ಬಾಂಗ್ಲಾದೇಶದಲ್ಲಿ ಮುಂದುವರಿದ ಉದ್ವಿಗ್ನತೆ: ಢಾಕಾ ವಿವಿಯಲ್ಲಿ ಭಾರತದ ವಿರುದ್ಧ ಪ್ರತಿಭಟನೆ
Photo Credit : NDTV
ಢಾಕಾ, ಡಿ.26: ಬಾಂಗ್ಲಾದೇಶದಲ್ಲಿ ಉದ್ವಿಗ್ನತೆ ಮುಂದುವರಿದಿರುವಂತೆಯೇ ಢಾಕಾ ವಿವಿಯಲ್ಲಿ ಶುಕ್ರವಾರ ಮತ್ತೆ ಭಾರತ ವಿರೋಧಿ ಪ್ರತಿಭಟನೆ ಭುಗಿಲೆದ್ದಿರುವುದಾಗಿ ಎನ್‍ಡಿಟಿವಿ ವರದಿ ಮಾಡಿದೆ.
ಶುಕ್ರವಾರದ ಪ್ರಾರ್ಥನೆಯ ಬಳಿಕ ಢಾಕಾ ವಿವಿಯಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿದ್ದು ಈ ಸಂದರ್ಭ ಭಾರತ ವಿರೋಧಿ ಘೋಷಣೆ ಕೂಗಲಾಗಿದೆ. ಇತ್ತೀಚೆಗೆ ಹತ್ಯೆಗೊಳಗಾದ ಯುವನಾಯಕ ಉಸ್ಮಾನ್ ಹಾದಿಯ ಬೆಂಬಲಿಗರು ಪ್ರತಿಭಟನೆಯನ್ನು ಆಯೋಜಿಸಿದ್ದು ಹಾದಿ ಹತ್ಯೆಯ ಬಗ್ಗೆ ತ್ವರಿತ ತನಿಖೆ ನಡೆಸಿ ಹಂತಕರನ್ನು ಗಲ್ಲಿಗೇರಿಸುವಂತೆ ಪ್ರತಿಭಟನಾ ರ್ಯಾಲಿಯಲ್ಲಿ ಆಗ್ರಹಿಸಲಾಗಿದೆ.
ಈ ಮಧ್ಯೆ, ವಿಶ್ವವಿದ್ಯಾಲಯದ ಹೃದಯ ಭಾಗದಲ್ಲಿರುವ `ಮಧುರ್ ಕ್ಯಾಂಟೀನ್' ಅನ್ನು ಧ್ವಂಸಗೊಳಿಸಿರುವುದಾಗಿ ವರದಿಯಾಗಿದೆ. ಸ್ವಾತಂತ್ರ್ಯ ಹೋರಾಟಗಾರನ ಹೆಸರನ್ನು ಹೊಂದಿದ್ದ ಕ್ಯಾಂಟೀನ್‍ನ ಗೋಡೆಯ ಮೇಲೆ `ಬಹಿಷ್ಕಾರ'ದ ಘೋಷಣೆ ಬರೆಯಲಾಗಿದ್ದು ಕ್ಯಾಂಟೀನ್‍ನ ಕಿಟಕಿಗಳನ್ನು ಮುರಿಯಲಾಗಿದೆ. ವಿಶ್ವವಿದ್ಯಾಲಯದ ವಿದ್ಯಾರ್ಥಿ ಯೂನಿಯನ್ ಕಚೇರಿಯ ಎದುರುಗಡೆ ಇರುವ ಕ್ಯಾಂಟೀನ್ ಢಾಕಾ ವಿವಿಯ ರಾಜಕೀಯದ `ಬೌದ್ಧಿಕ ಕೇಂದ್ರಸ್ಥಾನ'ವಾಗಿ ಗುರುತಿಸಿಕೊಂಡಿದೆ. `ಅಪರಿಚಿತ ವ್ಯಕ್ತಿಯೊಬ್ಬ ಕ್ಯಾಂಟೀನ್‍ಗೆ ಆಗಮಿಸಿ ಮೇಜು ಮತ್ತು ಕುರ್ಚಿಗಳನ್ನು ಎಸೆಯತೊಡಗಿದ. ಆಗ ಅಲ್ಲಿದ್ದ ವಿದ್ಯಾರ್ಥಿಗಳು ಆತನನ್ನು ಹಿಡಿದು ಭದ್ರತಾ ಸಿಬ್ಬಂದಿಗಳಿಗೆ ಹಸ್ತಾಂತರಿಸಿದ್ದಾರೆ ಎಂದು ವಿವಿಯ ಮೂಲಗಳನ್ನು ಉಲ್ಲೇಖಿಸಿದ ವರದಿ ಹೇಳಿದೆ. 2024ರಲ್ಲಿ ಪ್ರಧಾನಿಯಾಗಿದ್ದ ಶೇಖ್ ಹಸೀನಾರ ಪದಚ್ಯುತಿಗೆ ಕಾರಣವಾದ ದೇಶವ್ಯಾಪಿ ಪ್ರತಿಭಟನೆಯ ಸಂದರ್ಭ ಢಾಕಾ ವಿವಿ ಮುಂಚೂಣಿಯಲ್ಲಿ ಕಾಣಿಸಿಕೊಂಡಿತ್ತು.
