ಭೋಜನದ ನಂತರ ಹಣ್ಣು ಸೇವಿಸುವುದು ಉತ್ತಮವೆ?; ತಜ್ಞರು ಏನು ಹೇಳುತ್ತಾರೆ?
ಸಾಂದರ್ಭಿಕ ಚಿತ್ರ | Photo Credit : magnific.com
ಹಣ್ಣುಗಳು ನೈಸರ್ಗಿಕವಾಗಿ ಆರೋಗ್ಯಕರ ಮತ್ತು ಪೋಷಕಾಂಶಗಳಿಂದ ತುಂಬಿರುವುದರಿಂದಾಗಿ ಸ್ಪಷ್ಟ ಆಯ್ಕೆಯಾಗಿರುತ್ತವೆ. ಈ ಆಯ್ಕೆ ಸೂಕ್ತವೆ? ತಜ್ಞರು ಏನು ಹೇಳುತ್ತಾರೆ
ಊಟದ ನಂತರ ಸಿಹಿ ತಿನ್ನುವುದು ಬಹಳಷ್ಟು ಮಂದಿಗೆ ವಾಡಿಕೆಯಾಗಿರುತ್ತದೆ. ಐಸ್ಕ್ರೀಮ್ ಅಥವಾ ಸಕ್ಕರೆ ಅಂಶ ಹೆಚ್ಚಿರುವ ಆಹಾರಗಳು ಭಾರವೆಂದು ಅನಿಸಬಹುದು. ಹೀಗಾಗಿ ಬಹಳಷ್ಟು ಮಂದಿ ಊಟವಾದ ನಂತರ ಹಣ್ಣು ಸೇವಿಸುವ ಅಭ್ಯಾಸ ಹೊಂದಿದ್ದಾರೆ. ಹಣ್ಣುಗಳು ನೈಸರ್ಗಿಕವಾಗಿ ಆರೋಗ್ಯಕರ ಮತ್ತು ಪೋಷಕಾಂಶಗಳಿಂದ ತುಂಬಿರುವುದರಿಂದಾಗಿ ಸ್ಪಷ್ಟ ಆಯ್ಕೆಯಾಗಿರುತ್ತವೆ. ಈ ಆಯ್ಕೆ ಸೂಕ್ತವೆ? ತಜ್ಞರು ಏನು ಹೇಳುತ್ತಾರೆ.
ಜಲಂಧರ್ ಫೋರ್ಟಿಸ್ ಆಸ್ಪತ್ರೆಯ ಸಲಹೆಗಾರರಾದ ಗ್ಯಾಸ್ಟ್ರೋಎಂಟರಾಲಜಿಸ್ಟ್ ಡಾ. ಸಾಹುಲ್ ನೊಹ್ರಿಯಾ ಪ್ರಕಾರ, ಹಣ್ಣುಗಳು ಪೌಷ್ಟಿಕ ಆಹಾರ ಮತ್ತು ಸುಲಭವಾಗಿ ಜೀರ್ಣವಾಗುತ್ತವೆ. ಏಕೆಂದರೆ ಅವು ಸಾಮಾನ್ಯವಾಗಿ 20ರಿಂದ 40 ನಿಮಿಷಗಳಲ್ಲಿ ಹೊಟ್ಟೆಯ ಮೂಲಕ ಹಾದು ಹೋಗುತ್ತವೆ. ಆದರೂ ಊಟದ ನಂತರ ತಕ್ಷಣವೇ ಅವುಗಳನ್ನು ತಿಂದಾಗ ಸಮಸ್ಯೆಗಳು ಉದ್ಭವಿಸುತ್ತವೆ.
ರಾತ್ರಿ ಭೋಜನದ ನಂತರ ಏಕೆ ಹಣ್ಣು ತಿನ್ನಬಾರದು?
ವೈದ್ಯರ ಪ್ರಕಾರ, ಹಣ್ಣುಗಳು ಬೇಗನೇ ಜೀರ್ಣವಾಗುತ್ತವೆಯಾದರೂ, ಭಾರೀ ಬೋಜನದ ನಂತರ ದೇಹವು ಇನ್ನೂ ಊಟದಿಂದ ಸಿಕ್ಕ ಕೊಬ್ಬು ಮತ್ತು ಕಾರ್ಬೋಹೈಡ್ರೇಟ್ಗಳನ್ನು ಸಂಸ್ಕರಿಸುವಲ್ಲಿ ಮಗ್ನವಾಗಿರುವ ಕಾರಣದಿಂದ ಹಣ್ಣುಗಳು ಹೆಚ್ಚು ಸಮಯ ಹೊಟ್ಟೆಯಲ್ಲಿ ಉಳಿಯುತ್ತವೆ. ಹೀಗಾಗಿ ಭೋಜನದ ನಂತರ ಹಣ್ಣುಗಳನ್ನು ತಿನ್ನುವುದು ಎಲ್ಲರ ಜೀರ್ಣಾಂಗ ವ್ಯವಸ್ಥೆಗೆ ಸರಿಹೊಂದುವುದಿಲ್ಲ.
