ಹಾಸನ: ಮೈತ್ರಿ ವಿರೋಧಿ ಹೇಳಿಕೆ: ಎಚ್ ಡಿ ರೇವಣ್ಣ ಉಚ್ಚಾಟನೆಗೆ ಬಿಜೆಪಿ ಆಗ್ರಹ
ಹಾಸನ: “ಹಾಸನ ಜಿಲ್ಲೆಯಲ್ಲಿ ಕಾಂಗ್ರೆಸ್ ಹಾಗೂ ಜೆ.ಡಿ.ಎಸ್ ಮಾತ್ರ ಇವೆ, ಬಿಜೆಪಿಯೇ ಇಲ್ಲ” ಎಂದು ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದ ಶಾಸಕ ಎಚ್.ಡಿ. ರೇವಣ್ಣ ಅವರು ಎನ್.ಡಿ.ಎ ಮೈತ್ರಿಗೆ ವಿರುದ್ಧವಾಗಿ ನೀಡಿರುವ ಹೇಳಿಕೆ ಖಂಡನೀಯವಾಗಿದ್ದು, ಇದು ಮೈತ್ರಿ ಧರ್ಮಕ್ಕೂ ಹಾಗೂ ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತರಿಗೆ ಅವಮಾನಕರವಾಗಿದೆ ಇವರನ್ನು ಪಕ್ಷದಿಂದ ಉಚ್ಚಾಟನೆ ಮಾಡಬೇಕು ಎಂದು ಹಾಸನ ಜಿಲ್ಲಾ ಬಿಜೆಪಿ ಮುಖಂಡರು ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ, ಬಿಜೆಪಿ ಮುಖಂಡ ದೇವರಾಜೇಗೌಡ, ಜೆ.ಡಿ.ಎಸ್ ಪಕ್ಷದ ರಾಷ್ಟ್ರಾಧ್ಯಕ್ಷರಾದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಹಾಗೂ ರಾಜ್ಯಾಧ್ಯಕ್ಷರಾದ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರು, ಭಾರತೀಯ ಜನತಾ ಪಾರ್ಟಿಯೊಂದಿಗೆ ಮೈತ್ರಿ ಮಾಡಿಕೊಂಡು ಎನ್.ಡಿ.ಎ ಅಂಗಪಕ್ಷವಾಗಿ 2024ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಕೇಂದ್ರ ಸರ್ಕಾರ ರಚನೆಗೆ ಮಹತ್ವದ ಪಾತ್ರವಹಿಸಿದ್ದರು. ಈ ಮೈತ್ರಿಯ ಫಲವಾಗಿ ಎಚ್.ಡಿ. ಕುಮಾರಸ್ವಾಮಿಯವರು ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವರಾಗಿ ಅಧಿಕಾರ ಸ್ವೀಕರಿಸಿದ್ದು, ಎನ್.ಡಿ.ಎ ಮೈತ್ರಿಯ ಪ್ರಮುಖ ನಾಯಕರಾಗಿ ಗುರುತಿಸಿಕೊಂಡಿದ್ದಾರೆ ಎಂದು ತಿಳಿಸಿದರು.
ಈ ಹಿನ್ನೆಲೆಯಲ್ಲಿ, ಬೆಳಗಾವಿಯಲ್ಲಿ ನಡೆದ 2025ರ ಚಳಿಗಾಲದ ವಿಧಾನಮಂಡಲ ಅಧಿವೇಶನದ ವೇಳೆ ಮಾತನಾಡಿದ ಹೊಳೆನರಸೀಪುರ ಶಾಸಕ ಎಚ್.ಡಿ. ರೇವಣ್ಣ ಅವರು, “ಹಾಸನ ಜಿಲ್ಲೆಯಲ್ಲಿ ಕಾಂಗ್ರೆಸ್ ಹಾಗೂ ಜೆ.ಡಿ.ಎಸ್ ಮಾತ್ರ ಇವೆ, ಬಿಜೆಪಿಯೇ ಇಲ್ಲ” ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದು, ಇದು ಹಾಸನ ಜಿಲ್ಲೆಯ ಬಿಜೆಪಿ ಶಾಸಕರು, ಪಕ್ಷದ ಮುಖಂಡರು, ಪರಾಜಿತ ಅಭ್ಯರ್ಥಿಗಳು ಹಾಗೂ ನಿಷ್ಠಾವಂತ ಕಾರ್ಯಕರ್ತರ ಮನೋಭಾವಕ್ಕೆ ಧಕ್ಕೆ ತಂದಿದೆ ಎಂದು ಬಿಜೆಪಿ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.
ಆದ್ದರಿಂದ, ಜೆ.ಡಿ.ಎಸ್ ಪಕ್ಷದ ರಾಷ್ಟ್ರಾಧ್ಯಕ್ಷ ಎಚ್.ಡಿ. ದೇವೇಗೌಡರು ಹಾಗೂ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿಯವರು, ಸದನದೊಳಗೆ ಮೈತ್ರಿ ವಿರೋಧಿ ಹಾಗೂ ಪಕ್ಷವಿರೋಧಿ ಹೇಳಿಕೆ ನೀಡಿರುವ ಎಚ್.ಡಿ. ರೇವಣ್ಣ ಅವರನ್ನು ಕೂಡಲೇ ಪಕ್ಷದಿಂದ ಉಚ್ಚಾಟನೆ ಮಾಡಬೇಕು. ಜೊತೆಗೆ ಹಾಸನ ಜಿಲ್ಲಾ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರಿಗೆ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು ಎಂದು ಬಿಜೆಪಿ ನಾಯಕರು ಒತ್ತಾಯಿಸಿದ್ದಾರೆ.
ಇನ್ನೂ ಈ ವಿಷಯದಲ್ಲಿ ಜೆ.ಡಿ.ಎಸ್ ಪಕ್ಷದ ವರಿಷ್ಠರು ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ, ಎನ್.ಡಿ.ಎ ಮೈತ್ರಿಯ ಅಂಗಪಕ್ಷವಾಗಿ ಜೆ.ಡಿ.ಎಸ್ ಮುಂದುವರಿಯಲು ನೈತಿಕತೆ ಉಳಿಯುವುದಿಲ್ಲ. ಈ ಕಾರಣದಿಂದ ಜೆ.ಡಿ.ಎಸ್ ಪಕ್ಷವು ನೈತಿಕ ಹೊಣೆ ಹೊತ್ತು ಮೈತ್ರಿಯಿಂದ ಹೊರಬರಬೇಕು. ಇಲ್ಲವಾದಲ್ಲಿ, ಎಚ್.ಡಿ. ರೇವಣ್ಣ ಅವರ ಹೇಳಿಕೆಯ ವಿರುದ್ಧ ಹಾಸನ ಜಿಲ್ಲೆಯ ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರು ಉಗ್ರ ಹೋರಾಟ ನಡೆಸಲಿದ್ದಾರೆ ಎಂದು ಎಚ್ಚರಿಕೆ ನೀಡಿದ್ದಾರೆ.