"ಬಸವ ಮಂಟಪ" ಪುಸ್ತಕ ಬ್ಯಾನ್ ಮಾಡುವ ಬದಲು ವಿಚಾರಗಳ ಬಗ್ಗೆ ಚರ್ಚೆ ನಡೆಯಲಿ: ನಟ ಚೇತನ್ ಅಹಿಂಸಾ
ಹಾವೇರಿ : ಬಸವ ಮಂಟಪ ಪುಸ್ತಕವನ್ನು ಮುಟ್ಟುಗೋಲು ಹಾಕಿಕೊಳ್ಳುವ ವಿಚಾರಕ್ಕೆ ಸಂಬಂಧಿಸಿದಂತೆ ನಟ ಚೇತನ್ ಕುಮಾರ್ ಪ್ರತಿಕ್ರಿಯಿಸಿದ್ದು, ಪುಸ್ತಕ ಬ್ಯಾನ್ ಮಾಡುವ ಬದಲು ಅದರಲ್ಲಿರುವ ವಿಚಾರದ ಬಗ್ಗೆ ಚರ್ಚೆ ನಡೆಸಬೇಕು. ವ್ಯಕ್ತಿಯನ್ನು ಗುರಿಯಾಗಿಸುವ ಬದಲು ವಿಚಾರಗಳನ್ನು ಟೀಕಿಸುವ ಮೂಲಕ ಪ್ರಜಾಪ್ರಭುತ್ವದ ಆಶಯಗಳನ್ನು ಎತ್ತಿಹಿಡಿಯಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.
ತಮ್ಮ ಪಕ್ಷದ (ಅಹಿಂಸಾ ಚೇತನ್) ಪ್ರಚಾರಕ್ಕಗಿ ಹಾವೇರಿಗೆ ಬಂದಿದ್ದ ವೇಳೆ ನಗರದ ಪ್ರವಾಸಿ ಮಂದಿರದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನುಭವ ಮಂಟಪದ ಮೂಲ ಆಶಯವೇ ಚರ್ಚೆ, ಸಂವಾದ ಮತ್ತು ಪ್ರಜಾಪ್ರಭುತ್ವವಾಗಿದೆ. ಆದರೆ ಪ್ರಸ್ತುತ ಭಿನ್ನಾಭಿಪ್ರಾಯಗಳಿಗೆ ಅವಕಾಶ ನೀಡದ ವಾತಾವರಣ ನಿರ್ಮಾಣವಾಗುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದರು.
ರವಿ ಹಂಜ್ ಅವರ ವಿಚಾರಗಳು ತಪ್ಪಾಗಿದ್ದರೆ ಜನರೇ ಅವುಗಳನ್ನು ತಿರಸ್ಕರಿಸುತ್ತಾರೆ. ಅದಕ್ಕಾಗಿ ಪುಸ್ತಕವನ್ನು ನಿಷೇಧಿಸುವ ಅಥವಾ ವ್ಯಕ್ತಿಯನ್ನು ಕ್ರಿಮಿನಲ್ ಮಾಡುವ ಅಗತ್ಯವಿಲ್ಲ. ಪುಸ್ತಕ ಬ್ಯಾನ್ ಮಾಡುವ ಮೂಲಕ ಹೊಸ ವಿಚಾರಗಳ ಹುಟ್ಟಿಗೆ ತಡೆಯೊಡ್ಡಿದಂತಾಗುತ್ತದೆ. ವ್ಯಕ್ತಿಯನ್ನು ಗುರಿಯಾಗಿಸಿ ಕ್ರಮ ಕೈಗೊಂಡರೆ ಭವಿಷ್ಯದಲ್ಲಿ ಹೊಸ ವಿಚಾರಗಳನ್ನು ಮಂಡಿಸಲು ಯಾರೂ ಮುಂದೆ ಬರುವುದಿಲ್ಲ ಎಂದು ಹೇಳಿದರು.
ಜನರ ಹಣವನ್ನು ಜನರಿಗೆ ಹಂಚುವುದು ಆರ್ಥಿಕ ನ್ಯಾಯದ ಪರಿಕಲ್ಪನೆಯಾಗಿದೆ. ಅದನ್ನು ಕಳ್ಳತನ ಎಂದು ಕರೆಯುವುದು ಸರಿಯಲ್ಲ. ಬಂಡವಾಳಶಾಹಿ ಮನಸ್ಥಿತಿಯಲ್ಲಿ ಬಡವರನ್ನು ಸೋಮಾರಿಗಳೆಂದು ನೋಡುವ ಪ್ರವೃತ್ತಿ ಇದೆ ಎಂದು ಟೀಕಿಸಿದರು.
ಪುಸ್ತಕ ನಿಷೇಧ, ಎಫ್ಐಆರ್ ದಾಖಲಿಸುವುದು ಹಾಗೂ ಜೈಲು ಸಂಸ್ಕೃತಿಯ ಮೂಲಕ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವುದು ಸರಿಯಲ್ಲ. ಸಂವಿಧಾನದ ಆರ್ಟಿಕಲ್ 19 ನೀಡಿರುವ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ತರುವ ಪ್ರಯತ್ನಗಳು ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ ಎಂದು ಅವರು ಹೇಳಿದರು.
ಪ್ರಜಾಪ್ರಭುತ್ವದಲ್ಲಿ ಉತ್ತಮ ವಿಚಾರಗಳನ್ನೂ, ಕೆಟ್ಟ ವಿಚಾರಗಳನ್ನೂ ವ್ಯಕ್ತಪಡಿಸಲು ಸ್ವಾತಂತ್ರ್ಯವಿದೆ. ರಾಜಕಾರಣಿಗಳು ಪ್ರತಿದಿನ ಹಲವು ಮೂರ್ಖತನದ ಹೇಳಿಕೆಗಳನ್ನು ನೀಡುತ್ತಾರೆ. ಆದರೂ ಅವರಿಗೆ ಮಾತನಾಡುವ ಸ್ವಾತಂತ್ರ್ಯವಿದೆ. ಅದೇ ರೀತಿ ರವಿ ಹಂಜ್ ಅವರಿಗೂ ತಮ್ಮದೇ ರೀತಿಯಲ್ಲಿ ವಿಚಾರಗಳನ್ನು ವ್ಯಕ್ತಪಡಿಸಲು ಅವಕಾಶ ನೀಡಬೇಕು ಎಂದರು.
ವ್ಯಕ್ತಿಯನ್ನು ಟಾರ್ಗೆಟ್ ಮಾಡುವ ಬದಲು ವಿಚಾರಗಳ ಆಧಾರದಲ್ಲಿ ಚರ್ಚೆ ನಡೆಯಬೇಕು. ಹಿಂದೂ ದೇವರುಗಳನ್ನು ಪ್ರಶ್ನಿಸಿದಾಗ ಅಭಿವ್ಯಕ್ತಿ ಸ್ವಾತಂತ್ರ್ಯದ ಪರ ಮಾತನಾಡುವವರು, ಬಸವಣ್ಣನವರ ವಿಚಾರಗಳನ್ನು ಪ್ರಶ್ನಿಸಿದಾಗ ವಿರೋಧ ವ್ಯಕ್ತಪಡಿಸುವುದು ಏಕೆ? ಬಸವಣ್ಣನವರನ್ನು ಪ್ರಶ್ನಿಸುವುದೂ ಅಭಿವ್ಯಕ್ತಿ ಸ್ವಾತಂತ್ರ್ಯದ ಭಾಗವೇ ಆಗಿದೆ ಎಂದರು.
ಆಯ್ದ ವಿಚಾರಗಳಿಗೆ ಮಾತ್ರ ಅಭಿವ್ಯಕ್ತಿ ಸ್ವಾತಂತ್ರ್ಯ ನೀಡುವ ಧೋರಣೆ ಬಹಳ ಅಪಾಯಕಾರಿ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಸೇರಿದಂತೆ ಎಲ್ಲ ರಾಜಕೀಯ ಪಕ್ಷಗಳಿಗೂ ಸಮಾನ ಅಭಿವ್ಯಕ್ತಿ ಸ್ವಾತಂತ್ರ್ಯ ಇರಬೇಕು ಎಂದು ಅಭಿಪ್ರಾಯಪಟ್ಟರು. ಮನುಕುಲದ ಅತ್ಯುತ್ತಮ ವ್ಯಕ್ತಿಗಳಲ್ಲಿ ಬಸವಣ್ಣ ಮತ್ತು ಬಸವಾದಿ ಶರಣರು ಪ್ರಮುಖರು. ಆದರೆ ಪ್ರಜಾಪ್ರಭುತ್ವದಲ್ಲಿ ಬಸವಣ್ಣನವರ ವಿಚಾರಗಳನ್ನು ಪ್ರಶ್ನಿಸುವುದಕ್ಕೂ ಸ್ವಾತಂತ್ರ್ಯವಿದೆ. ಅದಕ್ಕೆ ಉತ್ತರವನ್ನು ವಿಚಾರಗಳ ಮೂಲಕವೇ ನೀಡಬೇಕು, ವಿರೋಧ ಅಥವಾ ದಮನದ ಮೂಲಕ ಅಲ್ಲ ಎಂದು ಹೇಳಿದರು.
ಸರ್ಕಾರ ಪೊಲೀಸ್ ವ್ಯವಸ್ಥೆಯನ್ನು ಬಳಸಿಕೊಂಡು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವುದು ಸರಿಯಲ್ಲ. ಸಚಿವ ಸಂಪುಟದಲ್ಲಿರುವ ಸಚಿವರು ಮತ್ತು ಶಾಸಕರು ಎಷ್ಟು ಪುಸ್ತಕಗಳನ್ನು ಓದಿದ್ದಾರೆ ಎಂದು ಪ್ರಶ್ನಿಸಿದ ಅವರು, ಬೇರೆಯವರ ಪುಸ್ತಕ ಸರಿಯಿಲ್ಲ ಎನ್ನುವ ಕಾರಣಕ್ಕೆ ನಿಷೇಧಿಸುವ ಬದಲು, ತಮ್ಮದೇ ವಿಚಾರಗಳನ್ನು ಒಳಗೊಂಡ ಪುಸ್ತಕವನ್ನು ಬರೆಯಲಿ ಎಂದು ಸಲಹೆ ನೀಡಿದರು.
ಒಟ್ಟಾರೆ, ಪುಸ್ತಕ ನಿಷೇಧಿಸುವ ಅಥವಾ ವ್ಯಕ್ತಿಯನ್ನು ಶಿಕ್ಷಿಸುವ ಕ್ರಮಗಳ ಬದಲು ವಿಚಾರಗಳ ಬಗ್ಗೆ ಮುಕ್ತ ಚರ್ಚೆ ನಡೆಯಬೇಕು. ಪ್ರಜಾಪ್ರಭುತ್ವದ ಆಶಯಗಳನ್ನು ಉಳಿಸಿಕೊಳ್ಳಲು ಭಿನ್ನಾಭಿಪ್ರಾಯಗಳಿಗೆ ಗೌರವ ನೀಡುವುದು ಅಗತ್ಯ ಎಂದು ಹೇಳಿದರು.