×
Ad

ಅಮೆರಿಕ ಸೈನಿಕರ ಪತ್ತೆಗೆ ಮೊಬೈಲ್ ನೆಟ್‌ವರ್ಕ್ ‘ಹ್ಯಾಕ್’ ಮಾಡಿದ ಇರಾನ್: ವರದಿ

Update: 2026-07-14 23:10 IST

Photo: X@CENTCOM

ಟೆಹರಾನ್, ಜು.14: ಯುದ್ಧದ ಸಂದರ್ಭದಲ್ಲಿ ಅಮೆರಿಕದ ಸೇನಾ ಸಿಬ್ಬಂದಿಯ ಇರುವಿಕೆಯನ್ನು ಪತ್ತೆಹಚ್ಚಲು ಇರಾನ್ ಮಧ್ಯಪ್ರಾಚ್ಯದಾದ್ಯಂತದ ಮೊಬೈಲ್ ನೆಟ್‌ವರ್ಕ್‌ ಗಳನ್ನು ಬಳಸಿಕೊಂಡಿದೆ ಎಂದು ದೂರಸಂಪರ್ಕ ದತ್ತಾಂಶ, ಸೈಬರ್ ಭದ್ರತಾ ತಜ್ಞರು ಮತ್ತು ಅಧಿಕಾರಿಗಳನ್ನು ಉಲ್ಲೇಖಿಸಿ ‘financial times’ ವರದಿ ಮಾಡಿದೆ.

ರೋಮಿಂಗ್ ವ್ಯವಸ್ಥೆಗಳಲ್ಲಿನ ದೋಷಗಳು ಮತ್ತು ಸ್ಮಾರ್ಟ್‌ಫೋನ್ ಜಾಹೀರಾತು ತಂತ್ರಜ್ಞಾನದ ದೌರ್ಬಲ್ಯಗಳು ಸಂಘರ್ಷದ ಸಮಯದಲ್ಲಿ ಅಮೆರಿಕನ್ ಪಡೆಗಳನ್ನು ಸುಲಭವಾಗಿ ಗುರಿಯಾಗುವಂತೆ ಮಾಡಿರಬಹುದು ಎಂದು ವರದಿ ಎಚ್ಚರಿಸಿದೆ. ಫೆಬ್ರುವರಿ ಕೊನೆಯಲ್ಲಿ ಇರಾನ್ ವಿರುದ್ಧ ನಡೆದ ಅಮೆರಿಕ-ಇಸ್ರೇಲ್ ಜಂಟಿ ಮಿಲಿಟರಿ ಕಾರ್ಯಾಚರಣೆಗೂ ಮುನ್ನ ಈ ಕಣ್ಗಾವಲು ಕಾರ್ಯಾಚರಣೆ ನಡೆದಿದೆ. ಇರಾನ್ ಆ ಭಾಗದ ಅಮೆರಿಕನ್ ಸೇನಾ ನೆಲೆಗಳ ಮೇಲೆ ಕ್ಷಿಪಣಿ ಮತ್ತು ಡ್ರೋನ್ ದಾಳಿ ನಡೆಸಿದ ಮೇಲೂ ಇದು ಮುಂದುವರಿದಿದೆ.

ಮೊಬೈಲ್ ಕಣ್ಗಾವಲು ಮೇಲ್ವಿಚಾರಣೆಯ ದೂರಸಂಪರ್ಕ ಅಂಕಿಅಂಶಗಳು ‘ಎಸ್‌ಎಸ್7 ಪಿಂಗ್ಸ್’ ಎಂದು ಕರೆಯಲ್ಪಡುವ ‘ಲೊಕೇಷನ್ ರಿಕ್ವೆಸ್ಟ್‌’ಗಳಲ್ಲಿ ಭಾರಿ ಏರಿಕೆಯನ್ನು ತೋರಿಸಿವೆ. ಎಸ್‌ಎಸ್7 ಎಂಬುದು ದೂರಸಂಪರ್ಕ ಕಂಪೆನಿಗಳು ಬಳಸುವ ಒಂದು ಸಿಗ್ನಲಿಂಗ್ ಪ್ರೋಟೋಕಾಲ್ ಆಗಿದೆ. ಮೊಬೈಲ್ ಫೋನ್‌ ಗಳು ರೋಮಿಂಗ್‌ನಲ್ಲಿದ್ದಾಗ ಸಂಪರ್ಕ ಸಾಧಿಸಲು ಇದು ಸಹಾಯ ಮಾಡುತ್ತದೆ. ಇದನ್ನು ದುರ್ಬಳಕೆ ಮಾಡಿಕೊಂಡರೆ, ಬಳಕೆದಾರರ ಅರಿವೇ ಇಲ್ಲದೆ ಮೊಬೈಲ್ ಫೋನ್ ಇರುವ ಅಂದಾಜು ಸ್ಥಳವನ್ನು ಪತ್ತೆಹಚ್ಚಬಹುದು.

ಇಷ್ಟೊಂದು ದೊಡ್ಡ ಪ್ರಮಾಣದ ಮತ್ತು ನಿರಂತರವಾದ ವಿನಂತಿಗಳನ್ನು ನೋಡಿದರೆ ಇದು ನಿರ್ದಿಷ್ಟ ಸಾಧನಗಳನ್ನು ಗುರಿಯಾಗಿಸಿಕೊಂಡು ವ್ಯವಸ್ಥಿತವಾಗಿ ನಡೆಸಿದ ಪ್ರಯತ್ನ ಎಂದು ಸೈಬರ್ ಭದ್ರತಾ ತಜ್ಞರು ತಿಳಿಸಿದ್ದಾರೆ. ಇರಾನ್ ಅಥವಾ ಅದರ ಬೆಂಬಲಿತ ಗುಂಪುಗಳು ಪ್ರಾದೇಶಿಕ ಟೆಲಿಕಾಂ ಸಂಸ್ಥೆಗಳೊಂದಿಗಿನ ರೋಮಿಂಗ್ ಒಪ್ಪಂದಗಳನ್ನು ದುರುಪಯೋಗಪಡಿಸಿಕೊಂಡು, ಅಮೆರಿಕದ ಸೈನಿಕರು ಹಾಗೂ ಗುತ್ತಿಗೆದಾರರ ಸ್ಥಳವನ್ನು ಪತ್ತೆಹಚ್ಚಿರಬಹುದು ಎಂದು ಶಂಕಿಸಲಾಗಿದೆ. ಇರಾನ್‌ನ ಮೊಬೈಲ್ ಆಪರೇಟರ್‌ಗಳು ಗಲ್ಫ್ ದೇಶಗಳ ಟೆಲಿಕಾಂ ನೆಟ್‌ವರ್ಕ್‌ ಗಳೊಂದಿಗೆ ರೋಮಿಂಗ್ ಒಪ್ಪಂದಗಳನ್ನು ಹೊಂದಿರುವುದರಿಂದ, ಇರಾನ್‌ನ ಗಡಿಯ ಆಚೆಗೂ ಇಂತಹ ಸ್ಥಳ ಪತ್ತೆ ವಿನಂತಿಗಳನ್ನು ಕಳುಹಿಸುವ ತಾಂತ್ರಿಕ ಸಾಮರ್ಥ್ಯ ಅವರಿಗೆ ಸಿಕ್ಕಿದೆ ಎಂದು ವರದಿ ತಿಳಿಸಿದೆ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News