ಹೀಗೆ ಹಣ್ಣಿನ ಜೀರ್ಣಕ್ರಿಯೆ ವಿಳಂಬವಾದಾಗ ಜೀರ್ಣಕ್ಕೆ ಸಂಬಂಧಿಸಿದ ಅಸ್ವಸ್ಥತೆ ಉಂಟಾಗಬಹುದು. ಹಣ್ಣುಗಳಲ್ಲಿನ ಸಕ್ಕರೆ ಮತ್ತು ನಾರು ಕರುಳಿನಲ್ಲಿ ಹುದುಗಲು ಪ್ರಾರಂಭಿಸಬಹುದು. ಇದರ ಪರಿಣಾಮವಾಗಿ ಹೊಟ್ಟೆ ಉಬ್ಬುವುದು, ಅನಿಲ ಅಥವಾ ತಿಂದ ನಂತರ ಹೊಟ್ಟೆ ತುಂಬಿದ ಭಾವನೆ ಬರಬಹುದು. ಹಣ್ಣುಗಳು ಹೆಚ್ಚಿನ ನಾರಿನಂಶ ಹೊಂದಿರುವ ಕಾರಣ ಭೋಜನದ ನಂತರ ಅವುಗಳನ್ನು ತಿನ್ನುವುದು ಕೆಲವೊಮ್ಮೆ ಜೀರ್ಣಾಂಗ ವ್ಯವಸ್ಥೆಗೆ ತುಂಬಾ ಭಾರವಾಗಿರುತ್ತದೆ. ಹೊಟ್ಟೆ ಬಿಗಿತ, ಆಗಾಗ್ಗೆ ಉಬ್ಬುವುದು, ಹೊಟ್ಟೆಯ ಸೆಳೆತ ಮತ್ತು ತೊಂದರೆಗೆ ಒಳಗಾದ ನಿದ್ರೆಯಂತಹ ಲಕ್ಷಣಗಳಿಗೆ ಕಾರಣವಾಗುತ್ತದೆ. ಹೀಗೆ ಜೀರ್ಣಾಂಗ ವ್ಯವಸ್ಥೆ ಮೇಲೆ ತಡ ರಾತ್ರಿಯವರೆಗೆ ಒತ್ತಡ ಬೀಳುತ್ತದೆ.
ಯಾವ ಹಣ್ಣುಗಳನ್ನು ತಪ್ಪಿಸಬೇಕು?
ಎಲ್ಲಾ ಹಣ್ಣುಗಳು ಅಸ್ವಸ್ಥತೆಯನ್ನು ಉಂಟು ಮಾಡುವುದಿಲ್ಲ. ಹಾಗಿದ್ದರೂ ಕೆಲವು ಹಣ್ಣುಗಳು, ಅವುಗಳ ಪೌಷ್ಠಿಕಾಂಶದ ಸಂಯೋಜನೆ ಆಧರಿಸಿ ಖಂಡಿತವಾಗಿ ಅಸ್ವಸ್ಥತೆ ಉಂಟು ಮಾಡಬಹುದು. “ಸೇಬು, ಪೇರಳೆ, ಮಾವು ಮತ್ತು ಕಲ್ಲಂಗಡಿ ಮುಂತಾದ ಹಣ್ಣುಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಫ್ರಕ್ಟೋಸ್ ಇರುತ್ತದೆ. ಇದು ಅನೇಕ ಮಂದಿ ಸರಿಯಾಗಿ ಜೀರ್ಣಿಸಿಕೊಳ್ಳಲು ಹೆಣಗಾಡುವ ನೈಸರ್ಗಿಕ ಸಕ್ಕರೆ” ಎಂದು ಎಚ್ಚರಿಸಿದ್ದಾರೆ ವೈದ್ಯರು.