ಉಸ್ಮಾನ್ ಹಾದಿಯ ಹಂತಕರು ಭಾರತಕ್ಕೆ ಪರಾರಿಯಾಗಿರುವುದಾಗಿ ಪ್ರತಿಭಟನಾಕಾರರ ಒಂದು ವಿಭಾಗವು ಪ್ರತಿಪಾದಿಸುತ್ತಿದೆ. ಹಂತಕರನ್ನು ಬಂಧಿಸಲು ಬಾಂಗ್ಲಾ ಸರಕಾರ ಭಾರತದ ಸಹಾಯವನ್ನೂ ಕೋರಿದೆ. ಆದರೆ ಈ ಆರೋಪವನ್ನು ಭಾರತ ಬಲವಾಗಿ ತಿರಸ್ಕರಿಸಿದೆ. ಬಾಂಗ್ಲಾದೇಶದಾದ್ಯಂತ ಅಶಾಂತಿಯು ಮುಹಮ್ಮದ್ ಯೂನುಸ್ ನೇತೃತ್ವದ ಆಡಳಿತಕ್ಕೆ ಹೊಸ ಸವಾಲವನ್ನು ಒಡ್ಡಿದೆ.
ಮುಕ್ತ, ನ್ಯಾಯಸಮ್ಮತ, ಅಂತರ್ಗತ ಚುನಾವಣೆಗೆ ಭಾರತ ಕರೆ
ಬಾಂಗ್ಲಾದೇಶದಲ್ಲಿ ಪ್ರಜಾಪ್ರಭುತ್ವ ಪ್ರಕ್ರಿಯೆಗಳನ್ನು ಬೆಂಬಲಿಸುವುದಾಗಿ ಭಾರತದ ವಿದೇಶಾಂಗ ಇಲಾಖೆ ಶುಕ್ರವಾರ ಹೇಳಿದ್ದು ಬಾಂಗ್ಲಾದಲ್ಲಿ ಮುಕ್ತ, ಅಂತರ್ಗತ ಮತ್ತು ನ್ಯಾಯಸಮ್ಮತ ಚುನಾವಣೆಗೆ ಕರೆ ನೀಡಿದೆ.
`ಬಾಂಗ್ಲಾದೇಶದ ಜನತೆಯೊಂದಿಗೆ ನಮ್ಮ ಸಂಬಂಧಗಳನ್ನು ಬಲಪಡಿಸಲು ಭಾರತ ಬಯಸಿದೆ. ಬಾಂಗ್ಲಾದೇಶದಲ್ಲಿ ಶಾಂತಿ ಮತ್ತು ಸ್ಥಿರತೆಗೆ ಭಾರತ ಒಲವು ತೋರುತ್ತದೆ. ಬಾಂಗ್ಲಾದಲ್ಲಿ ಮುಕ್ತ, ನ್ಯಾಯಸಮ್ಮತ, ಅಂತರ್ಗತ ಮತ್ತು ಸಮಗ್ರ ಪ್ರಜಾಪ್ರಭುತ್ವ ಪ್ರಕ್ರಿಯೆಯಲ್ಲಿ ಜನತೆಯ ಸಕ್ರಿಯ ಪಾಲ್ಗೊಳ್ಳುವಿಕೆಯನ್ನು ನಾವು ಸತತವಾಗಿ ಕರೆ ನೀಡುತ್ತಿದ್ದೇವೆ' ಎಂದು ವಿದೇಶಾಂಗ ಇಲಾಖೆಯ ವಕ್ತಾರರು ಹೇಳಿದ್ದಾರೆ.