ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ರೋಗಿಯೊಂದಿಗೆ ಉಳಿದಿದ್ದ ಮಹಿಳೆ ಜೊತೆ ಅನುಚಿತ ವರ್ತನೆ
ಮಧ್ಯರಾತ್ರಿ ಮಹಿಳೆಯ ಪಕ್ಕದಲ್ಲಿ ಮಲಗಿ ಮೊಬೈಲ್, ಪರ್ಸ್ ಕಳವಿಗೆ ಯತ್ನ
ಹಾವೇರಿ: ಜಿಲ್ಲಾಸ್ಪತ್ರೆಯಲ್ಲಿ ಮಧ್ಯರಾತ್ರಿ ವ್ಯಕ್ತಿಯೊಬ್ಬ ಮಹಿಳೆಯ ಪಕ್ಕದಲ್ಲಿ ಮಲಗಿ ಅನುಚಿತವಾಗಿ ವರ್ತಿಸಿ ಕಳ್ಳತನಕ್ಕೆ ಯತ್ನಿಸಿದ ಘಟನೆ ನಡೆದಿರುವುದು ವರದಿಯಾಗಿದೆ.
ನವೆಂಬರ್ 15ರಂದು ಮಧ್ಯರಾತ್ರಿ ಹಾವೇರಿ ಜಿಲ್ಲಾಸ್ಪತ್ರೆಯ ವಾರ್ಡ್ ನಂಬರ್ 109ರಲ್ಲಿ ಈ ಘಟನೆ ನಡೆದಿದ್ದು, ದುಷ್ಕೃತ್ಯವು ಆಸ್ಪತ್ರೆಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಕಾಲು ಮುರಿತದ ಚಿಕಿತ್ಸೆಗೆ ದಾಖಲಾಗಿದ್ದ ರೋಗಿಯ ಜೊತೆ ಆಸ್ಪತ್ರೆಯಲ್ಲಿ ಉಳಿದುಕೊಂಡಿದ್ದ ಮಹಿಳೆಯೊಬ್ಬರು ನೆಲದಲ್ಲಿ ಮಲಗಿದ್ದರು. ಮಧ್ಯರಾತ್ರಿಯ ವೇಳೆ ವಾರ್ಡ್ ನೊಳಗೆ ನುಗ್ಗಿದ ಅಪರಿಚಿತ ವ್ಯಕ್ತಿ ಯಾರಿಗೂ ಅನುಮಾನ ಬಾರದಂತೆ ಮಂಚದಡಿಗೆ ಸೇರಿಕೊಂಡು ಮಹಿಳೆ ಹೊದ್ದುಕೊಂಡಿದ್ದ ಹೊದಿಕೆಯೊಳಗೆ ನುಸುಳಿದ್ದಾನೆ. ಬಳಿಕ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿದ್ದಲ್ಲದೆ, ಆಕೆಯ ಬ್ಲೌಸ್ ಒಳಗಿಟ್ಟಿದ್ದ ಮೊಬೈಲ್ ಫೋನ್ ಹಾಗೂ ಪರ್ಸ್ ಕದಿಯಲು ಯತ್ನಿಸಿದ್ದಾನೆ ಎಂದು ದೂರಲಾಗಿದೆ.
ಈ ವೇಳೆ ದಿಢೀರನೆ ಎಚ್ಚರಗೊಂಡ ಮಹಿಳೆ, ತನ್ನ ಪಕ್ಕದಲ್ಲಿದ್ದ ಅಪರಿಚಿತ ವ್ಯಕ್ತಿಯನ್ನು ಬೆಚ್ಚಿಬಿದ್ದ ಬೊಬ್ಬೆ ಹಾಕಿದ್ದಾಳೆ, ಅಲ್ಲದೇ ಆತನಿಗೆ ಕಪಾಳಮೋಕ್ಷ ಕೂಡಾ ಮಾಡಿದ್ದಾಳೆ. ವಾರ್ಡ್ ನಲ್ಲಿದ್ದ ಇತರ ರೋಗಿಗಳು ಎಚ್ಚರಗೊಳ್ಳುತ್ತಿದ್ದಂತೆ ದುಷ್ಕರ್ಮಿಯು ಅಲ್ಲಿಂದ ಪರಾರಿಯಾಗಿದ್ದಾನೆ.
ಆಸ್ಪತ್ರೆಯ ವಾರ್ಡ್ ನಲ್ಲೇ ಇಂತಹ ಘಟನೆ ನಡೆದಿರುವುದಕ್ಕೆ ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ. ಸೂಕ್ತ ಭದ್ರತಾ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿದ್ದಾರೆ.
ಹಾವೇರಿ ಶಹರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳ ಆಧಾರದಲ್ಲಿ ಆರೋಪಿಯನ್ನು ಪತ್ತೆಹಚ್ಚುವ ಕಾರ್ಯ ನಡೆಸುತ್ತಿದ್ದಾರೆ.