×
Ad

ಯೆಮೆನ್‌ನ ಮುಕಲ್ಲಾ ಬಂದರಿನ ಮೇಲೆ ಸೌದಿ ದಾಳಿ

ನಮ್ಮ ರಾಷ್ಟ್ರೀಯ ಭದ್ರತೆಯು ಪರಮೋಚ್ಚವಾಗಿದೆ ಎಂದ ಸೌದಿ ಅರೇಬಿಯ

Update: 2025-12-30 15:00 IST

Photo credit: AP

ಹೊಸದಿಲ್ಲಿ: ದಕ್ಷಿಣದ ಪ್ರತ್ಯೇಕತಾವಾದಿಗಳಿಗೆ ವಿದೇಶಿ ಬೆಂಬಲಿತ ಹಡಗುಗಳು ಶಸ್ತ್ರಾಸ್ತ್ರಗಳನ್ನು ಪೂರೈಸುತ್ತಿವೆ ಎಂದು ಆರೋಪಿಸಿ ಸೌದಿ ಅರೇಬಿಯ ನೇತೃತ್ವದ ಮೈತ್ರಿಕೂಟವು ಮಂಗಳವಾರ ಬೆಳಿಗ್ಗೆ ಯೆಮೆನ್‌ನ ಮುಕಲ್ಲಾ ಬಂದರಿನ ಮೇಲೆ ದಾಳಿ ನಡೆಸಿದೆ ಎಂದು aljazeera.com ವರದಿ ಮಾಡಿದೆ.

ತನ್ನ ರಾಷ್ಟ್ರೀಯ ಭದ್ರತೆಯು ತನಗೆ ಪರಮೋಚ್ಚವಾಗಿದ್ದು, ಅದನ್ನು ರಕ್ಷಿಸಲು ತಾನು ಬದ್ಧವಾಗಿದ್ದೇನೆ ಎಂದು ದಾಳಿಯ ಬಳಿಕ ಸೌದಿ ಅರೇಬಿಯ ಹೇಳಿದೆ. ಯೆಮೆನ್‌ನಲ್ಲಿ ವಾಹನಗಳು ಮತ್ತು ಸರಕುಗಳ ಮೇಲೆ ದಾಳಿ ನಡೆಸಲಾಗಿದ್ದು, ಇವುಗಳನ್ನು ವಿದೇಶಿ ಸೇನೆಯು ಪ್ರತ್ಯೇಕತಾವಾದಿಗಳಿಗೆ ಪೂರೈಸಿತ್ತು ಎಂದು ಸೌದಿ ಪ್ರತಿಪಾದಿಸಿದೆ.

ಹದ್ರಾಮೌಟ್ ಪ್ರಾಂತ್ಯದಲ್ಲಿ ಮಿಲಿಟರಿ ಕ್ರಮ ಕೈಗೊಳ್ಳುವ ವಿರುದ್ಧ ಪ್ರತ್ಯೇಕತಾವಾದಿ ಸದರ್ನ್ ಟ್ರಾನ್ಸಿಷನಲ್ ಕೌನ್ಸಿಲ್‌ಗೆ (ಎಸ್‌ಟಿಸಿ) ಸೌದಿ ಎಚ್ಚರಿಕೆ ನೀಡಿದ ಕೆಲವೇ ದಿನಗಳ ಬಳಿಕ ಯೆಮೆನ್‌ನ ಮುಕಲ್ಲಾ ಬಂದರಿನಲ್ಲಿ ಮೈತ್ರಿಕೂಟವು ‘ಸೀಮಿತ ಮಿಲಿಟರಿ ಕಾರ್ಯಾಚರಣೆ’ಯನ್ನು ನಡೆಸಿದೆ.

ಯೆಮೆನ್‌ನ ಸೌದಿ ಬೆಂಬಲಿತ ಅಧ್ಯಕ್ಷೀಯ ಮಂಡಳಿಯು ಯುಎಇ ಎಸ್‌ಟಿಸಿಗೆ ನೆರವನ್ನು ಪೂರೈಸಿತ್ತು ಎಂದು ಆರೋಪಿಸಿದೆ.

ಕೊಲ್ಲಿ ಅರಬ್ ದೇಶಗಳ ನಡುವೆ ದ್ವಿಪಕ್ಷೀಯ ಸಂಬಂಧಗಳನ್ನು ಕಾಪಾಡಿಕೊಳ್ಳಲು ಯುಎಇ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ತಾನು ಆಶಿಸಿರುವುದಾಗಿ ಸೌದಿ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಮಂಗಳವಾರ ಹೇಳಿಕೆಯಲ್ಲಿ ತಿಳಿಸಿದೆ.

ಮೈತ್ರಿಕೂಟದ ಅನುಮತಿಯಿಲ್ಲದೆ ಶನಿವಾರ ಮತ್ತು ರವಿವಾರ ಎರಡು ಹಡಗುಗಳು ಮುಕಲ್ಲಾ ಬಂದರನ್ನು ಪ್ರವೇಶಿಸಿದ್ದವು, ತನ್ನ ಟ್ರ್ಯಾಕಿಂಗ್ ವ್ಯವಸ್ಥೆಗಳನ್ನು ನಿಷ್ಕ್ರಿಯಗೊಳಿಸಿದ್ದವು ಮತ್ತು ಎಸ್‌ಟಿಸಿಯನ್ನು ಬೆಂಬಲಿಸಲು ಬೃಹತ್ ಪ್ರಮಾಣದ ಶಸ್ತ್ರಾಸ್ತ್ರಗಳು ಮತ್ತು ಯುದ್ಧವಾಹನಗಳನ್ನು ಇಳಿಸಿದ್ದವು ಎಂದು ಒಕ್ಕೂಟದ ವಕ್ತಾರ ಟರ್ಕಿ ಅಲ್-ಮಲ್ಕಿ ತಿಳಿಸಿದರು.

ಯುಎಇಯ ಎಲ್ಲ ಪಡೆಗಳು 24 ಗಂಟೆಗಳಲ್ಲಿ ಯೆಮೆನ್ ತೊರೆಯಬೇಕು ಎಂದು ಸೌದಿ ಬೆಂಬಲಿತ ಯೆಮೆನ್ ಅಧ್ಯಕ್ಷೀಯ ಮಂಡಳಿಯ ಮುಖ್ಯಸ್ಥ ರಶಾದ್ ಅಲ್-ಅಲಿಮಿ ಅವರು ಮಂಗಳವಾರ ತಾಕೀತು ಮಾಡಿದ್ದಾರೆ.

ದೂರದರ್ಶನ ಭಾಷಣದಲ್ಲಿ, ಈ ಕ್ರಮವು ಸಾರ್ವಭೌಮ ಅವಶ್ಯಕತೆಯಾಗಿದೆ ಎಂದು ಬಣ್ಣಿಸಿದ ಅಲ್-ಅಲಿಮಿ ಸೌದಿ ಮತ್ತು ಮೈತ್ರಿಕೂಟದ ಬೆಂಬಲಕ್ಕಾಗಿ ಅವುಗಳನ್ನು ಪ್ರಶಂಸಿಸಿದರು. ಯುಎಇ ಜೊತೆಗಿನ ಜಂಟಿ ರಕ್ಷಣಾ ಒಪ್ಪಂದವನ್ನೂ ರದ್ದುಗೊಳಿಸಿದ ಅವರು 72 ಗಂಟೆಗಳ ವಾಯು,ಭೂ ಮತ್ತು ಸಮುದ್ರ ನಿರ್ಬಂಧವನ್ನು ಹಾಗೂ 90 ದಿನಗಳ ಅವಧಿಗೆ ತುರ್ತು ಪರಿಸ್ಥಿತಿಯನ್ನು ಘೋಷಿಸಿದರು.

ದಾಳಿಯು ಸರಕುಗಳನ್ನು ಇಳಿಸಲಾಗಿದ್ದ ಹಡಗುಕಟ್ಟೆಯನ್ನು ನಿರ್ದಿಷ್ಟವಾಗಿ ಗುರಿಯಾಗಿಸಿಕೊಂಡಿತ್ತು ಎಂದು ಬಲ್ಲ ಮೂಲಗಳು ಸುದ್ದಿಸಂಸ್ಥೆಗೆ ತಿಳಿಸಿವೆ.

ಮಂಗಳವಾರ ಬೆಳಿಗ್ಗೆ ನಡೆಸಲಾದ ವಾಯುದಾಳಿಯಲ್ಲಿ ಯಾವುದೇ ಸಾವುನೋವುಗಳು ಸಂಭವಿಸಿಲ್ಲ ಮತ್ತು ಸೀಮಿತ ಮಿಲಿಟರಿ ಕಾರ್ಯಾಚರಣೆಯನ್ನು ಅಂತರರಾಷ್ಟ್ರೀಯ ಮಾನವೀಯ ಕಾನೂನಿಗೆ ಅನುಗುಣವಾಗಿ ನಡೆಸಲಾಗಿತ್ತು ಎಂದು ಮೈತ್ರಿಕೂಟವು ತಿಳಿಸಿದೆ.

ಈ ತಿಂಗಳ ಆರಂಭದಲ್ಲಿ ಎಸ್‌ಟಿಸಿ ಸೌದಿ ಬೆಂಬಲಿತ ಯೆಮೆನಿ ಸರಕಾರದ ಪಡೆಗಳ ಮೇಲೆ ದಾಳಿ ನಡೆಸಿದ ಬಳಿಕ ಉಲ್ಬಣಿಸಿರುವ ಉದ್ವಿಗ್ನತೆಗಳ ನಡುವೆ ಮಂಗಳವಾರದ ದಾಳಿ ನಡೆದಿದೆ.

ಎಸ್‌ಟಿಸಿ ಪಡೆಗಳು ಎರಡು ಪ್ರಾದೇಶಿಕ ಆಡಳಿತ ಘಟಕಗಳನ್ನು ಶಾಂತಿಯುತವಾಗಿ ಸರಕಾರಕ್ಕೆ ಹಸ್ತಾಂತರಿಸಬೇಕು ಎಂದು ಸೌದಿ ರಕ್ಷಣಾ ಸಚಿವ ಖಾಲಿದ್ ಬಿನ್ ಸಲ್ಮಾನ್ ಅಲ್ ಸೌದ್ ಅವರು ಎಕ್ಸ್ ಪೋಸ್ಟ್‌ನಲ್ಲಿ ಹೇಳಿದ್ದಾರೆ.

ಈ ನಡುವೆ ಅಮೆರಿಕದ ವಿದೇಶಾಂಗ ಸಚಿವ ಮಾರ್ಕೊ ರೂಬಿಯೊ ಅವರು,ಶಾಶ್ವತ ಪರಿಹಾರವನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಸಂಯಮ ಮತ್ತು ನಿರಂತರ ರಾಜತಾಂತ್ರಿಕತೆಗೆ ಕರೆ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News