ಹಾವೇರಿ : ರಾಜ್ಯದ ಸಚಿವರ ಮೇಲೆ ಸ್ಟಿಂಗ್ ಆಪರೇಷನ್ ಆಗಿದೆ ಅಂತ ಸ್ವತ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಈ ಬಗ್ಗೆ ಸಿಬಿಐ ನಿಂದ ತನಿಖೆ ನಡೆಸಬೇಕು. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಶೀಘ್ರ ತೀರ್ಮಾನ ಮಾಡಬೇಕು ಎಂದು ಸಂಸದ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ.

ಮಂಗಳವಾರ ಹಾವೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ಟಿಂಗ್ ಆಪರೇಷನ್ ಮೊದಲು ಸೀಮಿತವಾಗಿ ಕೆಲವೇ ಕೆಲವು ಸಂದರ್ಭಗಳಲ್ಲಿ ಮಾಡ್ತಾ ಇದ್ರು. ಈಗ ಅದು ರಾಜಕೀಯ ಲಾಭಕ್ಕಾಗಲಿ ಅಥವಾ ರಾಜಕೀಯ ವಿರೋಧಿಗಳನ್ನು ದಮನ ಮಾಡುವುದಕ್ಕಾಗಿ ಉಪಯೋಗ ಆಗ್ತಾ ಇರುವಂತದ್ದು ಇತ್ತೀಚಿನ ದಿನಗಳಲ್ಲಿ ನಡೆಯುತ್ತಿದೆ ಎಂದು ಹೇಳಿದರು.

ಪ್ರಮುಖವಾಗಿ ಮುಖ್ಯಮಂತ್ರಿಗಳೇ ಸ್ಟಿಂಗ್ ಆಪರೇಷನ್ ಆಗುತ್ತಿದೆ ಹುಷಾರಾಗಿರಿ ಅಂತ ಐದು ಜನ ಮಂತ್ರಿಗಳಿಗೆ ಕ್ಯಾಬಿನೆಟ್ ನಲ್ಲೇ ಎಲ್ಲರ ಎದುರಿಗೆ ಹೇಳಿದ ಮೇಲೆ ಮುಖ್ಯಮಂತ್ರಿಗೆ ಈ ಬಗ್ಗೆ ಮಾಹಿತಿ ಇರಬೇಕಲ್ಲ. ಮಾಹಿತಿ ಇಲ್ಲದೆ ಹೇಗೆ ಹೇಳುತ್ತಾರೆ ಎಂದು ಬಸವರಾಜ ಬೊಮ್ಮಾಯಿ ಪ್ರಶ್ನಿಸಿದರು.

ಮುಖ್ಯಮಂತ್ರಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ನನ್ನ ಮೇಲೂ ಸ್ಟಿಂಗ್ ಆಗಿದೆ ಎಂದು ಹೇಳಿಕೊಂಡಿದ್ದಾರೆ. ಮತ್ತೆ ಅವರ ಮೇಲೆ ಸ್ಟಿಂಗ್ ಆಗಿದೆ, ಆ ಐದು ಜನ ಮಂತ್ರಿಗಳ ಮೇಲೆ ಸ್ಟಿಂಗ್ ಆಗ್ತಾ ಇದೆ, ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಸ್ಟಿಂಗ್ ಆಗೋ ರೀತಿಯಲ್ಲಿ ಏನೋ ಸಾಮಾಜಿಕ ಜಾಲತಾಣದಲ್ಲಿ ಓಡುತ್ತಿದೆ ಎಂದು ಅವರು ಹೇಳಿದರು.

ಈ ಇಂಥ ಪರಿಸ್ಥಿತಿ ಇದ್ದರೂ ಕೂಡ ಒಂದು ತನಿಖೆಗೆ ಯಾಕೆ ಆದೇಶ ಮಾಡುತ್ತಿಲ್ಲ. ತನಿಖೆ ಆಗಲಿ, ಸತ್ಯಾಸತ್ಯತೆ ಹೊರಗಡೆ ಬರಲಿ. ಯಾರು ಯಾರ ಮೇಲೆ ಸ್ಟಿಂಗ್ ಮಾಡುತ್ತಿದ್ದಾರೆ, ಯಾತಕ್ಕಾಗಿ ಸ್ಟಿಂಗ್ ಮಾಡುತ್ತಿದ್ದಾರೆ. ಆ ಸ್ಟಿಂಗ್‍ನ ಸತ್ಯಾಸತ್ಯತೆ ಏನಿದೆ, ಅದರ ಉದ್ದೇಶ ಏನಿದೆ ಎಲ್ಲವೂ ಕೂಡ ಹೊರಗಡೆ ಬರಬೇಕಲ್ಲ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.

ಏನೇ ಆದರೂ ಒಂದು ಎಸ್‍ಐಟಿ ಮಾಡುವುದು ಈ ಸರಕಾರದ ಧೋರಣೆ ಆಗಿದೆ. ಕಳೆದ ಮೂರು ವರ್ಷದಲ್ಲಿ 25 ಎಸ್.ಐ.ಟಿ.ಗಳು ಆಗಿವೆ. ಈ ಎಸ್.ಐ.ಟಿ.ಯಿಂದ ನ್ಯಾಯ ಸಿಗುವುದಿಲ್ಲ ಅಂತ ಬಹಳ ಸ್ಪಷ್ಟವಾಗಿದೆ. ಆದುದರಿಂದ, ಈ ಕುರಿತು ಸಿಬಿಐ ತನಿಖೆಗೆ ವಹಿಸುವುದು ಸೂಕ್ತ ಎಂದು ಅವರು ಅಭಿಪ್ರಾಯಪಟ್ಟರು.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor