ಕ್ಸಿ ಜಿಂಪಿಂಗ್  | Photo Credit : PTI 

ಶೆನ್‍ಜೆನ್: ಏಷ್ಯಾ-ಪೆಸಿಫಿಕ್ ಪ್ರದೇಶವು ಸ್ಥಿರವಾಗಿ ಮತ್ತು ಕ್ರಿಯಾಶೀಲವಾಗಿ ಉಳಿಯಬೇಕಾದರೆ ಹೆಚ್ಚು ಮುಕ್ತ ವ್ಯಾಪಾರ ಮತ್ತು ಸಮಾನ ಬೆಳವಣಿಗೆಯನ್ನು ಅನುಸರಿಸಬೇಕು ಎಂದು ಚೀನಾ ಅಧ್ಯಕ್ಷ ಕ್ಸಿ ಜಿಂಪಿಂಗ್ ಬುಧವಾರ ಹೇಳಿದ್ದಾರೆ. ವಾರ್ಷಿಕ ಏಷ್ಯಾ-ಪೆಸಿಫಿಕ್ ಆರ್ಥಿಕ ಸಹಕಾರ (ಅಪೆಕ್) ಶೃಂಗಸಭೆಯ ಹಿನ್ನೆಲೆಯಲ್ಲಿ, ದಕ್ಷಿಣ ಚೀನಾದ ತಂತ್ರಜ್ಞಾನ ಮತ್ತು ಆರ್ಥಿಕ ಕೇಂದ್ರವಾದ ಶೆನ್‍ಜೆನ್‍ನಲ್ಲಿ ನೆರೆದಿದ್ದ ಉದ್ಯಮ ಕಾರ್ಯನಿರ್ವಾಹಕರನ್ನು ಉದ್ದೇಶಿಸಿ ಅವರು ಮಾತನಾಡಿದರು.

ಚೀನಾವು ಕೇವಲ ಸುಂಕಗಳನ್ನು ಕಡಿತಗೊಳಿಸುವುದು ಮತ್ತು ಮಾರುಕಟ್ಟೆ ಪ್ರವೇಶವನ್ನು ವಿಸ್ತರಿಸುವುದು ಮಾತ್ರವಲ್ಲದೆ, ಇನ್ನೂ ಒಂದು ಹೆಜ್ಜೆ ಮುಂದೆ ಹೋಗಲಿದೆ. ನಿಯಮಗಳು, ನಿಬಂಧನೆಗಳು ಮತ್ತು ಮಾನದಂಡಗಳಂತಹ ಸವಾಲಿನ ಕ್ಷೇತ್ರಗಳಲ್ಲಿ ನಾವು ಸುಧಾರಣೆಗಳನ್ನು ತರುತ್ತೇವೆ' ಎಂದು ಕ್ಸಿ ಹೇಳಿದ್ದು ಜಾಗತಿಕ ಹೂಡಿಕೆದಾರರಿಗೆ ಪರಿಸ್ಥಿತಿಗಳನ್ನು ಸುಧಾರಿಸುವ ಚೀನಾದ ಭರವಸೆಯನ್ನು ಪುನರುಚ್ಚರಿಸಿದರು.

ತನ್ನದೇ ಆದ ಅಭಿವೃದ್ಧಿಯನ್ನು ಸಾಧಿಸುತ್ತಿರುವಾಗಲೇ, ಚೀನಾವು ಇತರ ದೇಶಗಳೊಂದಿಗೆ ಅವಕಾಶಗಳನ್ನು ಹಂಚಿಕೊಂಡಿದೆ ಮತ್ತು ಸಾಮಾನ್ಯ ಅಭಿವೃದ್ಧಿಗಾಗಿ ಶ್ರಮಿಸಿದೆ. ಇದು ವಿಶ್ವ ಆರ್ಥಿಕ ಬೆಳವಣಿಗೆ ಮತ್ತು ಅಂತಾರಾಷ್ಟ್ರೀಯ ವ್ಯಾಪಾರ ಹಾಗೂ ಆರ್ಥಿಕ ಸಹಕಾರಕ್ಕೆ ಸ್ಥಿರತೆಯನ್ನು ತಂದಿದೆ ಎಂದು ಅವರು ಹೇಳಿದರು.

2017ರ ನಂತರ ಅಪೆಕ್ ನಾಯಕರ ಸಭೆಯಲ್ಲಿ ಮೊದಲ ಬಾರಿಗೆ ಖುದ್ದಾಗಿ ಭಾಗವಹಿಸಿದ ಪುಟಿನ್, ಸಿಇಒ ಶೃಂಗಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ `ನಿರ್ಬಂಧಗಳು, ಸುಂಕಗಳು ಮತ್ತು ರಫ್ತು ನಿರ್ಬಂಧಗಳು ತಮ್ಮ ಉಪಯುಕ್ತತೆಯನ್ನು ಕಳೆದುಕೊಂಡಿವೆ ಮತ್ತು ಅವುಗಳ ಬೆದರಿಕೆಯ ಪರಿಣಾಮವು ಬಹುತೇಕ ನಶಿಸಿಹೋಗಿದೆ' ಎಂದು ಹೇಳಿದರು. ಏಷ್ಯಾ-ಪೆಸಿಫಿಕ್ ಪ್ರದೇಶದೊಂದಿಗೆ ನಿಕಟ ಆರ್ಥಿಕ ಸಂಬಂಧವನ್ನು ಬೆಳೆಸುವ ತಮ್ಮ ದೇಶದ ಇಚ್ಛೆಯನ್ನು ಒತ್ತಿಹೇಳಿದ ಅವರು, ಈ ಪ್ರದೇಶದೊಂದಿಗಿನ ವ್ಯಾಪಾರವು ರಶ್ಯದ ಒಟ್ಟು ವ್ಯಾಪಾರದ ಅರ್ಧಕ್ಕಿಂತ ಹೆಚ್ಚಿನ ಪಾಲನ್ನು ಹೊಂದಿದೆ ಎಂದರು. ಅಲ್ಲದೆ, 2035 ರಲ್ಲಿ ಅಪೆಕ್ ಅಧ್ಯಕ್ಷತೆ ವಹಿಸಲು ರಶ್ಯ ಬಿಡ್ ಸಲ್ಲಿಸಿದೆ ಎಂದು ತಿಳಿಸಿದರು.

ತ್ರಿಪಕ್ಷೀಯ ಸಭೆಗೂ ಮುನ್ನ ಜೊತೆಯಾಗಿ ಕಾಣಿಸಿಕೊಂಡ ಟ್ರಂಪ್, ಪುಟಿನ್, ಕ್ಸಿ ಜಿಂಪಿಂಗ್

ಶೆನ್‍ಜೆನ್‍ನಲ್ಲಿ ಬುಧವಾರ ರಾತ್ರಿಯ ಔತಣಕೂಟಕ್ಕೂ ಮುನ್ನ ರೆಡ್ ಕಾರ್ಪೆಟ್ ಮೇಲೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ರಶ್ಯ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‍ಪಿಂಗ್ ಚೀನಾದಲ್ಲಿ ಮೊದಲ ಬಾರಿಗೆ ಒಟ್ಟಿಗೆ ಕಾಣಿಸಿಕೊಂಡರು.

ಬಿಬಿಸಿ ವರದಿಯ ಪ್ರಕಾರ, ಟ್ರಂಪ್, ಕ್ಸಿ ಮತ್ತು ಪುಟಿನ್ ನವೆಂಬರ್ 19ರಂದು (ಗುರುವಾರ) ಅಪೆಕ್ ವೇದಿಕೆಯಲ್ಲಿ ಮೊದಲ ಬಾರಿಗೆ ತ್ರಿಪಕ್ಷೀಯ ಸಭೆ ನಡೆಸಲಿದ್ದಾರೆ. ತ್ರಿಪಕ್ಷೀಯ ಸಭೆಯು, ಈ ಮೂವರು ಪ್ರಭಾವಿ ನಾಯಕರು ಉಕ್ರೇನ್ ಮತ್ತು ಯುರೋಪ್ ಅನ್ನು ಕಡೆಗಣಿಸಿ ಉಕ್ರೇನ್‍ನ ಭವಿಷ್ಯದ ಬಗ್ಗೆ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು ಹಾಗೂ ಜಗತ್ತನ್ನು 21ನೇ ಶತಮಾನದ ಪ್ರಭಾವಿ ವಲಯಗಳಾಗಿ ವಿಭಜಿಸಲು ಪ್ರಯತ್ನಿಸಬಹುದು ಎಂಬ ಆತಂಕವನ್ನು ಹುಟ್ಟುಹಾಕಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಕೃಷ್ಣ ಮೂರ್ತಿ , ವಾರ್ತಾಭಾರತಿ

contributor