ಹಾಸನ | ಲಾರಿ ಡಿಕ್ಕಿ: ಸೈಕಲ್ ಸವಾರ ಬಾಲಕ ಮೃತ್ಯು
ಹಾಸನ: ಸೈಕಲ್ ಗೆ ಲಾರಿ ಢಿಕ್ಕಿ ಹೊಡೆದ ಪರಿಣಾಮ ಸೈಕಲ್ ಸವಾರ ಬಾಲಕನೋರ್ವ ಸ್ಥಳದಲ್ಲೇ ಮೃತಪಟ್ಟ ಘಟನೆ ಹಾಸನ ಹೊರವಲಯದ ಬಿಟ್ಟಗೌಡನಹಳ್ಳಿ ಬೈಪಾಸ್ ರಸ್ತೆಯಲ್ಲಿ ಗುರುವಾರ ಬೆಳಗ್ಗೆ ನಡೆದಿದೆ.
ಹಾಸನ ತಾಲೂಕಿನ ಶಾಂತಿಗ್ರಾಮ ಹೋಬಳಿಯ ಬಸ್ತಿಹಳ್ಳಿ ಗ್ರಾಮದ ಪುಟ್ಟಸ್ವಾಮಿ ಎಂಬವರ ಪುತ್ರ ಪಂಕಜ್ (15) ಮೃತಪಟ್ಟ ಬಾಲಕ.
9ನೇ ತರಗತಿ ವಿದ್ಯಾರ್ಥಿಯಾಗಿದ್ದ ಪಂಕಜ್, ಹಾಸನದ ಹೊಸಕೊಪ್ಪಲಿನಲ್ಲಿ ಕುಟುಂಬದೊಂದಿಗೆ ವಾಸವಾಗಿದ್ದನು.
ಡ್ರೈವರ್ ವೃತ್ತಿ ಮಾಡುತ್ತಿರುವ ಪುಟ್ಟಸ್ವಾಮಿ ತನ್ನ ಕಾರನ್ನು ಗ್ಯಾರೇಜ್ ಗೆ ರಿಪೇರಿಗೆ ಬಿಟ್ಟಿದ್ದರು. ಕಾರು ರಿಪೇರಿಯಾಗಿದೆಯೇ ಎಂದು ನೋಡಲು ಇಂದು ಬೆಳಗ್ಗೆ ಪುತ್ರ ಪಂಕಜ್ ನನ್ನು ಗ್ಯಾರೇಜಿಗೆ ಕಳುಹಿಸಿದ್ದರು. ಪಂಕಜ್ ಸೈಕಲ್ ನಲ್ಲಿ ಗ್ಯಾರೇಜಿಗೆ ತೆರಳುತ್ತಿದ್ದ ವೇಳೆ ಲಾರಿಯೊಂದು ಢಿಕ್ಕಿ ಹೊಡೆದಿದೆ. ಈ ವೇಳೆ ರಸ್ತೆಗೆ ಬಿದ್ದ ಪಂಕಜ್ ಮೈಮೇಲೆ ಲಾರಿಯ ಮುಂಭಾಗದ ಚಕ್ರ ಹರಿದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದನು. ಸ್ಥಳೀಯರು ಕೂಡಲೇ ಆಟೋದಲ್ಲಿ ಹಾಸನ ಜಿಲ್ಲಾಸ್ಪತ್ರೆಗೆ ಕರೆದೊಯ್ದರಾದರೂ, ಅಷ್ಟರಲ್ಲಾಗಲೇ ಬಾಲಕ ಮೃತಪಟ್ಟಿದ್ದನು.
ಘಟನೆಗೆ ಸಂಬಂಧಿಸಿದಂತೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಾಸನ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.