ಸಾಂದರ್ಭಿಕ ಚಿತ್ರ | Photo Credit : PTI

ಟೆಹೆರಾನ್: ಇರಾನ್ ಮತ್ತು ಒಮಾನ್ ಹಾರ್ಮುಝ್ ಜಲಸಂಧಿಯ ಹೊಸ ಪ್ರವೇಶ ಮತ್ತು ನಿರ್ಗಮನ ಮಾರ್ಗಗಳ ವಿವರಗಳ ಕುರಿತು ಚರ್ಚಿಸಿ ಸಮ್ಮತಿಸಿವೆ. ಸೋಮವಾರ ಮಸ್ಕತ್‌ ನಲ್ಲಿ ನಡೆಯಲಿರುವ ಪ್ರಾದೇಶಿಕ ಸಭೆಯಲ್ಲಿ ಎರಡೂ ದೇಶಗಳು ತಮ್ಮ ಸಮಾಲೋಚನೆಯ ಫಲಿತಾಂಶದ ಬಗ್ಗೆ ಇತರ ಗಲ್ಫ್ ರಾಷ್ಟ್ರಗಳಿಗೆ ಮಾಹಿತಿ ನೀಡಲಿವೆ ಎಂದು ವರದಿಯಾಗಿದೆ.

ಇರಾನ್ ಮತ್ತು ಒಮಾನ್ ನಡುವಿನ ತೀವ್ರ ತಾಂತ್ರಿಕ ಮತ್ತು ರಾಜತಾಂತ್ರಿಕ ಮಾತುಕತೆಗಳ ನಂತರ ಈ ತಿಳುವಳಿಕೆಗೆ ಬರಲಾಗಿದ್ದು, ಆಗಸ್ಟ್‌ ಕೊನೆಯಲ್ಲಿ ಅಂತಿಮ ಒಪ್ಪಂದಕ್ಕೆ ಬರಲಾಗಿದೆ ಎಂದು ನಿಕಟ ಮೂಲಗಳನ್ನು ಉಲ್ಲೇಖಿಸಿ `ತಸ್ನೀಮ್' ಸುದ್ದಿ ಸಂಸ್ಥೆ ವರದಿ ಮಾಡಿದೆ.

ಪ್ರಸ್ತಾವಿತ ವ್ಯವಸ್ಥೆಯಡಿಯಲ್ಲಿ, ಗಲ್ಫ್‌ ನಿಂದ ಪ್ರವೇಶಿಸುವ ಮಾರ್ಗವು ಸಂಪೂರ್ಣವಾಗಿ ಇರಾನ್‌ನ ಪ್ರಾದೇಶಿಕ ಜಲಪ್ರದೇಶದಲ್ಲಿದೆ ಮತ್ತು ನಿರ್ಗಮನ ಮಾರ್ಗದ ಒಂದು ಭಾಗವೂ ಇರಾನ್‌ ನ ಪ್ರಾದೇಶಿಕ ಜಲಪ್ರದೇಶದೊಳಗೆ ಬರುತ್ತದೆ. ಈ ಮಾರ್ಗಗಳು ಇರಾನ್‌ ನ ವ್ಯವಸ್ಥೆಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತವೆ. ಹೊಸ ವ್ಯವಸ್ಥೆಯು ಜಾರಿಗೆ ಬಂದ ತಕ್ಷಣ ದಕ್ಷಿಣದ ಮಾರ್ಗವನ್ನು ಮುಚ್ಚಲಾಗುತ್ತದೆ. ದಕ್ಷಿಣದ ಮಾರ್ಗವನ್ನು ತೆರೆಯಬೇಕೆಂದು ಅಮೆರಿಕ ಒತ್ತಾಯಿಸಿತ್ತು ಎಂದು ಮೂಲಗಳು ತಿಳಿಸಿವೆ.

