ಅಮೆರಿಕ: ಚುನಾವಣಾ ಪ್ರಚಾರದ ಸಾರ್ವಜನಿಕ ಸಭೆಗಳಲ್ಲಿ ತಮ್ಮ ಅರಬ್-ಮುಸ್ಲಿಂ ಹೆಸರನ್ನು ಉಚ್ಚರಿಸಲು ತಡವರಿಸುತ್ತಾ ಅಣಕವಾಡಿದ್ದ ಡೊನಾಲ್ಡ್ ಟ್ರಂಪ್ ಮತ್ತು ಜೆ.ಡಿ. ವ್ಯಾನ್ಸ್ ಅವರಿಗೆ, ಚುನಾವಣೆಯ ಬಳಿಕ ತಮ್ಮನ್ನು 'ಸೆನೆಟರ್' ಎಂದು ಕರೆಯಬೇಕಾಗುತ್ತದೆ ಎಂದು ಅಬ್ದುಲ್ ಅಲ್-ಸಯೀದ್ ತಿರುಗೇಟು ನೀಡಿದ್ದರು. ಈಗ ಅವರ ಮಾತು ನಿಜವಾಗಿದೆ. ಮಿಶಿಗನ್ನಿಂದ ಅಮೆರಿಕದ ಸೆನೆಟ್‌ ಗೆ ಆಯ್ಕೆಯಾಗುವ ಮೂಲಕ ಅಲ್-ಸಯೀದ್ ಐತಿಹಾಸಿಕ ಸಾಧನೆ ಮಾಡಿದ್ದಾರೆ.

ರಿಪಬ್ಲಿಕನ್ ಅಭ್ಯರ್ಥಿ ಮೈಕ್ ರೋಜರ್ಸ್ ಅವರನ್ನು ಸೋಲಿಸಿರುವ ಡೆಮಾಕ್ರಟಿಕ್ ನಾಯಕ ಅಲ್-ಸಯೀದ್, ಅಮೆರಿಕದ ಇತಿಹಾಸದಲ್ಲೇ ಸೆನೆಟ್‌ ಗೆ ಆಯ್ಕೆಯಾದ ಮೊದಲ ಮುಸ್ಲಿಂ ಹಾಗೂ ಈಜಿಪ್ಟ್ ಮೂಲದ ಅಮೆರಿಕನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅವರನ್ನು ಈಗ ಅಮೆರಿಕದ ಆಡಳಿತ ವ್ಯವಸ್ಥೆ ಮಾತ್ರವಲ್ಲದೆ, ಅಧ್ಯಕ್ಷ ಟ್ರಂಪ್ ಕೂಡ 'ಸೆನೆಟರ್' ಎಂದು ಕರೆಯಬೇಕಾಗಿದೆ.

ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಅಲ್-ಸಯೀದ್ ಕೋಮು ಪ್ರೇರಿತ ವಾಗ್ದಾಳಿಗಳನ್ನು ಎದುರಿಸಬೇಕಾಯಿತು. ರಿಪಬ್ಲಿಕನ್ ನಾಯಕರು ಅವರ ಹೆಸರನ್ನು ತಿರುಚಿ ಉಚ್ಚರಿಸುವುದರ ಜತೆಗೆ, ಈಜಿಪ್ಟ್‌ನ ಮುಸ್ಲಿಂ ಬ್ರದರ್ಹುಡ್ ಸಂಘಟನೆಯೊಂದಿಗೆ ಅವರಿಗೆ ಸಂಪರ್ಕವಿದೆ ಎಂದು ಆರೋಪಿಸಿದ್ದರು. ಈ ಮೂಲಕ ಮತದಾರರನ್ನು ಧ್ರುವೀಕರಿಸಲು ಪ್ರಯತ್ನಿಸಿದ್ದರು.

ಆದರೆ, ಅಲ್-ಸಯೀದ್ ತಮ್ಮ ಧರ್ಮ ಮತ್ತು ಹೆಸರಿನ ಬದಲಿಗೆ ಜನರ ಬದುಕಿನ ಸಮಸ್ಯೆಗಳನ್ನು ಚುನಾವಣಾ ಚರ್ಚೆಯ ಕೇಂದ್ರಕ್ಕೆ ತಂದರು. 'ನನ್ನ ಧರ್ಮ ಮತ್ತು ಹೆಸರನ್ನು ಮುಂದಿಟ್ಟುಕೊಂಡು ಜನರನ್ನು ದಿಕ್ಕುತಪ್ಪಿಸಲಾಗುತ್ತಿದೆ. ಧರ್ಮದಿಂದ ಗ್ಯಾಸ್ ದರವಾಗಲಿ, ದಿನಸಿ ಪದಾರ್ಥಗಳ ಬೆಲೆಯಾಗಲಿ ಕಡಿಮೆಯಾಗುವುದಿಲ್ಲ' ಎಂದು ಅವರು ಹೇಳಿದ್ದರು.

ಅವರ ಈ ನಿಲುವು ಮಿಶಿಗನ್‌ನ ಕಾರ್ಮಿಕ ವರ್ಗದ ಜನರ ಬೆಂಬಲ ಗಳಿಸಿತು. ಪ್ರೈಮರಿ ಚುನಾವಣೆಯಲ್ಲಿ ಪಕ್ಷದ ಹಿರಿಯ ನಾಯಕಿ ಹ್ಯಾಲಿ ಸ್ಟೀವನ್ಸ್ ವಿರುದ್ಧ ಭಾರಿ ಹಣಬಲದ ಪ್ರಭಾವವನ್ನು ಮೆಟ್ಟಿ ನಿಂತು ಗೆಲುವು ಸಾಧಿಸಿದ್ದ ಅಲ್-ಸಯೀದ್, ಸಾರ್ವತ್ರಿಕ ಚುನಾವಣೆಯಲ್ಲೂ ಮೈಕ್ ರೋಜರ್ಸ್ ಅವರನ್ನು ಸೋಲಿಸಿದರು.

ಅಬ್ದುಲ್ ರೆಹಮಾನ್ ಮೊಹಮ್ಮದ್ ಅಲ್-ಸಯೀದ್ ಅವರ ರಾಜಕೀಯ ಪಯಣ ಆಕಸ್ಮಿಕವಾಗಿ ಆರಂಭವಾದುದಲ್ಲ. ಅವರ ಶಿಕ್ಷಣ, ವೈದ್ಯಕೀಯ ವೃತ್ತಿ, ಸಾರ್ವಜನಿಕ ಆಡಳಿತ ಮತ್ತು ಸಾಮಾಜಿಕ ಬದ್ಧತೆಯೇ ರಾಜಕೀಯ ಪ್ರವೇಶಕ್ಕೆ ಹಿನ್ನೆಲೆಯಾಯಿತು.

►ಶಿಕ್ಷಣ, ಸಾರ್ವಜನಿಕ ಸೇವೆಯ ಹಿನ್ನೆಲೆ

1984ರ ಅಕ್ಟೋಬರ್ 31ರಂದು ಮಿಶಿಗನ್ ನ ರೋಚೆಸ್ಟರ್ ಹಿಲ್ಸ್ನಲ್ಲಿ ಅಲ್-ಸಯೀದ್ ಜನಿಸಿದರು. ಅವರ ತಂದೆ ಮೊಹಮ್ಮದ್ ಅಲ್-ಸಯೀದ್ ಈಜಿಪ್ಟ್‌ ನಿಂದ ಉನ್ನತ ವ್ಯಾಸಂಗಕ್ಕಾಗಿ ಅಮೆರಿಕಕ್ಕೆ ವಲಸೆ ಬಂದ ಎಂಜಿನಿಯರ್ ಹಾಗೂ ಇಮಾಮ್. ತಾಯಿ ಫತ್ತೆನ್ ಅಲ್-ಕೋಮಿ ನರ್ಸ್ ಪ್ರಾಕ್ಟೀಷನರ್.

ಬಾಲ್ಯದಲ್ಲೇ ತಂದೆ-ತಾಯಿ ಬೇರೆಯಾದ ಕಾರಣ ತಂದೆ ಮತ್ತು ಮಲತಾಯಿ ಜಾಕಲಿನ್ ಅವರ ಆರೈಕೆಯಲ್ಲಿ ಬೆಳೆದರು. ಶಾಲಾ ದಿನಗಳಲ್ಲೇ ಕುಸ್ತಿ, ಫುಟ್ಬಾಲ್ ಮತ್ತು ಲ್ಯಾಕ್ರೋಸ್ ಕ್ರೀಡೆಗಳಲ್ಲಿ ನಾಯಕರಾಗಿ ಗುರುತಿಸಿಕೊಂಡಿದ್ದ ಅವರು, ಶೈಕ್ಷಣಿಕವಾಗಿಯೂ ಸದಾ ಮುಂಚೂಣಿಯಲ್ಲಿದ್ದರು.

ಮಿಶಿಗನ್ ವಿಶ್ವವಿದ್ಯಾಲಯದಲ್ಲಿ ಜೀವಶಾಸ್ತ್ರ ಮತ್ತು ರಾಜಕೀಯ ವಿಜ್ಞಾನದಲ್ಲಿ ಉನ್ನತ ಶ್ರೇಣಿಯ ಪದವಿ ಪಡೆದರು. ಘಟಿಕೋತ್ಸವ ಸಮಾರಂಭಕ್ಕೆ ಅತಿಥಿಯಾಗಿ ಆಗಮಿಸಿದ್ದ ಅಮೆರಿಕದ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಅವರು ಅಲ್-ಸಯೀದ್ ಅವರ ಭಾಷಣವನ್ನು ಮೆಚ್ಚಿ, ಸಾರ್ವಜನಿಕ ಸೇವೆಗೆ ಬರುವಂತೆ ಸಲಹೆ ನೀಡಿದ್ದರು.

ನಂತರ ಪ್ರತಿಷ್ಠಿತ ರೋಡ್ಸ್ ಸ್ಕಾಲರ್ಶಿಪ್ ಪಡೆದ ಅವರು, ಆಕ್ಸ್ಫರ್ಡ್ ವಿಶ್ವವಿದ್ಯಾಲಯದಲ್ಲಿ ಸಾರ್ವಜನಿಕ ಆರೋಗ್ಯ ವಿಭಾಗದಲ್ಲಿ ಡಾಕ್ಟರೇಟ್ (DPhil) ಪೂರ್ಣಗೊಳಿಸಿದರು. ಬಳಿಕ ಕೊಲಂಬಿಯಾ ವಿಶ್ವವಿದ್ಯಾಲಯದಿಂದ ವೈದ್ಯಕೀಯ ಪದವಿ (MD) ಪಡೆದರು. ಸಾಂಕ್ರಾಮಿಕ ರೋಗಶಾಸ್ತ್ರದ ಸಹಾಯಕ ಪ್ರಾಧ್ಯಾಪಕರಾಗಿಯೂ ಸೇವೆ ಸಲ್ಲಿಸಿದರು.

ವೈದ್ಯಕೀಯ ಅಭ್ಯಾಸಕ್ಕೆ ಮಾತ್ರ ಸೀಮಿತವಾಗದೆ, ಸಾರ್ವಜನಿಕ ಆರೋಗ್ಯ ನೀತಿಗಳ ಮೂಲಕ ಲಕ್ಷಾಂತರ ಜನರ ಬದುಕನ್ನು ಸುಧಾರಿಸುವ ಹಾದಿಯನ್ನು ಅವರು ಆಯ್ಕೆ ಮಾಡಿಕೊಂಡರು.

ಕೇವಲ 30ನೇ ವಯಸ್ಸಿನಲ್ಲಿ ಡೆಟ್ರಾಯಿಟ್ ನಗರದ ಸಾರ್ವಜನಿಕ ಆರೋಗ್ಯ ಇಲಾಖೆಯ ಕಾರ್ಯನಿರ್ವಾಹಕ ನಿರ್ದೇಶಕರಾಗಿ ನೇಮಕಗೊಂಡರು. ಅಮೆರಿಕದ ಪ್ರಮುಖ ನಗರವೊಂದರ ಕಿರಿಯ ಆರೋಗ್ಯ ಅಧಿಕಾರಿಗಳಲ್ಲಿ ಒಬ್ಬರೆಂಬ ಹೆಗ್ಗಳಿಕೆಗೆ ಪಾತ್ರರಾದರು.

ದಿವಾಳಿಯಾಗಿದ್ದ ನಗರದ ಆರೋಗ್ಯ ಇಲಾಖೆಯನ್ನು ಮರುನಿರ್ಮಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಮ್ಯಾರಥಾನ್ ಪೆಟ್ರೋಲಿಯಂ ರಿಫೈನರಿಯಿಂದ ಹೊರಬರುತ್ತಿದ್ದ ಸಲ್ಫರ್ ಡೈಆಕ್ಸೈಡ್ ಮಾಲಿನ್ಯದ ವಿರುದ್ಧ ಹೋರಾಡಿ, ಅದನ್ನು ತಗ್ಗಿಸುವಲ್ಲಿ ಯಶಸ್ವಿಯಾದರು. ಫ್ಲಿಂಟ್ ನೀರಿನ ಬಿಕ್ಕಟ್ಟಿನ ಸಂದರ್ಭದಲ್ಲಿ ಶಾಲೆಗಳಲ್ಲಿ ಸೀಸದ ಮಾಲಿನ್ಯದ ತಪಾಸಣೆ ನಡೆಸಿ ಮಕ್ಕಳ ಆರೋಗ್ಯ ರಕ್ಷಣೆಗೆ ಮುಂದಾದರು.

ನಂತರ ವೇನ್ ಕೌಂಟಿಯ ಆರೋಗ್ಯ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ ಅವರು, ಒಂದು ಲಕ್ಷಕ್ಕೂ ಹೆಚ್ಚು ನಾಗರಿಕರ ಒಟ್ಟು 95 ಮಿಲಿಯನ್ ಡಾಲರ್ ವೈದ್ಯಕೀಯ ಸಾಲವನ್ನು ಮನ್ನಾ ಮಾಡುವ ಯೋಜನೆಯನ್ನು ಜಾರಿಗೆ ತಂದರು.

►ಭಟ್ಕಳದ ಕುಟುಂಬದೊಂದಿಗೆ ವೈವಾಹಿಕ ನಂಟು

ಅಲ್-ಸಯೀದ್ ಅವರ ಜೀವನದಲ್ಲಿ ಭಾರತ, ಅದರಲ್ಲೂ ಕರ್ನಾಟಕದ ಕರಾವಳಿಯ ಭಟ್ಕಳದೊಂದಿಗಿನ ನಂಟು ವಿಶೇಷವಾಗಿದೆ. ಅವರ ಪತ್ನಿ ಡಾ. ಸಾರಾ ಜುಕಾಕು ಅವರು ಭಟ್ಕಳ ಮೂಲದ ಹೆಸರಾಂತ ಅಮೆರಿಕನ್ ವೈದ್ಯ ಡಾ. ತಯ್ಯಬ್ ಜುಕಾಕು ಅವರ ಪುತ್ರಿ.

ಅಮೆರಿಕದಲ್ಲಿ ನೆಫ್ರಾಲಜಿಸ್ಟ್ ಆಗಿ ಸೇವೆ ಸಲ್ಲಿಸಿರುವ ಡಾ. ತಯ್ಯಬ್ ಜುಕಾಕು ಅವರು ಅಲ್ಲಿನ ವಿವಿಧ ಸಾಮಾಜಿಕ ಹಾಗೂ ಸೇವಾ ಸಂಘ-ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದಾರೆ. ಅವರು ಭಟ್ಕಳದ ಹಿರಿಯ ಸಾಮಾಜಿಕ ಮತ್ತು ರಾಜಕೀಯ ಧುರೀಣ ದಿವಂಗತ ಶಂಸುದ್ದೀನ್ ಜುಕಾಕು ಅವರ ಪುತ್ರ.

ಶಂಸುದ್ದೀನ್ ಜುಕಾಕು ಅವರು ಬಾಂಬೆ ಪ್ರೆಸಿಡೆನ್ಸಿಯಿಂದ ಒಂದು ಬಾರಿ ಹಾಗೂ ಹೊನ್ನಾವರ ಕ್ಷೇತ್ರದಿಂದ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ಬಿ.ಡಿ. ಜತ್ತಿ ಅವರ ಸರಕಾರದಲ್ಲಿ ಆರ್ಥಿಕ ಖಾತೆಯ ಸಹಾಯಕ ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದರು.

2006ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅಲ್-ಸಯೀದ್ ಮತ್ತು ಸಾರಾ ದಂಪತಿಗೆ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಹೆರಿಗೆಯ ನಂತರ ಸಾರಾ ಅವರು ತೀವ್ರ ವೈದ್ಯಕೀಯ ಸಮಸ್ಯೆಗಳಿಗೆ ತುತ್ತಾದಾಗ ಕಾರ್ಮಿಕ ಸಂಘಟನೆಯೊಂದು ಅವರ ಬೆಂಬಲಕ್ಕೆ ನಿಂತಿತ್ತು. ರಜೆ ಹಾಗೂ ಇತರ ಹಕ್ಕುಗಳನ್ನು ರಕ್ಷಿಸಲು ನೆರವಾಗಿತ್ತು. ಈ ಘಟನೆ ಅಲ್-ಸಯೀದ್ ಅವರ ಕಾರ್ಮಿಕ ಪರ ನಿಲುವಿಗೆ ಮತ್ತಷ್ಟು ಬಲ ನೀಡಿತು. ಅಳಿಯನ ರಾಜಕೀಯ ಹೋರಾಟಕ್ಕೆ ಮಾವ ಡಾ. ತಯ್ಯಬ್ ಜುಕಾಕು ಕೂಡ ಬೆಂಬಲವಾಗಿ ನಿಂತಿದ್ದರು.

►ಕಾರ್ಪೊರೇಟ್ ದೇಣಿಗೆಗೆ ವಿರೋಧ

ರಾಜಕೀಯವಾಗಿ ಅಲ್-ಸಯೀದ್ ಅವರು ಬರ್ನಿ ಸ್ಯಾಂಡರ್ಸ್ ಅವರ ಪ್ರಗತಿಪರ ಆರ್ಥಿಕ ಸಿದ್ಧಾಂತದ ಪ್ರತಿಪಾದಕರು. ಕಾರ್ಪೊರೇಟ್ ದೇಣಿಗೆಗಳನ್ನು ಸಂಪೂರ್ಣವಾಗಿ ತಿರಸ್ಕರಿಸಿ, ಜನಸಾಮಾನ್ಯರು ನೀಡುವ ಸಣ್ಣ ಮೊತ್ತದ ದೇಣಿಗೆಗಳ ಮೂಲಕವೇ ರಾಜಕೀಯ ನಡೆಸುವುದು ಅವರ ತತ್ವವಾಗಿದೆ.

ಪ್ರತಿಯೊಬ್ಬ ಅಮೆರಿಕನ್ ಪ್ರಜೆಗೂ ಸರಕಾರದ ವೆಚ್ಚದಲ್ಲೇ ಆರೋಗ್ಯ ವಿಮೆ ದೊರೆಯಬೇಕು ಎಂಬ 'ಮೆಡಿಕೇರ್ ಫಾರ್ ಆಲ್' ಯೋಜನೆಯನ್ನು ಅವರು ಬಲವಾಗಿ ಪ್ರತಿಪಾದಿಸುತ್ತಾರೆ. ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನದ ಅನಿಯಂತ್ರಿತ ವಿಸ್ತರಣೆಯಿಂದ ಕಾರ್ಮಿಕರ ಹಕ್ಕುಗಳಿಗೆ ಧಕ್ಕೆಯಾಗದಂತೆ ಫೆಡರಲ್ ಮಟ್ಟದಲ್ಲಿ ನಿಯಂತ್ರಣ ತರಬೇಕು ಎಂಬುದು ಅವರ ಆಗ್ರಹ. ಬೃಹತ್ ಡೇಟಾ ಸೆಂಟರ್ ಗಳ ಅತಿಯಾದ ವಿದ್ಯುತ್ ಬಳಕೆಯ ಹೊರೆ ಸಾಮಾನ್ಯ ಗ್ರಾಹಕರ ಮೇಲೆ ಬೀಳದಂತೆ ತಡೆಯಬೇಕು ಎಂದೂ ಒತ್ತಾಯಿಸುತ್ತಾರೆ.

►ಗಾಝಾ ಯುದ್ಧದ ವಿರುದ್ಧ ನಿಲುವು

ವಿದೇಶಾಂಗ ನೀತಿಯಲ್ಲೂ ಅಲ್-ಸಯೀದ್ ರಾಜಿಯಿಲ್ಲದ ನಿಲುವು ಹೊಂದಿದ್ದಾರೆ. ಗಾಝಾದಲ್ಲಿ ನಡೆಯುತ್ತಿರುವ ಯುದ್ಧವನ್ನು ಬಹಿರಂಗವಾಗಿ ನರಮೇಧ ಎಂದು ಖಂಡಿಸಿರುವ ಅವರು, ಅಮೆರಿಕವು ವಿದೇಶಿ ಸೇನೆಗಳಿಗೆ ನೀಡುತ್ತಿರುವ ಶತಕೋಟಿ ಡಾಲರ್ ಗಳ ಮಿಲಿಟರಿ ನೆರವನ್ನು ತಕ್ಷಣವೇ ರದ್ದುಗೊಳಿಸಬೇಕೆಂದು ಒತ್ತಾಯಿಸಿದ್ದಾರೆ.

ಇಸ್ರೇಲ್ ಪರ ಲಾಬಿ ನಡೆಸುವ ಐಪ್ಯಾಕ್ ಸಂಘಟನೆಯ ಪ್ರಭಾವವನ್ನು ನೇರವಾಗಿ ವಿರೋಧಿಸಿದ್ದರಿಂದ ಅವರ ವಿರುದ್ಧ ಭಾರಿ ಅಪಪ್ರಚಾರ ನಡೆದಿತ್ತು. ಆದರೂ ತಮ್ಮ ನಿಲುವಿನಿಂದ ಹಿಂದೆ ಸರಿಯದ ಅವರು, ತೆರಿಗೆದಾರರ ಹಣವನ್ನು ವಿದೇಶಗಳ ಬಾಂಬ್ ಗಳಿಗೆ ವ್ಯಯಿಸುವ ಬದಲು ಸ್ವದೇಶದ ಶಾಲೆಗಳು ಮತ್ತು ಆರೋಗ್ಯ ರಕ್ಷಣೆಗೆ ಬಳಸಬೇಕು ಎಂದು ಪ್ರತಿಪಾದಿಸಿದ್ದರು.

ಚುನಾವಣಾ ವೇದಿಕೆಯಲ್ಲಿ ತಮ್ಮ ಹೆಸರನ್ನು ಅಣಕವಾಡಿದವರಿಗೆ ಮತಪೆಟ್ಟಿಗೆಯ ಮೂಲಕವೇ ಉತ್ತರ ನೀಡಿರುವ ಅಲ್-ಸಯೀದ್ ಅವರ ಗೆಲುವು, ಧರ್ಮ, ಹೆಸರು ಮತ್ತು ಮೂಲದ ಆಧಾರದಲ್ಲಿ ಸಮಾಜವನ್ನು ವಿಭಜಿಸುವ ಪ್ರಯತ್ನಗಳಿಗೆ ಮಿಶಿಗನ್ನ ಜನರು ತಿರಸ್ಕಾರ ವ್ಯಕ್ತಪಡಿಸಿದ್ದಾರೆ ಎಂಬ ಸಂದೇಶ ನೀಡಿದೆ.

ವೈದ್ಯಕೀಯ ವಿಜ್ಞಾನ, ಸಾರ್ವಜನಿಕ ಆಡಳಿತ ಮತ್ತು ಕಾರ್ಮಿಕ ಪರ ಹೋರಾಟದ ಹಿನ್ನೆಲೆಯಿಂದ ಬಂದಿರುವ ಈ ಮುಸ್ಲಿಂ ಯುವ ನಾಯಕನ ಗೆಲುವು ಅಮೆರಿಕದ ಸಂಸದೀಯ ರಾಜಕಾರಣದಲ್ಲಿ ಹೊಸ ಅಧ್ಯಾಯಕ್ಕೆ ನಾಂದಿ ಹಾಡಿದೆ. ತಾವೇ ಶ್ರೇಷ್ಠರು ಎಂದುಕೊಳ್ಳುವ ವಾಷಿಂಗ್ಟನ್‌ನ ಪ್ರಭಾವಿ ರಾಜಕಾರಣಿಗಳು ಇಷ್ಟಪಡಲಿ ಅಥವಾ ಬಿಡಲಿ, ಡಾ. ಅಬ್ದುಲ್ ಅಲ್-ಸಯೀದ್ ಅವರನ್ನು ಇನ್ನು ಮುಂದೆ ಗೌರವದಿಂದ 'ಸೆನೆಟರ್' ಎಂದೇ ಸಂಬೋಧಿಸಬೇಕಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor