ನಮ್ಮ ಧ್ವನಿ ಅಡಗಿಸಲು ಸಾಧ್ಯವಿಲ್ಲ; ನ್ಯಾಯ, ಸತ್ಯಕ್ಕೆ ತಲೆಬಾಗುತ್ತೇನೆ : ಎಚ್.ಡಿ.ಕುಮಾರಸ್ವಾಮಿ
ಹಾಸನ : ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಹೊಳೆನರಸೀಪುರ ತಾಲ್ಲೂಕಿನ ಮಾವಿನಕೆರೆಯಲ್ಲಿ ಮಾತನಾಡಿದ ಅವರು, “ನನ್ನ ಮನೆ ಅಲುಗಾಡಿಸಿರುವುದು ಯಾರು ಎಂಬುದು ನಿಮಗೆ ಗೊತ್ತಿದೆ. ದೇವೇಗೌಡರ ಕುಟುಂಬವನ್ನು ಮುಗಿಸುತ್ತೇವೆ ಎಂದು ಯಾರು ಹೇಳಿದ್ದರು? ಇದೇ ಮುಖ್ಯಮಂತ್ರಿ ಅಲ್ಲವೇ?” ಎಂದು ಪ್ರಶ್ನಿಸಿದರು.
ಜೈಲಿನಲ್ಲಿರುವ ವ್ಯಕ್ತಿಯ ಮೊಬೈಲ್ ಹಾಗೂ ಪೆನ್‌ಡ್ರೈವ್‌ಗೆ ಸಂಬಂಧಿಸಿದಂತೆ ನಡೆಯುತ್ತಿರುವ ಬೆಳವಣಿಗೆಗಳ ಕುರಿತು ಪ್ರಶ್ನಿಸಿದ ಕುಮಾರಸ್ವಾಮಿ, “ಎರಡು ವರ್ಷಗಳಿಂದ ಫೋನ್ ಇರಲಿಲ್ಲವೇ? ಈಗ ಫೋನ್ ಬಂದಿದೆ ಎಂದು ಹೊಸ ಕಥೆ ಆರಂಭಿಸಿದ್ದಾರೆ. ಜೈಲಿನೊಳಗೆ ಅಶ್ಲೀಲ ಚಿತ್ರಗಳು ಹೇಗೆ ಬಂದವು, ಯಾರು ನೀಡಿದರು. ಫೋನ್ ಯಾರು ಪೂರೈಸಿದರು?” ಎಂದು ಪ್ರಶ್ನಿಸಿದರು.
ಬಿಡದಿ, ಕೆಪಿಎಸ್‌ಸಿ ಹಾಗೂ ನೈಸ್ ಪ್ರಕರಣಗಳ ವಿಚಾರ ಪ್ರಸ್ತಾಪಿಸಿದ ಅವರು, “ಒಂದು ಪ್ರಕರಣದ ಹೆಸರನ್ನು ಬಳಸಿಕೊಂಡು ದೇವೇಗೌಡರ ಕುಟುಂಬದ ಧ್ವನಿಯನ್ನು ಮುಚ್ಚಿಸಲು ಸಾಧ್ಯವಿಲ್ಲ. ಏನೇನು ನಡೆಸಿದ್ದೀರಿ ಎಂಬುದಕ್ಕೆ ಕಾಲವೇ ಉತ್ತರ ನೀಡಲಿದೆ” ಎಂದು ಹೇಳಿದರು.
ತಮ್ಮ ವಿರುದ್ಧ ಹಾಗೂ ತಮ್ಮ ಕುಟುಂಬದ ವಿರುದ್ಧ ಕೇಳಿಬಂದಿರುವ ಆರೋಪಗಳಿಗೂ ಪ್ರತಿಕ್ರಿಯಿಸಿದ ಅವರು, “ಇದಕ್ಕೆಲ್ಲ ಹೆದರಿ ಹೋಗುವುದಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ನ್ಯಾಯ ಮತ್ತು ಸತ್ಯಕ್ಕೆ ತಲೆಬಾಗುತ್ತೇನೆ. ತಪ್ಪು ಮಾಡಿದ್ದರೆ ತಲೆಬಾಗಲು ಸಿದ್ಧ. ಆದರೆ ನಿಮ್ಮಂತೆ ಎಲ್ಲವನ್ನೂ ಬಿಟ್ಟು ದೋಚುವ ಕೆಲಸ ಮಾಡುವುದಿಲ್ಲ” ಎಂದು ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಸರಕಾರದ ವಿರುದ್ಧ ಕಿಡಿಕಾರಿದರು.
ದೇವೇಗೌಡರು ತಮ್ಮ ರಾಜಕೀಯ ಜೀವನದುದ್ದಕ್ಕೂ ಅಕ್ರಮದ ವಿರುದ್ಧ ಹೋರಾಡಿಕೊಂಡು ಬಂದಿದ್ದಾರೆ. ಅಂತಹ ನಾಯಕರು ತಮಗೆ ಜನ್ಮ ನೀಡಿದ್ದಾರೆ ಎಂದು ಹೇಳಿದ ಅವರು, ಕುಟುಂಬದ ವಿರುದ್ಧ ನಡೆಯುತ್ತಿರುವ ರಾಜಕೀಯ ಹೋರಾಟವನ್ನು ಎದುರಿಸುವುದಾಗಿ ತಿಳಿಸಿದರು.