ಹಾವೇರಿ: ಕಬ್ಬಿನ ಬೆಲೆ ಘೋಷಣೆ ಮಾಡುವಂತೆ ಆಗ್ರಹಿಸಿ ಹಾವೇರಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ರೈತರ ಪ್ರತಿಭಟನೆ ತೀವ್ರಗೊಂಡಿದ್ದು, ರೈತ ಮುಖಂಡ ಚೂನ್ನಪ್ಪ ಪೂಜಾರಿ ಕಾರ್ಖಾನೆ ಮಾಲಕರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಾವೇರಿ ಜಿಲ್ಲೆಯ ರೈತರಿಗೆ ದೊಡ್ಡ ಪ್ರಮಾಣದಲ್ಲಿ ಅನ್ಯಾಯವಾಗುತ್ತಿದೆ. ಜಗತ್ತಿನಲ್ಲೇ ಎಲ್ಲೂ ಇಲ್ಲದ ಶುಗರ್ ಲಾಬಿ ಹಾವೇರಿಯಲ್ಲಿ ನಡೆಯುತ್ತಿದೆ ಎಂದು ಚೂನಪ್ಪ ಪೂಜಾರಿ ಆರೋಪಿಸಿದರು.

ಕಬ್ಬಿನ ಬೆಲೆ ಘೋಷಣೆ ಆಗುವವರೆಗೂ ಜಿಲ್ಲಾಧಿಕಾರಿ ಕಚೇರಿಯ ಗೇಟ್ ತೆರೆಯುವ ಪ್ರಶ್ನೆಯೇ ಇಲ್ಲ. ಬೆಲೆ ಘೋಷಣೆಯಾಗದಿದ್ದರೆ ಯಾರೂ ಹೊರ ಹೋಗದಂತಹ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಎಚ್ಚರಿಕೆ ನೀಡಿದರು. ಇನ್ನು ಕಾರ್ಖಾನೆ ಮಾಲಕರ ಮಾತು ಕೇಳುವವರಿಗೆ ರೈತರ ಪರವಾಗಿ ನಿಲ್ಲುವ ತಾಕತ್ತಿಲ್ಲ. ರೈತರ ಸಮಸ್ಯೆಗಳಿಗೆ ಸ್ಪಂದಿಸಬೇಕಾದ ಸಕ್ಕರೆ ಸಚಿವ ರುದ್ರಪ್ಪ ಲಮಾಣಿ ಅವರಿಗೂ ಕಾರ್ಖಾನೆ ಮಾಲಕರ ಮನವೊಲಿಸುವ ಶಕ್ತಿ ಇಲ್ಲ ಎಂದು ಚೂನ್ನಪ್ಪ ಪೂಜಾರಿ ಆಕ್ರೋಶ ವ್ಯಕ್ತಪಡಿಸಿದರು.

ರೈತರ ಸಮಸ್ಯೆ ಇತ್ಯರ್ಥವಾಗಬೇಕಾದರೆ ಮುಖ್ಯಮಂತ್ರಿ ಅವರೇ ಮುಂದೆ ಬರಬೇಕು. ಕಬ್ಬಿನ ಬೆಲೆ ಘೋಷಣೆ ಮಾಡುವವರೆಗೂ ಪ್ರತಿಭಟನೆ ಹಿಂಪಡೆಯುವ ಪ್ರಶ್ನೆಯೇ ಇಲ್ಲ. ಗೇಟ್ ತೆರೆಯುವುದೂ ಇಲ್ಲ ಎಂದು ಅವರು ಹೇಳಿದರು.

ಕಬ್ಬಿನ ಬೆಲೆ ನಿಗದಿ ಹಾಗೂ ರೈತರ ಸಮಸ್ಯೆಗಳ ಪರಿಹಾರಕ್ಕೆ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು ಎಂಬುದು ಪ್ರತಿಭಟನಾಕಾರರ ಪ್ರಮುಖ ಆಗ್ರಹವಾಗಿದೆ.



 


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಮದರಸಾಬ್‌ ಹಾವೇರಿ/ವಾರ್ತಾಭಾರತಿ

contributor