ಸಕಲೇಶಪುರ | ಕೊಟ್ಟಿಗೆಗೆ ನುಗ್ಗಿ ಕಾಡಾನೆ ದಾಳಿ: ಕರು ಸಾವು, ಹಸುವಿಗೆ ಗಂಭೀರ ಗಾಯ
Update: 2026-07-27 10:32 IST
ಸಕಲೇಶಪುರ, ಜು.27: ಸಕಲೇಶಪುರ ತಾಲೂಕಿನ ಕಿರವಾಲೆ ಗ್ರಾಮದಲ್ಲಿ ಕಾಡಾನೆ ಹಾವಳಿ ಮತ್ತೆ ಆತಂಕ ಸೃಷ್ಟಿಸಿದೆ. ಗ್ರಾಮದ ಯತೀಶ್ ಎಂಬವರಿಗೆ ಸೇರಿದ ಜಾನುವಾರು ಕೊಟ್ಟಿಗೆಗೆ ರಾತ್ರಿ ವೇಳೆ ಒಂಟಿಸಲಗ ನುಗ್ಗಿ ದಾಳಿ ನಡೆಸಿದ್ದರಿಂದ ಒಂದು ಕರು ಅಸುನೀಗಿದ್ದು, ಹಸುವೊಂದು ಗಂಭೀರವಾಗಿ ಗಾಯಗೊಂಡಿದೆ.
ರಾತ್ರಿ ವೇಳೆಯಲ್ಲಿ ಕೊಟ್ಟಿಗೆಗೆ ನುಗ್ಗಿದ ಕಾಡಾನೆ ಏಕಾಏಕಿ ಜಾನುವಾರುಗಳ ಮೇಲೆ ದಾಳಿ ನಡೆಸಿದೆ. ಘಟನೆಯ ನಂತರ ಕಾಡಾನೆ ಸಮೀಪದ ಕಾಫಿ ತೋಟದಲ್ಲೇ ಬೀಡುಬಿಟ್ಟಿದ್ದು, ಗ್ರಾಮಸ್ಥರಲ್ಲಿ ತೀವ್ರ ಆತಂಕ ಮನೆಮಾಡಿದೆ.
ರಾತ್ರಿ ವೇಳೆ ಹೊರಗೆ ಸಂಚರಿಸಲು ಜನರು ಭಯಪಡುವಂತಾಗಿದ್ದು, ಕಾಡಾನೆಯನ್ನು ಸುರಕ್ಷಿತವಾಗಿ ಕಾಡಿಗೆ ಅಟ್ಟಿಹಾಕುವಂತೆ ಹಾಗೂ ಗ್ರಾಮದಲ್ಲಿ ಸೂಕ್ತ ಭದ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಅರಣ್ಯ ಇಲಾಖೆಯನ್ನು ಸ್ಥಳೀಯರು ಒತ್ತಾಯಿಸಿದ್ದಾರೆ.
ಸುದ್ದಿ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.