ಸಕಲೇಶಪುರ : ಚಲಿಸುತ್ತಿದ್ದ ಕಾರಿಗೆ ಬೆಂಕಿ, ಪ್ರಾಣಾಪಾಯದಿಂದ ಪಾರಾದ ದಂಪತಿ
ಸಕಲೇಶಪುರ: ಡಿ,6: ಚಲಿಸುತ್ತಿದ್ದ ಡಸ್ಟರ್ ಕಾರಿಗೆ ಬೆಂಕಿ ತಗುಲಿ ದಂಪತಿಗಳು ಪ್ರಾಣಾಪಾಯದಿಂದ ಪರಾಗಿರುವ ಘಟನೆ ತಾಲ್ಲೂಕಿನ ಮಂಜ್ರಾಬಾದ್ ದರ್ಗಾ ಸಮೀಪ ಶನಿವಾರ ನಡೆದಿದೆ.
ಬೆಂಗಳೂರು ನಿವಾಸಿಗಳಾದ ನವೀನ್ (32) ಮತ್ತು ಮಾನಸ(28) ಅಪಾಯದಿಂದ ಪಾರಾದ ದಂಪತಿ. ಧರ್ಮಸ್ಥಳ ಮಾರ್ಗವಾಗಿ ಸಂಚರಿಸುತ್ತಿದ್ದ ಸಂದರ್ಭದಲ್ಲಿ, ಕಾರಿನ ಹಿಂದಿನ ಚಕ್ರ ಪಂಕ್ಚರ್ ಆಗಿ ಡಿವೈಡರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬೆಂಕಿ ತಗುಲಿದೆ ಎಂದು ಹೇಳಲಾಗುತ್ತಿದೆ.
ಸಾರ್ವಜನಿಕರು ಅಗ್ನಿಶಾಮಕ ದಳಕ್ಕೆ ಕರೆಮಾಡಿ ಮಾಹಿತಿ ನೀಡಿದ್ದಾರೆ. ತುರ್ತಾಗಿ ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದ್ದಾರೆ.
ಪತ್ರಿಕೆಯೊಂದಿಗೆ ಮಾತನಾಡಿದ ವಾಹನ ಚಾಲಕ ಮತ್ತು ಮಾಲೀಕ ನವೀನ್, "ನಾವು ಬೆಂಗಳೂರು ನಿವಾಸಿಗಳಾಗಿದ್ದು, ಧರ್ಮಸ್ಥಳಕ್ಕೆ ತೆರಳುತ್ತಿದ್ದೆವು. ಆಗ ಮಂಜ್ರಾಬಾದ್ ದರ್ಗಾ ಸಮೀಪ ಕಾರಿನ ಹಿಂದಿನ ಚಕ್ರ ಪಂಕ್ಚರ್ ಆಗಿ ವಾಹನ ನಿಯಂತ್ರಣ ತಪ್ಪಿ ಪಕ್ಕದ ಡಿವೈಡರ್‌ಗೆ ಢಿಕ್ಕಿ ಹೊಡೆದು ಇದ್ದಕ್ಕಿದ್ದಂತೆ ಬೆಂಕಿ ತಗಲಿಕೊಂಡಿತ್ತು. ವಾಹನದ ಹಿಂಭಾಗದಲ್ಲಿ ಇದ್ದ ಲಾರಿ ಚಾಲಕ ಬೆಂಕಿ ನಂದಿಸಲು ಪ್ರಯತ್ನಿಸಿದ. ತುರ್ತಾಗಿ ಅಗ್ನಿಶಾಮಕ ದಳದವರು ಬಂದರು ನಮಗೆ ಯಾವುದೇ ರೀತಿಯ ಗಾಯಗಳು ಸಂಭವಿಸಲಿಲ್ಲ ಎಂದು ಹೇಳಿದರು.