ಹೊಸ ಸುಂಕಗಳ ವಿರುದ್ಧ ಟ್ರಂಪ್ ಆಡಳಿತದ ಮೇಲೆ ಮೊಕದ್ದಮೆ ಹೂಡಿದ ಅಮೆರಿಕದ 25 ರಾಜ್ಯಗಳ ಒಕ್ಕೂಟ

Update: 2026-08-04 09:53 IST

Photo: x.com/WPXI

ವಾಷಿಂಗ್ಟನ್: ಭಾರತವೂ ಸೇರಿದಂತೆ 60 ವ್ಯಾಪಾರ ಪಾಲುದಾರ ದೇಶಗಳ ಸರಕುಗಳ ಮೇಲೆ ಶೇ. 10ರಿಂದ ಶೇ. 12.5ರಷ್ಟು ಹೊಸ ಸುಂಕ ವಿಧಿಸಿರುವ ಡೊನಾಲ್ಡ್ ಟ್ರಂಪ್ ಆಡಳಿತದ ವಿರುದ್ಧ ಅಮೆರಿಕದ 25 ರಾಜ್ಯಗಳ ಒಕ್ಕೂಟವು ಮೊಕದ್ದಮೆ ಹೂಡಿದೆ. ಈ ಸುಂಕಗಳು ಕಾನೂನುಬಾಹಿರವಾಗಿದ್ದು, ಫೆಬ್ರವರಿಯಲ್ಲಿ ಅಮೆರಿಕಾ ಸುಪ್ರೀಂ ಕೋರ್ಟ್ ರದ್ದುಗೊಳಿಸಿದ್ದ ಹಿಂದಿನ ಆಮದು ತೆರಿಗೆಗಳನ್ನು ಹೊಸರೂಪದಲ್ಲಿ ತರುವ ಪ್ರಯತ್ನ ಇದಾಗಿದೆ ಎಂದು ದಿ ಗಾರ್ಡಿಯನ್ ವರದಿ ಮಾಡಿದೆ.

ಯುಎಸ್ ಕೋರ್ಟ್ ಆಫ್ ಇಂಟರ್‌ನ್ಯಾಷನಲ್ ಟ್ರೇಡ್‌ನಲ್ಲಿ ಈ ಬಗ್ಗೆ ಮೊಕದ್ದಮೆ ಹೂಡಿರುವ ರಾಜ್ಯಗಳ ಒಕ್ಕೂಟವು, ಸುಂಕಗಳನ್ನು ರದ್ದುಗೊಳಿಸಲು, ಅವುಗಳನ್ನು ಕಾನೂನುಬಾಹಿರವೆಂದು ಘೋಷಿಸಲು ಮತ್ತು ಈಗಾಗಲೇ ಸಂಗ್ರಹಿಸಲಾದ ಸುಂಕಗಳ ಮರುಪಾವತಿಯಾಗಬೇಕೆಂದು ಕೋರಿದೆ.

ಈ ಬಗ್ಗೆ ಹೇಳಿಕೆ ನೀಡಿರುವ ನ್ಯೂಯಾರ್ಕ್‌ನ ಅಟಾರ್ನಿ ಜನರಲ್ ಲೆಟಿಷಿಯಾ ಜೇಮ್ಸ್, ಸುಪ್ರೀಂ ಕೋರ್ಟ್‌ನಲ್ಲಿ ಸೋತ ನಂತರ, ಟ್ರಂಪ್ ಆಡಳಿತವು ಮತ್ತೊಮ್ಮೆ ಹೊಸ ರೂಪದ ಸುಂಕಗಳೊಂದಿಗೆ, ಹಲವು ಕುಟುಂಬಗಳು ಮತ್ತು ವ್ಯವಹಾರಗಳ ಮೇಲೆ ಕಾನೂನುಬಾಹಿರವಾಗಿ ತೆರಿಗೆಯನ್ನು ಹೆಚ್ಚಿಸಲು ಪ್ರಯತ್ನಿಸುತ್ತಿದೆ ಎಂದು ತಿಳಿಸಿದ್ದಾರೆ.