ಈ ತಿಳುವಳಿಕೆಯ ಅರ್ಥ ಹಾರ್ಮುಝ್ ಜಲಸಂಧಿಯನ್ನು ತೆರೆಯಲಾಗುತ್ತದೆ ಎಂದಲ್ಲ. ಜಲಸಂಧಿಯನ್ನು ಮತ್ತೆ ತೆರೆಯಲು ಇರಾನ್ ಏಳು ಷರತ್ತುಗಳನ್ನು ಮುಂದಿಟ್ಟಿದ್ದು, ಅವುಗಳನ್ನು ಅಮೆರಿಕಕ್ಕೆ ತಿಳಿಸಲಾಗಿದೆ. ಹೊಸ ಮಾರ್ಗದಲ್ಲಿನ ಸಂಚಾರವನ್ನು ಇರಾನ್‌ ನ ನಿಯಮಾವಳಿಗಳು ನಿರ್ವಹಿಸುತ್ತವೆ. ಇತ್ತೀಚಿನ ಉದ್ವಿಗ್ನತೆಗೆ ಮುಖ್ಯ ಕಾರಣವಾಗಿದ್ದ ದಕ್ಷಿಣದ ಮಾರ್ಗವನ್ನು ಹೊಸ ವ್ಯವಸ್ಥೆಯು ಅನುಷ್ಠಾನಗೊಂಡ ನಂತರ ಮುಚ್ಚಲಾಗುತ್ತದೆ ಎಂದು ಹೇಳಲಾಗಿದೆ.

ಗಲ್ಫ್ ದೇಶಗಳಿಗೆ ವಿವರಣೆ

ಇರಾನ್-ಒಮಾನ್ ತಿಳುವಳಿಕೆಯ ಹೆಚ್ಚಿನ ವಿವರಗಳನ್ನು ಸೋಮವಾರ ನಿಗದಿಯಾಗಿರುವ ಸಭೆಯಲ್ಲಿ ಪರ್ಷಿಯನ್ ಗಲ್ಫ್ ಕರಾವಳಿ ರಾಜ್ಯಗಳಿಗೆ ಪ್ರಸ್ತುತಪಡಿಸಲಾಗುವುದು. ಸಭೆಯಲ್ಲಿ ಭಾಗವಹಿಸುವ ದೇಶಗಳಿಗೆ ಮಾತ್ರ ಮಾಹಿತಿ ನೀಡಲಾಗುವುದು. ತಿಳುವಳಿಕೆಯ ನಿರ್ದಿಷ್ಟ ವಿವರಗಳನ್ನು ಇರಾನ್ ಮತ್ತು ಒಮಾನ್ ನಡುವೆ ಪ್ರತ್ಯೇಕವಾಗಿ ನಡೆದ ತಾಂತ್ರಿಕ ಸಭೆಗಳಲ್ಲಿ ಅಂತಿಮಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಪ್ರಾದೇಶಿಕ ವಿಷಯಗಳ ಬಗ್ಗೆ ಚರ್ಚಿಸಲು ಗಲ್ಫ್ ಕರಾವಳಿ ರಾಜ್ಯಗಳ ವಿದೇಶಾಂಗ ಸಚಿವರು ಸೋಮವಾರ ಒಮಾನ್‌ ನಲ್ಲಿ ಭೇಟಿಯಾಗಲಿದ್ದಾರೆ. ಈ ಸಭೆಯಲ್ಲಿ ಗಲ್ಫ್ ದೇಶಗಳ ವಿದೇಶಾಂಗ ಸಚಿವರು ಹಾಗೂ ಇರಾನ್ ಮತ್ತು ಇರಾಕ್‌ ನ ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆಯಿದೆ ಎಂದು ಇರಾನ್ ವಿದೇಶಾಂಗ ಸಚಿವಾಲಯದ ವಕ್ತಾರ ಇಸ್ಮಾಯೀಲ್ ಬಗಾಯಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor