Hassan | ಟೈರ್ ಬ್ಲಾಸ್ಟ್‌ಗೆ ಪಿಕಪ್ ಪಲ್ಟಿ; ಮೂವರು ಸ್ಥಳದಲ್ಲೇ ಮೃತ್ಯು
ಹಾಸನ : ಜಿಲ್ಲೆಯ ಅರಸೀಕೆರೆ ತಾಲೂಕಿನ ಚಿಕ್ಕಾರಹಳ್ಳಿ ಗ್ರಾಮದ ಸಮೀಪದ ರಾಷ್ಟ್ರೀಯ ಹೆದ್ದಾರಿ 69ರಲ್ಲಿ ಬುಧವಾರ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಅಡಿಕೆ ಕಟಾವು ಮಾಡಿ ಸಾಗಿಸುತ್ತಿದ್ದ ಪಿಕಪ್ ವಾಹನ ಪಲ್ಟಿಯಾಗಿ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಕಡೂರು ತಾಲೂಕಿನ ತಂಗ್ಲಿ ಗ್ರಾಮದ ನಿವಾಸಿಗಳಾದ ಶಬ್ಬೀರ್ (55), ತಿಮ್ಮಣ್ಣ (53) ಹಾಗೂ ಸಂಜಯ್ (45) ಮೃತರು ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ಇನ್ನಿಬ್ಬರು ಗಾಯಗೊಂಡಿದ್ದಾರೆ.
ಅಡಿಕೆ ಕಟಾವು ಕಾರ್ಯ ಮುಗಿಸಿ ಪಿಕಪ್ ವಾಹನದಲ್ಲಿ ಸಾಗಿಸುತ್ತಿದ್ದ ವೇಳೆ, ವಾಹನದ ಟೈರ್ ಏಕಾಏಕಿ ಬ್ಲಾಸ್ಟ್ ಆಗಿ ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಪಿಕಪ್ ರಸ್ತೆ ಬದಿಗೆ ಉರುಳಿ ಪಲ್ಟಿಯಾಗಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಅಪಘಾತದ ತೀವ್ರತೆಗೆ ವಾಹನದಲ್ಲಿದ್ದ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಘಟನೆಯಲ್ಲಿ ಹಾಸನ ಮೂಲದ ನೌಶದ್ ಎಂಬವರು ಗಂಭೀರವಾಗಿ ಗಾಯಗೊಂಡಿದ್ದು, ಪ್ರಥಮ ಚಿಕಿತ್ಸೆ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಲಾಗಿದೆ. ಉಳಿದ ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರನ್ನು ಕಡೂರು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಪಘಾತದ ಸುದ್ದಿ ತಿಳಿದ ಕೂಡಲೇ ಬಾಣಾವರ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದು, ಹೆಚ್ಚಿನ ತನಿಖೆ ಮುಂದುವರೆದಿದೆ.