ಆಮೀರ್ ಖಾನ್ ಹತ್ಯೆಗೆ 5 ಕೋ. ರೂ. ಬಹುಮಾನ: ಜಗದ್ಗುರು ಪರಮಹಂಸ
ನಟ ಆಮೀರ್ ಖಾನ್(PTI) , ಜಗದ್ಗುರು ಪರಮಹಂಸ ಆಚಾರ್ಯ (Facebook \ Jagadguru Paramhans Acharya)
ಹೊಸದಿಲ್ಲಿ, ಜು.14: ಮಹಾರಾಷ್ಟ್ರ ಸಚಿವ ನಿತೇಶ್ ರಾಣೆಯವರು ನಟ ಆಮೀರ್ ಖಾನ್ ಅವರ ವೈಯಕ್ತಿಕ ಜೀವನದ ಕುರಿತು ಮಾಡಿರುವ ಟೀಕೆ ಹೊಸ ವಿವಾದವನ್ನು ಹುಟ್ಟುಹಾಕಿದೆ. ಆಮೀರ್ ಖಾನ್ ಅವರ ವಿವಾಹಗಳಿಗೆ ಸಂಬಂಧಿಸಿದಂತೆ ರಾಣೆಯವರು ನಟನನ್ನು ‘ಲವ್ ಜಿಹಾದ್‌ನ ಬ್ರ್ಯಾಂಡ್ ಅಂಬಾಸಿಡರ್’ ಎಂದು ಬಣ್ಣಿಸಿದ ಬೆನ್ನಲ್ಲೇ ತಪಸ್ವಿ ಛಾವಣಿಯ ಮುಖ್ಯಸ್ಥ ಜಗದ್ಗುರು ಪರಮಹಂಸ ಆಚಾರ್ಯ ಅವರು ಸಚಿವರನ್ನು ಬಹಿರಂಗವಾಗಿ ಬೆಂಬಲಿಸಿದ್ದು, ನಟನನ್ನು ಗುರಿಯಾಗಿಸಿಕೊಂಡು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಆಮೀರ್ ಖಾನ್ ಹಿಂದೂ ಮಹಿಳೆಯರನ್ನು ವಿವಾಹವಾಗಿರುವುದು ಲವ್ ಜಿಹಾದ್ ಅನ್ನು ಉತ್ತೇಜಿಸುವ ಉದ್ದೇಶವನ್ನು ಹೊಂದಿತ್ತು ಎಂದು ಆಚಾರ್ಯ ಆರೋಪಿಸಿದರು. ರಾಣೆಯವರ ಹೇಳಿಕೆಗಳನ್ನು ಬೆಂಬಲಿಸಿದ ಅವರು, ಇವು ಕೇವಲ ಆರೋಪಗಳಲ್ಲ, ಬದಲಿಗೆ ವಾಸ್ತವವನ್ನು ಪ್ರತಿಬಿಂಬಿಸುತ್ತವೆ ಎಂದು ಹೇಳಿದರು.
ಆಮೀರ್ ಖಾನ್ ರನ್ನು ಕೊಲ್ಲುವವರಿಗೆ ಐದು ಕೋಟಿ ರೂ. ಬಹುಮಾನ ನೀಡುವುದಾಗಿ ಘೋಷಿಸಿದ ಆಚಾರ್ಯ, ಅದಕ್ಕೆ ತಗಲುವ ಕಾನೂನು ವೆಚ್ಚವನ್ನೂ ತಾನೇ ಭರಿಸುವುದಾಗಿ ಹೇಳಿದರು. ಇಂತಹ ಕ್ರಮಗಳು ‘ಲವ್ ಜಿಹಾದ್’ ಪ್ರಯತ್ನಗಳನ್ನು ಹಿಮ್ಮೆಟ್ಟಿಸುತ್ತವೆ ಎಂದು ಅವರು ಪ್ರತಿಪಾದಿಸಿದರು.
ಹಿಂದೂ ಮಹಿಳೆಯರನ್ನು ಬಲೆಗೆ ಬೀಳಿಸುವ ಜನರನ್ನು ಬಿಡಬಾರದು ಎಂದ ಅವರು, ಆಮೀರ್ ಖಾನ್ ರನ್ನು ಯಾರೇ ಕೊಂದರೂ ಅವರ ಕುಟುಂಬಕ್ಕೆ ಬಹುಮಾನದ ಮೊತ್ತವನ್ನು ತಲುಪಿಸಲಾಗುವುದು ಎಂದು ಹೇಳಿದರು.
►ರಾಮಮಂದಿರ ದೇಣಿಗೆ ಕಳ್ಳತನ
ಸರ್ವೋಚ್ಚ ನ್ಯಾಯಾಲಯದ ನಿರ್ದೇಶನದ ಮೇರೆಗೆ ಕೇಂದ್ರ ಸರ್ಕಾರದ ನಿರ್ಧಾರದ ಮೂಲಕ ರಚಿಸಿದ್ದ ಹಿಂದಿನ ಟ್ರಸ್ಟ್ ನ ಬದಲಿಗೆ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಅನ್ನು ರಚಿಸಲಾಗಿತ್ತು ಎಂದು ಪರಮಹಂಸ ಆಚಾರ್ಯ ಹೇಳಿದರು. ವಿಶೇಷ ತನಿಖಾ ದಳದ (ಎಸ್‌ಐಟಿ) ತನಿಖೆಯು ಪ್ರಾಮಾಣಿಕವಾಗಿ ನಡೆಯುತ್ತಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಭಗವಾನ್ ರಾಮನನ್ನು ವಿರೋಧಿಸುವವರು ಈ ವಿಷಯದ ಬಗ್ಗೆ ವಿವಾದವನ್ನು ಸೃಷ್ಟಿಸುತ್ತಲೇ ಇರುತ್ತಾರೆ ಎಂದು ಆರೋಪಿಸಿದ ಅವರು, ಬಂಧಿತ ಆರೋಪಿಗಳ ಪೈಕಿ ಓರ್ವನಾದ ಟಿನ್ನು ಯಾದವ್‌ನನ್ನು ಉಲ್ಲೇಖಿಸಿ ಅಖಿಲೇಶ್ ಯಾದವ್ ಮತ್ತು ಇಂಡಿಯಾ ಮೈತ್ರಿಕೂಟವನ್ನು ಟೀಕಿಸಿದರು.