ಹಾರ್ಮುಝ್ನಲ್ಲಿ ಯುಎಇ ಹಡಗಿನ ಮೇಲೆ ದಾಳಿ: 11 ಜನರಿಗೆ ಗಾಯ; ಓರ್ವ ಸಿಬ್ಬಂದಿ ನಾಪತ್ತೆ
Photo Credit : reuters.com
ಅಬು ಧಾಬಿ: ಹಾರ್ಮುಝ್ ಜಲಸಂಧಿಯ ಮೂಲಕ ಸಾಗುತ್ತಿದ್ದ ಅಬುಧಾಬಿ ನ್ಯಾಷನಲ್ ಆಯಿಲ್ ಕಂಪನಿಯ ಹಡಗಿನ ಮೇಲೆ ಮಂಗಳವಾರ ಸಂಜೆ ದಾಳಿ ನಡೆದಿದ್ದು, ಘಟನೆಯಲ್ಲಿ 11 ಮಂದಿ ಗಾಯಗೊಂಡಿದ್ದಾರೆ ಮತ್ತು ಓರ್ವ ಸಿಬ್ಬಂದಿ ನಾಪತ್ತೆಯಾಗಿದ್ದಾರೆ ಎಂದು ಎಮಿರೇಟ್ಸ್ ನ್ಯೂಸ್ ಏಜೆನ್ಸಿ ಬುಧವಾರ ವರದಿ ಮಾಡಿದೆ.
ಅಧಿಕಾರಿಗಳ ಸಮನ್ವಯದೊಂದಿಗೆ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಉಳಿದೆಲ್ಲಾ ಸಿಬ್ಬಂದಿಯನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ ಎಂದು ಕಂಪನಿ ತಿಳಿಸಿದೆ.
ಮಧ್ಯಪ್ರಾಚ್ಯಕ್ಕೆ ಸಂಬಂಧಿಸಿದ ಕೆಲವು ಮಹತ್ವದ ಬೆಳವಣಿಗೆಗಳು:
ಪರ್ಷಿಯನ್ ಗಲ್ಫ್‍ನಲ್ಲಿರುವ ಅಮೆರಿಕದ ಮಿತ್ರರಾಷ್ಟ್ರಗಳ ಮೇಲೆ ಇರಾನ್ ತನ್ನ ದಾಳಿಯನ್ನು ತೀವ್ರಗೊಳಿಸಿದ್ದು ಇರಾನ್ ಉಡಾಯಿಸಿದ ಶಸ್ತ್ರಾಸ್ತ್ರಗಳನ್ನು ತಾವು ತಡೆಹಿಡಿದಿರುವುದಾಗಿ ಬಹರೈನ್ ಮತ್ತು ಕುವೈತ್ ಬುಧವಾರ ತಿಳಿಸಿವೆ.
ಕುವೈತ್‍ನ ಅಲಿ ಅಲ್-ಸೇಲಂ ವಾಯುನೆಲೆಯಲ್ಲಿರುವ ಅಮೆರಿಕ ಸೇನೆಗೆ ಸೇರಿದ ಪೇಟ್ರಿಯಾಟ್ ವಾಯು ರಕ್ಷಣಾ ವ್ಯವಸ್ಥೆಗಳು ಹಾಗೂ ಡ್ರೋನ್ ಮತ್ತು ಕ್ಷಿಪಣಿ ಉಡಾವಣಾ ವೇದಿಕೆಗಳನ್ನು ತಮ್ಮ ಡ್ರೋನ್‍ಗಳು ಗುರಿಯಾಗಿಸಿಕೊಂಡಿವೆ ಎಂದು ಇರಾನ್ ಸೇನೆ ತಿಳಿಸಿದೆ.
ತಮ್ಮ ವಾಯು ರಕ್ಷಣಾ ಪಡೆಗಳು ಶತ್ರುಗಳ ಡ್ರೋನ್ ಬೆದರಿಕೆಗಳಿಗೆ ಪ್ರತಿಕ್ರಿಯಿಸುತ್ತಿವೆ ಎಂದು ಕುವೈತ್ ಸೇನೆ ಬುಧವಾರ ತಿಳಿಸಿದ್ದು, ಭದ್ರತೆ ಮತ್ತು ಸುರಕ್ಷತಾ ಸಲಹೆಗಳನ್ನು ಪಾಲಿಸುವಂತೆ ಸಾರ್ವಜನಿಕರಿಗೆ ಮನವಿ ಮಾಡಿದೆ.