸ್ನ ನೆಲೆ ವಿಸ್ತರಿಸಿದ್ದರು. 2023ರಲ್ಲಿ ಪಕ್ಷದ ಟಿಕೆಟ್ ಕೈತಪ್ಪಿದರೂ ಅಸಮಾಧಾನ ಪ್ರದರ್ಶಿಸದೆ ಪಕ್ಷದ ಶಿಸ್ತಿಗೆ ಬದ್ಧರಾಗಿ ನಿಂತ ಶಶಿಧರ್, ಇತ್ತೀಚಿನ ಲೋಕಸಭಾ ಚುನಾವಣೆಯಲ್ಲಿ ಸಂಸದ ಶ್ರೇಯಸ್ ಪಟೇಲ್ ಗೆಲುವಿಗೆ ಹಗಲಿರುಳು ಶ್ರಮಿಸಿದ್ದರು. ಸಂಸದ ಶ್ರೇಯಸ್ ಪಟೇಲ್, ಸಚಿವ ಕೆ.ಎನ್. ರಾಜಣ್ಣ ಹಾಗೂ ಕೆಪಿಸಿಸಿ ಸಾರಥಿ ಡಿ.ಕೆ. ಶಿವಕುಮಾರ್ ಅವರ ವಿಶ್ವಾಸ ಗಳಿಸಿರುವುದರ ಜೊತೆಗೆ ಜಿಲ್ಲೆಯ ಲಿಂಗಾಯತ ಸಮುದಾಯದ ಪ್ರಾತಿನಿಧ್ಯದ ಸಮೀಕರಣವೂ ಇವರ ಈ ಮಹತ್ವದ ಆಯ್ಕೆಗೆ ಪ್ರಮುಖ ಕಾರಣ ಎಂದು ಹೇಳಲಾಗುತ್ತಿದೆ.

ನೂತನ ಜಿಲ್ಲಾಧ್ಯಕ್ಷರಿಗೆ ಈ ಹುದ್ದೆ ಕೇವಲ ಅಧಿಕಾರದ ಗದ್ದುಗೆಯಲ್ಲ, ಬದಲಾಗಿ ಕಠಿಣ ರಾಜಕೀಯ ಸವಾಲುಗಳ ಮುಳ್ಳಿನ ಹಾದಿ. ಜಿಲ್ಲೆಯ ಪ್ರತಿಯೊಂದು ತಾಲೂಕಿನ ಭಿನ್ನ ರಾಜಕೀಯ ವಾತಾವರಣ, ಹಿರಿಯ ಮುಖಂಡರ ಅಸಮಾಧಾನಗಳನ್ನು ತಣಿಸುವುದು ಮತ್ತು ಎಲ್ಲ ಬಣಗಳನ್ನೂ ಬದಿಗೊತ್ತಿ ಪಕ್ಷವನ್ನು ಒಂದೇ ವೇದಿಕೆಗೆ ತರುವುದು ಇವರ ಮೊದಲ ಆದ್ಯತೆಯಾಗಬೇಕಿದೆ.

ರಾಜ್ಯ ಕಾಂಗ್ರೆಸ್ ಸರ್ಕಾರದ ಜನಪ್ರಿಯ ಗ್ಯಾರಂಟಿ ಯೋಜನೆಗಳನ್ನು ಕೇವಲ ಪ್ರಚಾರಕ್ಕೆ ಸೀಮಿತಗೊಳಿಸದೆ, ಹಳ್ಳಿಹಳ್ಳಿಗಳಲ್ಲಿ ಮತಬ್ಯಾಂಕ್ ಆಗಿ ಪರಿವರ್ತಿಸುವ ಹೊಣೆಗಾರಿಕೆಯೂ ಇವರ ಹೆಗಲೇರಿದೆ.

ಅಂತಿಮವಾಗಿ, ಮುಂಬರುವ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಗಳೇ ಶಶಿಧರ್ ಅವರ ನಾಯಕತ್ವಕ್ಕೆ ಅಸಲಿ ಅಗ್ನಿಪರೀಕ್ಷೆ. ಲೋಕಸಭಾ ಚುನಾವಣೆಯಲ್ಲಿ ದೊರೆತ ಐತಿಹಾಸಿಕ ಜಯದ ಹುಮ್ಮಸ್ಸನ್ನು ಕಾರ್ಯಕರ್ತರಲ್ಲಿ ಕೊನೆವರೆಗೂ ಕಾಪಾಡಿಕೊಂಡು, ಬೂತ್ ಮಟ್ಟದಲ್ಲಿ ವಿಜಯಶಾಲೀ ಕಾಂಗ್ರೆಸ್ ಸಂಘಟನೆಯನ್ನು ಕಟ್ಟುವುದು ಇವರ ಮುಂದಿರುವ ಬಹುಮುಖ್ಯ ಸವಾಲು. ಒಬ್ಬ ಕ್ಷೇತ್ರದ ನಾಯಕನ ಗಡಿ ದಾಟಿ ಇಡೀ ಜಿಲ್ಲೆಯ ಸಾರಥ್ಯವನ್ನು ಹೇಗೆ ನಿಭಾಯಿಸಲಿದ್ದಾರೆ ಎಂಬುದರ ಮೇಲೆ ಹಾಸನ ಕಾಂಗ್ರೆಸ್ನ ಮುಂದಿನ ರಾಜಕೀಯ ಭವಿಷ್ಯ ನಿಂತಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor