×
Ad

ಪ್ಯಾಕೇಜ್ಡ್ ಹಾಲನ್ನು ಬಿಸಿ ಮಾಡುವ ಅಗತ್ಯವಿದೆಯೆ?

Update: 2025-12-06 18:43 IST

ಸಾಂದರ್ಭಿಕ ಚಿತ್ರ | Photo Credit : freepik



ಭಾರತೀಯ ಮನೆಗಳಲ್ಲಿ ಹಾಲು ಬಿಸಿ ಮಾಡುವುದು ದಿನಚರಿಯಾಗಿದೆ. ಅದು ಯಾವ ರೀತಿ ಬಂದರೂ ಬಿಸಿ ಮಾಡಿದ ನಂತರವೇ ಬಳಸಲಾಗುತ್ತದೆ. ಆದರೆ ಈ ದೈನಂದಿನ ಅಭ್ಯಾಸದ ಅಗತ್ಯವಿದೆಯೆ? ವೈರಲ್ ಆಗಿರುವ ಇನ್ಸ್ಟಾಗ್ರಾಂ ರೀಲ್ನಲ್ಲಿ ಮೂಳೆ ಶಸ್ತ್ರಚಿಕಿತ್ಸಕ ಡಾ ಮನನ್ ವೋರಾ ಈ ದೀರ್ಘಕಾಲದ ನಂಬಿಕೆಯನ್ನು ಪ್ರಶ್ನಿಸುತ್ತಾರೆ.

“ಪ್ಯಾಕ್ ಮಾಡಲಿರುವ ಹಾಲನ್ನು ಈಗಾಗಲೇ ಪಾಶ್ಚರೀಕರಿಸಲಾಗಿದೆ ಮತ್ತು ಹೆಚ್ಚಿನ ತಾಪಮಾನದಲ್ಲಿ ಸಂಸ್ಕರಿಸಲಾಗಿದೆ. ಅಲ್ಲಿ ಹಾನಿಕಾರಕ ಬ್ಯಾಕ್ಟೀರಿಯಗಳು ನಾಶವಾಗುತ್ತವೆ. ಇದನ್ನು ಸುರಕ್ಷತಾ ದೃಷ್ಟಿಕೋನದಿಂದ ಮನೆಯಲ್ಲಿ ಹೆಚ್ಚು ಕುದಿಸುವುದು ಅಗತ್ಯವಿಲ್ಲ. ಹೀಗೆ ಅಧಿಕ ಬಿಸಿಯಾಗುವುದು ರುಚಿ ಮತ್ತು ಪೋಷಣೆಯ ಮೇಲೂ ಪರಿಣಾಮ ಬೀರುತ್ತದೆ. ಸಾಮಾನ್ಯ ಬೆಚ್ಚಗಿನ ಸ್ಥಿತಿಗೆ ಬಿಸಿ ಮಾಡಿ ಅದನ್ನು ಚಹಾ ಮತ್ತು ಕಾಫಿಯಲ್ಲಿ ಬಳಸಬಹುದು” ಎಂದು ಅವರು ವಿವರಿಸಿದ್ದಾರೆ.

ಪಾಶ್ಚರೀಕರಣ ಎಂದರೇನು?

ಮನನ್ ವೋರಾ ವಿವರಿಸುವ ಪ್ರಕಾರ, “ಪಾಶ್ಚರೀಕರಣವು ಒಂದು ಶಾಖ-ಚಿಕಿತ್ಸಾ ಪ್ರಕ್ರಿಯೆಯಾಗಿದ್ದು, ಹಸಿ ಹಾಲಿನಲ್ಲಿ ನೈಸರ್ಗಿಕವಾಗಿ ಇರುವ ಹಾನಿಕಾರಕ ಬ್ಯಾಕ್ಟೀರಿಯಾಗಳನ್ನು ಕೊಲ್ಲುವ ಮೂಲಕ ಹಾಲನ್ನು ಸೇವನೆಗೆ ಸುರಕ್ಷಿತವಾಗಿಸಲು ಬಳಸಲಾಗುತ್ತದೆ. ಈ ಪ್ರಕ್ರಿಯೆಯಲ್ಲಿ, ತಣ್ಣಗಾದ ಹಸಿ ಹಾಲನ್ನು ನಿಗದಿತ ಅವಧಿಗೆ ನಿರ್ದಿಷ್ಟ ತಾಪಮಾನಕ್ಕೆ ತ್ವರಿತವಾಗಿ ಬಿಸಿ ಮಾಡಲಾಗುತ್ತದೆ ಮತ್ತು ನಂತರ ತ್ವರಿತವಾಗಿ ತಂಪಾಗಿಸಲಾಗುತ್ತದೆ. ಹೆಚ್ಚಿನ ಪ್ರಮಾಣಿತ ಹಾಲು ಸಂಸ್ಕರಣಾ ಘಟಕಗಳಲ್ಲಿ, ಹಾಲನ್ನು ಸುಮಾರು 72°C ಗೆ ಬಿಸಿ ಮಾಡಲಾಗುತ್ತದೆ ಮತ್ತು ಆ ತಾಪಮಾನದಲ್ಲಿ ಕನಿಷ್ಠ 15 ಸೆಕೆಂಡುಗಳ ಕಾಲ ಹಿಡಿದಿಟ್ಟುಕೊಳ್ಳಲಾಗುತ್ತದೆ ಮತ್ತು ನಂತರ ತಕ್ಷಣವೇ ಸುಮಾರು 4°C ಗೆ ತಂಪಾಗಿಸಲಾಗುತ್ತದೆ. ಈ ನಿಯಂತ್ರಿತ ತಾಪನವು ಹಾಲಿನ ಪೌಷ್ಟಿಕಾಂಶದ ಗುಣಮಟ್ಟ ಮತ್ತು ರುಚಿಯನ್ನು ಸಂರಕ್ಷಿಸುವುದರ ಜೊತೆಗೆ ರೋಗಕಾರಕ ಸೂಕ್ಷ್ಮಜೀವಿಗಳನ್ನು ನಾಶಮಾಡಲು ಸಾಕಾಗುತ್ತದೆ.”

ಇಂದು ವ್ಯಾಪಕವಾಗಿ ಬಳಸಲಾಗುವ ಪಾಶ್ಚರೀಕರಣ ವಿಧಾನವೆಂದರೆ ಹೈ ಟೆಂಪರೇಚರ್ ಶಾರ್ಟ್ ಟೈಮ್ (ಎಚ್ಟಿಎಸ್ಟಿ) ಪಾಶ್ಚರೀಕರಣ. ಮತ್ತೊಂದು ಮುಂದುವರಿದ ವಿಧಾನವೆಂದರೆ ಅಲ್ಟ್ರಾ ಹೈ ಟೆಂಪರೇಚರ್ (ಯುಎಚ್ಟಿ) ಸಂಸ್ಕರಣೆ, ಇದನ್ನು ಅಸೆಪ್ಟಿಕ್ ಸಂಸ್ಕರಣೆ ಎಂದೂ ಕರೆಯುತ್ತಾರೆ.

ಡೈರಿ ಉದ್ಯಮವು ಹೆಚ್ಚಾಗಿ ಹೊಸದಾಗಿ ಪಾಶ್ಚರೀಕರಿಸಿದ ಹಾಲಿನ ಶಾಖವನ್ನು ಮುಂದಿನ ಬ್ಯಾಚ್ ನ ತಣ್ಣನೆಯ ಹಸಿ ಹಾಲನ್ನು ಬಿಸಿಮಾಡಲು ಬಳಸುತ್ತದೆ. ಅದೇ ಸಮಯದಲ್ಲಿ, ಒಳಬರುವ ತಣ್ಣನೆಯ ಹಾಲು ಬಿಸಿಮಾಡಿದ ಪಾಶ್ಚರೀಕರಿಸಿದ ಹಾಲನ್ನು ತಂಪಾಗಿಸಲು ಸಹಾಯ ಮಾಡುತ್ತದೆ. ಈ ಶಾಖ-ವಿನಿಮಯ ವ್ಯವಸ್ಥೆಯು ಹೆಚ್ಚುವರಿ ತಾಪನ ಮತ್ತು ಶೈತ್ಯೀಕರಣದ ಅಗತ್ಯವನ್ನು ಕಡಿಮೆ ಮಾಡುತ್ತದೆ, ಇದು ಸಂಪೂರ್ಣ ಪ್ರಕ್ರಿಯೆಯನ್ನು ಹೆಚ್ಚು ಪರಿಣಾಮಕಾರಿ ಮತ್ತು ಸುಸ್ಥಿರವಾಗಿಸುತ್ತದೆ.

ಪ್ಯಾಕ್ ಮಾಡಿದ ಹಾಲನ್ನು ಬಿಸಿ ಮಾಡುವ ಅಗತ್ಯವಿದೆಯೆ?

ಪ್ಯಾಕ್ ಮಾಡಿದ ಹಾಲನ್ನು ಈಗಾಗಲೇ ಪ್ಯಾಶ್ಚರೀಕರಿಸಲಾಗಿದೆ. ಇದು ಹಾನಿಕರ ಬ್ಯಾಕ್ಟೀರಿಯಗಳನ್ನು ಕೊಂದಿರುತ್ತದೆ. ಹೀಗಾಗಿ ಹೆಚ್ಚುವರಿ ಕುದಿಸುವುದು ಸಾಮಾನ್ಯವಾಗಿ ಅನಗತ್ಯ. ಅಧಿಕ ಬಿಸಿಯಾಗುವುದು ಅಥವಾ ದೀರ್ಘಕಾಲ ಕುದಿಸುವುದರಿಂದ ಅದರ ಪೌಷ್ಠಿಕಾಂಶದ ಗುಣಮಟ್ಟ, ಮುಖ್ಯವಾಗಿ ಬಿ-ಕಾಂಪ್ಲೆಕ್ಸ್ ಜೀವಸತ್ವಗಳು ಮತ್ತು ಪ್ರೊಟೀನ್ಗಳು ಕಡಿಮೆಯಾಗಬಹುದು. ಆದರೆ ಸುರಕ್ಷತೆ ಮತ್ತು ರುಚಿ ಬೇಕೆಂದರೆ ಉಗುರುಬೆಚ್ಚಗಿನ ತಾಪಮಾನಕ್ಕೆ ಬಿಸಿ ಮಾಡಿದರೆ ಸಾಕಾಗುತ್ತದೆ. ಮುಖ್ಯವಾಗಿ ಸರಿಯಾಗಿ ಶೈತ್ಯೀಕರಣಗೊಳಿಸಬೇಕು ಮತ್ತು ಆರೋಗ್ಯಕರವಾಗಿ ನಿರ್ವಹಿಸಬೇಕು.

ಕೃಪೆ: theweek.in

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News