Indo - Pak ಸಂಘರ್ಷ ಕೊನೆಗೂಳಿಸಲು ಮಧ್ಯಸ್ಥಿಕೆ ವಹಿಸಿರುವುದಾಗಿ ಚೀನಾ ಹೇಳಿಕೆ: ಸ್ಪಷ್ಟವಾಗಿ ತಿರಸ್ಕರಿಸಿದ ಭಾರತ
Photo: AP
ಬೀಜಿಂಗ್/ಹೊಸದಿಲ್ಲಿ: ಮೇ ತಿಂಗಳಲ್ಲಿ ಭಾರತ–ಪಾಕಿಸ್ತಾನ ನಡುವೆ ಉಂಟಾದ ಮಿಲಿಟರಿ ಉದ್ವಿಗ್ನತೆಯನ್ನು ಶಮನಗೊಳಿಸಲು ಚೀನಾ ಮಧ್ಯಸ್ಥಿಕೆ ವಹಿಸಿದೆ ಎಂಬ ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ಅವರ ಹೇಳಿಕೆಯನ್ನು ಭಾರತ ದೃಢವಾಗಿ ತಿರಸ್ಕರಿಸಿದೆ. ಭಾರತ–ಪಾಕಿಸ್ತಾನ ನಡುವಿನ ದ್ವಿಪಕ್ಷೀಯ ವಿಚಾರಗಳಲ್ಲಿ ತೃತೀಯ ಪಕ್ಷಕ್ಕೆ ಯಾವುದೇ ಪಾತ್ರವಿಲ್ಲ ಎಂಬ ತನ್ನ ನಿಲುವನ್ನು ಭಾರತವು ಮತ್ತೊಮ್ಮೆ ಪುನರುಚ್ಚರಿಸಿದೆ.
ಈ ಹಿಂದೆ ಹಲವು ಬಾರಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತ ಮತ್ತು ಪಾಕಿಸ್ತಾನ ನಡುವೆ ಕದನ ವಿರಾಮ ಜಾರಿಗೆ ತರಲು ನಾನು ಮಧ್ಯಸ್ಥಿಕೆ ವಹಿಸಿದ್ದೇನೆ ಎಂದು ಹೇಳಿದ್ದರು. ಈಗ ಅದೇ ವರಸೆಯನ್ನು ಚೀನಾವು ಪ್ರಾರಂಭಿಸಿದೆ.
ಬೀಜಿಂಗ್‌ನಲ್ಲಿ ನಡೆದ ಅಂತರರಾಷ್ಟ್ರೀಯ ಪರಿಸ್ಥಿತಿ ಮತ್ತು ಚೀನಾದ ವಿದೇಶಾಂಗ ಸಂಬಂಧಗಳ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದ ವಾಂಗ್ ಯಿ, ಜಗತ್ತಿನಾದ್ಯಂತ ಸಂಘರ್ಷಗಳು ಹಾಗೂ ಅಸ್ಥಿರತೆ ತೀವ್ರವಾಗಿ ಹೆಚ್ಚಾಗಿವೆ ಎಂದು ಹೇಳಿದರು. ಭಾರತ–ಪಾಕಿಸ್ತಾನ ಉದ್ವಿಗ್ನತೆ ಸೇರಿದಂತೆ ಹಲವು ಜಾಗತಿಕ ಬಿಕ್ಕಟ್ಟುಗಳಲ್ಲಿ ಚೀನಾ “ವಸ್ತುನಿಷ್ಠ ಮತ್ತು ನ್ಯಾಯಯುತ ನಿಲುವಿನಿಂದ” ಮಧ್ಯಸ್ಥಿಕೆ ವಹಿಸಿದೆ ಎಂದು ಅವರು ಹೇಳಿಕೊಂಡರು. ಉತ್ತರ ಮ್ಯಾನ್ಮಾರ್, ಇರಾನ್ ನ ಪರಮಾಣು ವಿಚಾರ, ಫೆಲೆಸ್ತೀನ್–ಇಸ್ರೇಲ್ ಹಾಗೂ ಕಾಂಬೋಡಿಯಾ–ಥೈಲ್ಯಾಂಡ್ ನಡುವಿನ ಸಂಘರ್ಷಗಳನ್ನೂ ಅವರು ಉದಾಹರಣೆಯಾಗಿ ನೀಡದರು.
ಏಪ್ರಿಲ್ 22ರಂದು ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ಬಳಿಕ, ಮೇ ತಿಂಗಳಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಮಿಲಿಟರಿ ಘರ್ಷಣೆ ಉಂಟಾಗಿತ್ತು. ಇದಕ್ಕೆ ಪ್ರತಿಯಾಗಿ ಭಾರತ ಪಾಕಿಸ್ತಾನ ಹಾಗೂ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದಕ ನೆಲೆಗಳನ್ನು ಗುರಿಯಾಗಿಸಿಕೊಂಡು ‘ಆಪರೇಷನ್ ಸಿಂಧೂರ್’ ಆರಂಭಿಸಿತ್ತು. ನಂತರ ಈ ಕಾರ್ಯಾಚರಣೆ ಮಿಲಿಟರಿ ನೆಲೆಗಳವರೆಗೆ ವಿಸ್ತರಿಸಿತ್ತು.
ಮೇ 10ರಂದು ಜಾರಿಯಾದ ಕದನ ವಿರಾಮವು ಎರಡೂ ದೇಶಗಳ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರ (ಡಿಜಿಎಂಒಗಳು) ನಡುವಿನ ನೇರ ಮಾತುಕತೆಯ ಫಲವಾಗಿದೆ ಎಂದು ಭಾರತ ಸ್ಪಷ್ಟಪಡಿಸಿದೆ. “ಭಾರತ–ಪಾಕಿಸ್ತಾನ ಕದನ ವಿರಾಮದ ನಿರ್ಧಾರದಲ್ಲಿ ಯಾವುದೇ ಮೂರನೇ ವ್ಯಕ್ತಿಯ ಪಾತ್ರವಿಲ್ಲ. ಈ ನಿಲುವನ್ನು ನಾವು ಈಗಾಗಲೇ ಹಲವಾರು ಬಾರಿ ಸ್ಪಷ್ಟಪಡಿಸಿದ್ದೇವೆ,” ಎಂದು ರಾಜತಾಂತ್ರಿಕ ಮೂಲಗಳು ತಿಳಿಸಿವೆ.