‘ಲಿಬರೇಶನ್ ಡೇ’ ಸುಂಕಗಳನ್ನು ಅಸಾಂವಿಧಾನಿಕ ಎಂದು ಅಮೇರಿಕಾದ ಸುಪ್ರೀಂಕೋರ್ಟ್‌ ಇತ್ತೀಚೆಗೆ ತೀರ್ಪು ನೀಡಿತ್ತು. ಬಳಿಕ ಟ್ರಂಪ್‌ ಆಡಳಿತವು, 1974ರ ವ್ಯಾಪಾರ ಕಾಯ್ದೆಯ ಸೆಕ್ಷನ್ 301ರ ಅಡಿಯಲ್ಲಿ ಈ ಹೊಸ ಸುಂಕಗಳನ್ನು ಜುಲೈನಲ್ಲಿ ಜಾರಿಗೆ ತಂದಿತ್ತು. ಬಲವಂತದ ಕಾರ್ಮಿಕರ ದುಡಿಮೆಯಿಂದ ತಯಾರಾದ ವಸ್ತುಗಳ ಆಮದನ್ನು ತಡೆಯಲು ಈ ದೇಶಗಳು ಸಾಕಷ್ಟು ಕ್ರಮ ಕೈಗೊಂಡಿಲ್ಲ ಎಂದು ವಾದಿಸಿ ಹೊಸ ಸುಂಕವನ್ನು ಜಾರಿಗೆ ತರಲಾಗಿತ್ತು. ಈ ಹೊಸ ಸುಂಕಗಳು ಭಾರತ, ಕೆನಡಾ, ಜಪಾನ್, ನಾರ್ವೆ, ತೈವಾನ್ ಮತ್ತು ಚೀನಾ ಸೇರಿದಂತೆ ಪ್ರಮುಖ ವ್ಯಾಪಾರ ಪಾಲುದಾರರ ಮೇಲೆ ಪರಿಣಾಮ ಬೀರುತ್ತವೆ ಎಂದು ಹೇಳಲಾಗಿದೆ.

ಈ ಮೊಕದ್ದಮೆಗೆ ಪ್ರತಿಕ್ರಿಯಿಸಿದ ಶ್ವೇತಭವನದ ವಕ್ತಾರ ಕುಶ್ ದೇಸಾಯಿ, ಅಮೇರಿಕಾ ವಾಣಿಜ್ಯಕ್ಕೆ ಹೊರೆಯಾಗುವ ಅಸಮಂಜಸ ಕಾರ್ಯಗಳು, ನೀತಿಗಳು ಮತ್ತು ಅಭ್ಯಾಸಗಳನ್ನು ತೆಗೆದುಹಾಕಲು ಯುನೈಟೆಡ್ ಸ್ಟೇಟ್ಸ್ ತನ್ನ ಕಾನೂನುಬದ್ಧ ಅಧಿಕಾರವನ್ನು ಬಳಸುತ್ತಿದೆ ಎಂದು ಹೇಳಿದ್ದಾರೆ.

"ಬಲವಂತದ ದುಡಿಮೆಯಿಂದ ಉತ್ಪಾದಿಸುವ ಸರಕುಗಳ ಆಮದಿನ ಮೇಲೆ ನಿಷೇಧವನ್ನು ವಿಧಿಸಲು ಮತ್ತು ಅದನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ವಿದೇಶಗಳು ವಿಫಲವಾಗಿರುವುದು ಅಸಮಂಜಸವಾಗಿದೆ ಮತ್ತು ಅಮೆರಿಕದ ಕಾರ್ಮಿಕರು ಸೇರಿದಂತೆ ಅಮೇರಿಕಾದ ವಾಣಿಜ್ಯಕ್ಕೆ ಹೊರೆಯಾಗಿದೆ. ಇದನ್ನು ಪರಿಹರಿಸಬೇಕಾಗಿದೆ. ಸೆಕ್ಷನ್ 301 ಸುಂಕಗಳು ಅಧ್ಯಕ್ಷರ ಮೊದಲ ಅವಧಿಯಿಂದಲೂ ಕಾನೂನುಬದ್ಧವಾಗಿ ಬಾಳಿಕೆ ಬರುವ ಸಾಧನವೆಂದು ಸಾಬೀತಾಗಿದೆ ಮತ್ತು ಅವು ಈಗಲೂ ಹಾಗೆಯೇ ಇವೆ" ಎಂದು ಅವರು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News