Haveri : ರಾಮಾಪುರ ಗ್ರಾಮಕ್ಕೆ ನೇರ ಬಸ್ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ವಿದ್ಯಾರ್ಥಿಗಳು, ಗ್ರಾಮಸ್ಥರಿಂದ ಪ್ರತಿಭಟನೆ
ಹಾವೇರಿ : ಜಿಲ್ಲೆಯ ಹಾವೇರಿ ತಾಲೂಕಿನ ರಾಮಾಪುರ ಗ್ರಾಮಕ್ಕೆ ಜಿಲ್ಲಾ ಕೇಂದ್ರದಿಂದ ನೇರ ಬಸ್ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಹಾವೇರಿ ನಗರದ ಆರ್‌ಟಿಒ ಕಚೇರಿ ಸಮೀಪದ ಬಸ್ ಡಿಪೊ ಬಳಿ ಪ್ರತಿಭಟನೆ ನಡೆಸಿದರು.
ಹಾವೇರಿ ಜಿಲ್ಲೆಯ ಜಯ ಕರ್ನಾಟಕ ಸಂಘಟನೆಯ ನೇತೃತ್ವದಲ್ಲಿ ನಡೆದ ಧರಣಿಯಲ್ಲಿ ರಾಮಾಪುರ ಗ್ರಾಮದ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಪಾಲ್ಗೊಂಡು, ಗ್ರಾಮಕ್ಕೆ ನೇರ ಬಸ್ ಸಂಚಾರ ಆರಂಭಿಸುವಂತೆ ಸಾರಿಗೆ ಅಧಿಕಾರಿಗಳನ್ನು ಒತ್ತಾಯಿಸಿದರು.
ಹಾವೇರಿ ಜಿಲ್ಲಾ ಕೇಂದ್ರದಿಂದ ರಾಮಾಪುರ ಗ್ರಾಮಕ್ಕೆ ನೇರವಾಗಿ ಸಾರಿಗೆ ಬಸ್ ಸೌಲಭ್ಯ ಇಲ್ಲದಿರುವುದರಿಂದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಸಂಚಾರಕ್ಕೆ ತೊಂದರೆ ಅನುಭವಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಗ್ರಾಮಕ್ಕೆ ನೇರವಾಗಿ ಸಾರಿಗೆ ಬಸ್ ಕಲ್ಪಿಸುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು.
ರಾಮಾಪುರ ಮಾರ್ಗದ ಮಧ್ಯೆ ಬರುವ ಕರ್ಜಗಿ ಗ್ರಾಮದ ಬಳಿ ಬಸ್ ತಿರುಗಿಸಲು ತೊಂದರೆಯಾಗುತ್ತಿರುವ ಕಾರಣ ಸಾರಿಗೆ ಅಧಿಕಾರಿಗಳು ನೇರವಾಗಿ ಬಸ್ ಸಂಚಾರ ಆರಂಭಿಸಲು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ. ಆದರೆ, ಈ ಸಮಸ್ಯೆಗೆ ಸೂಕ್ತ ಪರಿಹಾರ ಕಂಡುಕೊಂಡು ರಾಮಾಪುರ ಗ್ರಾಮಕ್ಕೆ ನೇರ ಬಸ್ ಸೌಲಭ್ಯ ಕಲ್ಪಿಸುವಂತೆ ಹಾಗೂ ವಿದ್ಯಾರ್ಥಿಗಳ ಶಿಕ್ಷಣ, ಗ್ರಾಮಸ್ಥರ ದೈನಂದಿನ ಪ್ರಯಾಣಕ್ಕೆ ಅನುಕೂಲವಾಗುವಂತೆ ಸಾರಿಗೆ ವ್ಯವಸ್ಥೆ ಮಾಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.