Indonesia | ಜಾವಾ ಸಮುದ್ರದಲ್ಲಿ ಮುಳುಗಿದ ಹಡಗು: 6 ಮಂದಿ ಮೃತ್ಯು, 130 ಜನರು ನಾಪತ್ತೆ
Photo: The Pioneer
ಜಕಾರ್ತಾ: ಇಂಡೋನೇಷ್ಯಾದ ಜಾವಾ ಸಮುದ್ರದಲ್ಲಿ ಪ್ರತಿಕೂಲ ಹವಾಮಾನದಿಂದಾಗಿ ಪ್ರಯಾಣಿಕರ ಹಡಗೊಂದು ಮಗುಚಿ ಬಿದ್ದ ಪರಿಣಾಮ ಆರು ಜನರು ಮೃತಪಟ್ಟಿದ್ದಾರೆ ಮತ್ತು 130 ಜನರು ನಾಪತ್ತೆಯಾಗಿದ್ದಾರೆ. 107 ಜನರನ್ನು ರಕ್ಷಿಸಲಾಗಿದೆ ಎಂದು ರಕ್ಷಣಾ ಸಿಬ್ಬಂದಿ ತಿಳಿಸಿದ್ದಾರೆ.
243 ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ಹೊಂದಿದ್ದ `ವರ್ಗೋ ಟ್ರಾನ್ಸ್ ಪೋರ್ಟ್ 8' ಹಡಗು ಸುರಬಾಯಾದಿಂದ ದಕ್ಷಿಣ ಕಾಲಿಮಂಟನ್‍ನ ಬಂಜಾರ್‍ಮಾಸಿನ್ ನಗರಕ್ಕೆ ಪ್ರಯಾಣಿಸುತ್ತಿತ್ತು. ರವಿವಾರ ಬೆಳಗ್ಗೆ 2 ಗಂಟೆಗೆ (ಸ್ಥಳೀಯ ಕಾಲಮಾನ) ಬಂಜಾರ್‍ಮಾಸಿನ್‍ನ ದಕ್ಷಿಣಕ್ಕೆ ಸುಮಾರು 150 ಕಿಮೀ ದೂರದಲ್ಲಿ ತನ್ನ ಕಾರ್ಯಾಚರಣೆ ಸಂಸ್ಥೆಯೊಂದಿಗೆ ಸಂಪರ್ಕವನ್ನು ಕಳೆದುಕೊಂಡಿತು ಎಂದು ಇಂಡೋನೇಷ್ಯಾದ ಶೋಧ ಮತ್ತು ರಕ್ಷಣಾ ಸಂಸ್ಥೆ ತಿಳಿಸಿದೆ.
ರಕ್ಷಣಾ ಕಾರ್ಯಕ್ಕಾಗಿ ಇಂಡೋನೇಷ್ಯಾದ ಶೋಧ ಮತ್ತು ರಕ್ಷಣಾ ಸಂಸ್ಥೆ, ನೌಕಾಪಡೆ ಮತ್ತು ಇತರ ಪಡೆಗಳನ್ನು ಒಳಗೊಂಡ ಜಂಟಿ ಕಾರ್ಯಪಡೆಯನ್ನು ರಚಿಸಲಾಗಿದೆ.
ಘಟನಾ ಸ್ಥಳಕ್ಕೆ ಹಡಗುಗಳು ಮತ್ತು ಹೆಲಿಕಾಪ್ಟರ್ ಅನ್ನು ರವಾನಿಸಲಾಗಿದ್ದು, 280 ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ. ಅಪಘಾತದ ನಿರ್ವಹಣೆಗಾಗಿ ರವಿವಾರ ಬೆಳಿಗ್ಗೆ ತ್ರಿಶಕ್ತಿ ಬಂದರು ಪ್ರದೇಶದಲ್ಲಿ ಕಾರ್ಯಾಚರಣೆ ಕೇಂದ್ರವನ್ನು ಸ್ಥಾಪಿಸಲಾಗಿದೆ. ಹಡಗಿನಲ್ಲಿ 213 ಪ್ರಯಾಣಿಕರು ಮತ್ತು 30 ಸಿಬ್ಬಂದಿ ಇದ್ದರು. ಇವರಲ್ಲಿ 130 ಜನರು ಇನ್ನೂ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.