ದೇಹವು ಫ್ರಕ್ಟೋಸ್ ಅನ್ನು ಪರಿಣಾಮಕಾರಿಯಾಗಿ ಜೀರ್ಣಿಸಿಕೊಳ್ಳಲು ಸಾಧ್ಯವಾಗದೆ ಇದ್ದರೆ ಅದು ಕರುಳಿನಲ್ಲಿ ಹೆಚ್ಚು ಕಾಲ ಉಳಿಯುತ್ತದೆ. ಹೆಚ್ಚುವರಿ ನೀರನ್ನು ಕರುಳಿನಲ್ಲಿ ಎಳೆಯುತ್ತದೆ ಮತ್ತು ಕರುಳಿನ ಬ್ಯಾಕ್ಟೀರಿಯಗಳು ಸಕ್ಕರೆಯನ್ನು ಹುದುಗಿಸಲು ಅನುವು ಮಾಡಿಕೊಡುತ್ತದೆ. ಪರಿಣಾಮವಾಗಿ ಈ ಹಣ್ಣುಗಳನ್ನು ತಿಂದ ನಂತರ ಅನೇಕರಿಗೆ ಹಣ್ಣು ತಿಂದ ನಂತರ ಹೊಟ್ಟೆ ಉಬ್ಬುವುದು, ಅನಿಲ ಮತ್ತು ಭಾರವಾದ ಅನುಭವವಾಗುತ್ತದೆ.
ಭೋಜನದ ನಂತರ ಹಣ್ಣನ್ನು ಯಾರು ತಿನ್ನಬಾರದು?
ಇರಿಟೇಬಲ್ ಬವೆಲ್ ಸಿಂಡ್ರೋಮ್ (IBS) ಇರುವವರು ಅಥವಾ ಸೂಕ್ಷ್ಮ ಜೀರ್ಣಾಂಗ ವ್ಯವಸ್ಥೆ ಇರುವ ಜನರಲ್ಲಿ ಹಣ್ಣು ತಿಂದ ನಂತರ ಫ್ರಕ್ಟೋಸ್ನಿಂದಾಗಿ ಅಸ್ವಸ್ಥತೆ ಉಂಟಾಗಬಹುದು. ಅವರು ಹೊಟ್ಟೆ ಉಬ್ಬುವುದು, ಸೆಳೆತ ಉಂಟಾಗಬಹುದು.
ಹಣ್ಣುಗಳನ್ನು ಯಾವಾಗ ತಿನ್ನಬಹುದು?
ಊಟದ ನಂತರ ತಕ್ಷಣ ಹಣ್ಣು ತಿನ್ನುವ ಬದಲು ಮಧ್ಯಾಹ್ನ ಅಥವಾ ಸಂಜೆ ತಿನಿಸಾಗಿ ಸೇವಿಸಬಹುದು. ಹಾಗಿದ್ದರೂ ಜೀರ್ಣವಾಗುವುದು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುವ ಕಾರಣದಿಂದ ಗಮನಿಸಿ ತಿನ್ನಬೇಕಾಗುತ್ತದೆ. ಹಣ್ಣುಗಳನ್ನು ತಿಂದ ನಂತರ ಊಟದ ಸಮಯದಲ್ಲಿ ಯಾವ ರೀತಿ ಪ್ರತಿಕ್ರಿಯೆ ಸಿಗುತ್ತದೆ ಎನ್ನುವ ಮೇಲ್ವಿಚಾರಣೆ ಮಾಡಬೇಕು. ಹಾಗೆಂದು ಹಣ್ಣುಗಳನ್ನು ಸಂಪೂರ್ಣವಾಗಿ ತಪ್ಪಿಸಬೇಕು ಎಂದಲ್ಲ. ಕೆಲವೊಮ್ಮೆ ಹಣ್ಣುಗಳನ್ನು ತಿಂದ ನಂತರ ಹೊಟ್ಟೆ ಉಬ್ಬುವುದು ಅಥವಾ ಅನನುಕೂಲತೆ ಅನುಭವಿಸಬಹುದು. ಅಸ್ವಸ್ಥತೆ ಚಿಹ್ನೆಗಳನ್ನು ಸೂಕ್ಷ್ಮವಾಗಿ ಗಮನಿಸಿ ಸೇವಿಸಬೇಕು.
ಸೂಚನೆ: ಈ ಲೇಖನವನ್ನು ಸಾಮಾಜಿಕ ಮಾಧ್ಯಮಗಳಿಂದ ಮಾಹಿತಿ ಉದ್ದೇಶಕ್ಕಾಗಿ ಮಾತ್ರ ನೀಡಲಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ವೈದ್ಯಕೀಯ ಸಮಸ್ಯೆಗಳಿದ್ದರೆ ನಿಮ್ಮ ವಿಶ್ವಾಸಾರ್ಹ ವೈದ್ಯರನ್ನು ಭೇಟಿಯಾಗಿದೆ.
ಕೃಪೆ: hindustantimes.com