×
Ad

ನವೀಕೃತ 20 ಅಂಶಗಳ ಶಾಂತಿ ಪ್ರಸ್ತಾಪ ಮುಂದಿರಿಸಿದ ಉಕ್ರೇನ್

►ಡೊನ್ಬಾಸ್ ಸೇನಾರಹಿತ ವಲಯವಾಗಲು ಸಮ್ಮತಿ ►ರಶ್ಯದ ಪಡೆ ಹಿಂದೆ ಸರಿಯಬೇಕೆಂಬ ಷರತ್ತು

Update: 2025-12-25 21:55 IST

ವೊಲೊದೊಮಿರ್ ಝೆಲೆನ್‍ಸ್ಕಿ | Photo Credit : PTI  

ಕೀವ್, ಡಿ.25: ರಶ್ಯದ ಜೊತೆಗಿನ ಯುದ್ದವನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ನವೀಕೃತ 20 ಅಂಶಗಳ ಶಾಂತಿ ಪ್ರಸ್ತಾಪವನ್ನು ಉಕ್ರೇನ್ ಅಧ್ಯಕ್ಷ ವೊಲೊದೊಮಿರ್ ಝೆಲೆನ್‍ಸ್ಕಿ ಮುಂದಿರಿಸಿದ್ದು ರಶ್ಯದ ಪಡೆಗಳನ್ನು ಹಿಂದಕ್ಕೆ ಕರೆಸಿಕೊಂಡರೆ ಡೊನ್ಬಾಸ್ ಪ್ರಾಂತವನ್ನು ಸೇನಾ ರಹಿತ ವಲಯವೆಂದು ಗುರುತಿಸಲು ಸಿದ್ಧ ಎಂದು ಹೇಳಿದ್ದಾರೆ.

ಫ್ಲೋರಿಡಾದಲ್ಲಿ ಅಮೆರಿಕಾ ಮತ್ತು ಉಕ್ರೇನ್ ನಿಯೋಗಗಳ ನಡುವಿನ ಮಾತುಕತೆಯಲ್ಲಿ ಈ ಯೋಜನೆಯನ್ನು ಅಂತಿಮಗೊಳಿಸಲಾಗಿದ್ದು ಇದೀಗ ರಶ್ಯದ ಪ್ರತಿಕ್ರಿಯೆಗಾಗಿ ಕಾಯುತ್ತಿದ್ದೇವೆ. ಅಮೆರಿಕಾದೊಂದಿಗೆ ಮಾತುಕತೆ ನಡೆಸಿದ ಬಳಿಕ ರಶ್ಯ ಅಧಿಕೃತವಾಗಿ ಪ್ರತಿಕ್ರಿಯಿಸುವ ನಿರೀಕ್ಷೆಯಿದೆ ಎಂದವರು ಹೇಳಿದ್ದಾರೆ.

ಅಮೆರಿಕಾ, ನೇಟೊ ಮತ್ತು ಯುರೋಪಿಯನ್ ಮಿತ್ರರಿಂದ ಭದ್ರತೆಯ ಖಾತರಿಯನ್ನು ಉಕ್ರೇನ್ ಬಯಸಿದೆ. ಒಂದು ವೇಳೆ ರಶ್ಯ ಮತ್ತೊಮ್ಮೆ ಉಕ್ರೇನ್ ಮೇಲೆ ದಾಳಿ ನಡೆಸಿದರೆ ಶಾಂತಿ ಒಪ್ಪಂದದ ಪ್ರಕಾರ ಸಂಘಟಿತ ಪ್ರತಿಕ್ರಿಯೆಗೆ ಮಿತ್ರರಾಷ್ಟ್ರಗಳು ಬದ್ಧವಾಗಿರುತ್ತವೆ.

ಉಕ್ರೇನ್‌ ನ ಡೊನ್ಬಾಸ್ ಪ್ರದೇಶಕ್ಕೆ ಸಂಬಂಧಿಸಿದ ವಿಷಯವು ಅತ್ಯಂತ ವಿವಾದಾತ್ಮಕವಾಗಿದೆ. ಪ್ರಸ್ತಾಪವು ಡೊನ್ಬಾಸ್‍ ನಲ್ಲಿ ಸೇನಾರಹಿತ ವಲಯ ಅಥವಾ ಮುಕ್ತ ಆರ್ಥಿಕ ವಲಯ ಎಂಬ ಎರಡು ಸಂಭಾವ್ಯ ಮಾರ್ಗಗಳನ್ನು ಪ್ರಸ್ತುತಪಡಿಸಿದೆ. ಇಲ್ಲಿಂದ ತನ್ನ ಪಡೆಗಳ ಸಂಪೂರ್ಣ ವಾಪಸಾತಿಯನ್ನು ಉಕ್ರೇನ್ ವಿರೋಧಿಸುತ್ತಿದ್ದು ಅಮೆರಿಕಾದ ನಿಯೋಗ ಭಾಗಶಃ ವಾಪಸಾತಿಯನ್ನು ಪ್ರಸ್ತಾಪಿಸಿದ್ದಾರೆ. ಉಕ್ರೇನಿಯನ್ ಪಡೆಗಳು ತೆರವುಗೊಳಿಸುವ ಯಾವುದೇ ಪ್ರದೇಶವು ಉಕ್ರೇನ್‌ ನ ಪೊಲೀಸ್ ವ್ಯವಸ್ಥೆಯಡಿ ಇರುತ್ತದೆ ಎಂಬುದು ಝೆಲೆನ್‍ಸ್ಕಿ ವಾದವಾಗಿದೆ.

`ಉಕ್ರೇನ್‌ ನ ಡೊನೆಟ್ಸ್ಕ್ ಪ್ರಾಂತದ 25% ಮಾತ್ರ ಈಗ ಉಕ್ರೇನ್‌ ನ ನಿಯಂತ್ರಣದಲ್ಲಿದ್ದು ಇಲ್ಲಿಂದ ತನ್ನ ಪಡೆಗಳನ್ನು 40 ಕಿ.ಮೀವರೆಗೆ ಹಿಂದಕ್ಕೆ ಕರೆಸಿಕೊಳ್ಳಲು ನಾವು ಸಿದ್ದ. ಆದರೆ ಅಷ್ಟೇ ಪ್ರಮಾಣದಲ್ಲಿ ರಶ್ಯದ ಸೇನೆಯೂ ಹಿಂದೆ ಸರಿಯಬೇಕು. ಈಗ ಎರಡು ಆಯ್ಕೆಗಳಿವೆ. ಯುದ್ಧ ಮುಂದುವರಿಯಬೇಕು ಅಥವಾ ಸಂಭಾವ್ಯ ಅರ್ಥಿಕ ವಲಯಗಳ ಬಗ್ಗೆ ನಿರ್ಧರಿಸಬೇಕು' ಎಂದು ಝೆಲೆನ್‍ಸ್ಕಿ ಪ್ರತಿಪಾದಿಸಿದ್ದಾರೆ.

ರಶ್ಯದ ಪಡೆಗಳು ಈಗ ಉಕ್ರೇನ್‌ ನ ಆಯಕಟ್ಟಿನ ನಗರಗಳಾದ ಸ್ಲೊವಿಯಾಂಸ್ಕ್ ಮತ್ತು ಕ್ರಮಟೋಸ್ರ್ಕ್‍ಗಳಿಂದ ಸುಮಾರು 40 ಕಿ.ಮೀ ಪೂರ್ವದಲ್ಲಿವೆ.

ಒಳನುಸುಳುವಿಕೆಯನ್ನು ತಡೆಗಟ್ಟಲು ಪ್ರಸ್ತುತ ಸಂಪರ್ಕ ರೇಖೆಯಲ್ಲಿ ಅಂತರಾಷ್ಟ್ರೀಯ ಪಡೆಗಳ ನಿಯೋಜನೆಯನ್ನು ಯೋಜನೆಯು ಪ್ರಸ್ತಾಪಿಸುತ್ತದೆ. (ಈಗ ಉಕ್ರೇನ್ ಸರಕಾರದ ನಿಯಂತ್ರಣದಲ್ಲಿರುವ ಭೂಪ್ರದೇಶವನ್ನು ರಶ್ಯ ಆಕ್ರಮಿತ ಪ್ರದೇಶದಿಂದ ಬೇರ್ಪಡಿಸುವ ರೇಖೆಯನ್ನು ಸಂಪರ್ಕ ರೇಖೆ ಎಂದು ಪರಿಗಣಿಸಲಾಗಿದೆ). ಉಕ್ರೇನ್‌ ನ ಸಾರ್ವಭೌಮತ್ವವನ್ನು ಮರು ದೃಢೀಕರಿಸುವ ಜೊತೆಗೆ ಯಾವುದೇ ಆರ್ಥಿಕ ವಲಯದಲ್ಲಿ ರಶ್ಯದ ಪೊಲೀಸ್ ವ್ಯವಸ್ಥೆಯನ್ನು ತಿರಸ್ಕರಿಸುತ್ತದೆ. ಆದರೆ ಯುರೋಪಿಯನ್ ನೇತೃತ್ವದ ಅಂತಾರಾಷ್ಟ್ರೀಯ ಪಡೆಯನ್ನು ರಶ್ಯ ಈಗಾಗಲೇ ವಿರೋಧಿಸಿದೆ.

► ನೇಟೊ ಸೇರ್ಪಡೆಗೆ ಅವಕಾಶ

ಈ ಹಿಂದಿನ ಪ್ರಸ್ತಾಪದಲ್ಲಿ ನೇಟೋಗೆ ಉಕ್ರೇನ್ ಸೇರ್ಪಡೆಯ ವಿಚಾರವನ್ನು ತಳ್ಳಿಹಾಕಲಾಗಿತ್ತು. ಆದರೆ ನವೀಕೃತ ಪ್ರಸ್ತಾಪದಲ್ಲಿ ಇದನ್ನು ಸೇರಿಸಲಾಗಿಲ್ಲ. ಜೊತೆಗೆ, ಯುರೋಪಿಯನ್ ಯೂನಿಯನ್‍ಗೆ ಸೇರ್ಪಡೆಗೊಳ್ಳುವ ಉಕ್ರೇನ್‌ ನ ಆಶಯಕ್ಕೂ ಅವಕಾಶ ಕಲ್ಪಿಸಿದ್ದು ಈಗ `ಅಭ್ಯರ್ಥಿ' ಹಂತದಲ್ಲಿರುವ ಉಕ್ರೇನ್‌ ನ ಅರ್ಜಿಯನ್ನು ಮುಂದಿನ ಹಂತಕ್ಕೆ ಏರಿಸಲು ಪ್ರಸ್ತಾಪಿಸಲಾಗಿದೆ. ಜೊತೆಗೆ, ಉಕ್ರೇನ್ ಮರು ನಿರ್ಮಾಣಕ್ಕೆ ಅಮೆರಿಕ ಮತ್ತು ಯುರೋಪ್ ಒಳಗೊಂಡ ಪ್ರಸ್ತಾವಿತ 200 ಶತಕೋಟಿ ಡಾಲರ್ ಹೂಡಿಕೆ ನಿಧಿಯ ಬಗ್ಗೆಯೂ ಶಾಂತಿ ಯೋಜನೆಯಲ್ಲಿ ಉಲ್ಲೇಖಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News