‘ಎಸ್‍ಐಆರ್’ ಖಾಸಗಿ ದೂರಿಗೆ ಅವಕಾಶ ಇಲ್ಲ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ
"ಕಾಂಗ್ರೆಸ್‍ನವರು ಖಾಸಗಿ ದೂರುಗಳನ್ನು ನೀಡುತ್ತಿರುವುದು ಸರಿಯಲ್ಲ, ಅವರಿಗೆ ಆ ಅಧಿಕಾರವೇ ಇಲ್ಲ"
ಹಾವೇರಿ : ‘ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ(ಎಸ್‍ಐಆರ್) ಪ್ರಕ್ರಿಯೆ ಸಂಬಂಧ ನಮೂನೆ-7ರ ಅರ್ಜಿಯನ್ನು ಯಾರೂ ಬೇಕಾದರೂ ಕೊಡಲು ಅವಕಾಶವಿದೆ. ಏನಾದರೂ ಲೋಪವಿದ್ದರೆ ಚು.ಆಯೋಗ ದೂರು ನೀಡಬಹುದು, ಅದನ್ನು ಹೊರತುಪಡಿಸಿ ಖಾಸಗಿ ದೂರು ನೀಡಲು ಅವಕಾಶವಿಲ್ಲ’ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಬುಧವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಎಸ್‍ಐಆರ್ ಪ್ರಕ್ರಿಯೆ ಅತ್ಯಂತ ಪಾರದರ್ಶಕವಾಗಿ ನಡೆದಿದೆ. ಅರ್ಜಿ ಕೊಟ್ಟ ತಕ್ಷಣ ತಪ್ಪು ಎಂದು ಅಲ್ಲ, ಪರಿಶೀಲನೆ ಮಾಡಬೇಕು. ಕಾಂಗ್ರೆಸ್‍ನವರು ಖಾಸಗಿ ದೂರುಗಳನ್ನು ನೀಡುತ್ತಿರುವುದು ಸರಿಯಲ್ಲ. ಅವರಿಗೆ ಆ ಅಧಿಕಾರವೇ ಇಲ್ಲ. ಕಾಂಗ್ರೆಸ್‍ಗರು ಅಲ್ಪಸಂಖ್ಯಾತರನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
ಮೋದಿಯವರು 25 ವರ್ಷ ಜನಸೇವೆ ಮಾಡಿರುವ ಹಿನ್ನೆಲೆಯಲ್ಲಿ ಸೇವಾ ಜ್ಯೋತಿ ಕಾರ್ಯಕ್ರಮ ಮಾಡಿದ್ದೇವೆ. ಆದರ್ಶಗಳು ನಶಿಸಿ ಹೋಗಿರುವ ಕಾಲದಲ್ಲಿ ಪ್ರಧಾನಿ ಮೋದಿ ಆದರ್ಶ ಆಡಳಿತ ತರುವ ಪ್ರಯತ್ನ ಮಾಡಿದ್ದಾರೆ. ಜಾಗತಿಕವಾಗಿ ನಮ್ಮ ದೇಶ ಆರ್ಥಿಕವಾಗಿ ಮೂರನೇ ಸ್ಥಾನದಲ್ಲಿದೆ. ಅದನ್ನು ಇನ್ನಷ್ಟು ಅಭಿವೃದ್ದಿ ಮಾಡುವ ದೃಢ ಸಂಕಲ್ಪ ಮಾಡಿದ್ದೇವೆ ಎಂದರು.
ಬೇಡ್ತಿ-ವರದಾ ಯೋಜನೆ ಡಿಪಿಆರ್‍ಗೆ ಕೆಲವರು ಅಡ್ಡಿಪಡಿಸುತ್ತಿದ್ದಾರೆ. ಡಿಪಿಆರ್ ಬಂದ ಮೇಲೆ ಎಷ್ಟು ಅರಣ್ಯ ಹೋಗುತ್ತದೆ ಎನ್ನುವುದು ಗೊತ್ತಾಗುತ್ತದೆ. ಅದು ಬರುವ ಮೊದಲೇ ನಾವೇ ತಜ್ಞರ ರೀತಿಯಲ್ಲಿ ಮಾತಾಡುವುದು ಬೇಡ. ಈ ಬಗ್ಗೆ ಚರ್ಚಿಸಲು ಜನಪ್ರತಿನಿಧಿಗಳು ಹಾಗೂ ಹೋರಾಟಗಾರರ ಸಭೆ ಕರೆಯುವಂತೆ ಸಿಎಂಗೆ ಪತ್ರ ಬರೆದಿದ್ದೇನೆ. ಅವರು ಸಭೆ ಕರೆಯುವ ಭರವಸೆ ಇದೆ ಎಂದು ಹೇಳಿದರು.