ನದಿ ಮೂಲಕ ಉತ್ತರಪ್ರದೇಶಕ್ಕೆ ತೇಲಿ ಬರುತ್ತಿರುವ ನೇಪಾಳ ಪ್ರವಾಹ ಸಂತ್ರಸ್ತರ ಮೃತದೇಹಗಳು
photo Credit: indianexpres
ಲಕ್ನೋ: ನೇಪಾಳದಲ್ಲಿ ಇತ್ತೀಚೆಗೆ ಸಂಭವಿಸಿದ ದಿಢೀರ್ ಪ್ರವಾಹಕ್ಕೆ ಬಲಿಯಾದವರ ಮೃತದೇಹಗಳು ಗಂಡಕಿ ನದಿ ಮೂಲಕ ಉತ್ತರಪ್ರದೇಶಕ್ಕೆ ತೇಲಿಬರುತ್ತಿವೆ. ಈವರೆಗೆ ಮಹಾರಾಜಗಂಜ್ ಹಾಗೂ ಕುಶಿಗಂಜ್ ಜಿಲ್ಲೆಗಳಲ್ಲಿ ಕಳೆದ ಎರಡು ದಿನಗಳಿಂದ 10 ಮೃತದೇಹಗಳನ್ನು ತೆಗೆದಿದ್ದು, ಮೃತರ ಗುರುತುಗಳನ್ನು ಅಥವಾ ಅವರ ಕುಟುಂಬಿಕರನ್ನು ಇನ್ನೂ ಪತ್ತೆ ಹಚ್ಚಲಾಗಿಲ್ಲವೆಂದು ಪೊಲೀಸರು ತಿಳಿಸಿದ್ದಾರೆ.
ನೇಪಾಳದಲ್ಲಿ ಹುಟ್ಟುವ ಗಂಡಕಿ ನದಿಯು, ಭಾರತದ ಬಿಹಾರ ಹಾಗೂ ಉತ್ತರಪ್ರದೇಶದಲ್ಲಿ ಹರಿಯುತ್ತದೆ. ಅಧಿಕೃತ ಮೂಲಗಳ ಪ್ರಕಾರ, ಗಂಡಕಿ ನದಿನೀರಿನಲ್ಲಿ ಈ ತನಕ ತೇಲಿಬಂದ ಎಲ್ಲಾ ಮೃತದೇಹಗಳನ್ನು ತೆಗೆಯಲಾಗಿದೆ. ಎಲ್ಲಾ ಮೃತದೇಹಗಳು ಊದಿಕೊಂಡಿದ್ದು, ಕೊಳೆತು ನಾರುವ ಸ್ಥಿತಿಗೆ ತಲುಪಿವೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಈ ಮೃತದೇಹಗಳನ್ನು ಮಹಾರಾಜಗಂಜ್ ಹಾಗೂ ಕುಶಿನಗರದ ಶವಾಗಾರಗಳಲ್ಲಿ ಕೊಂಡೊಯ್ಯಲಾಗಿದ್ದು, ಅವುಗಳನ್ನು 72 ತಾಸುಗಳವರೆಗೆ ಅಲ್ಲಿರಿಸಲಾಗುವುದು ಎಂದು ಜಿಲ್ಲಾಡಳಿತವು ತಿಳಿಸಿದೆ.
ಶವಗಳ ಮೈಯಲ್ಲಿರುವ ಒಡವೆ ಮತ್ತಿತರ ಸೊತ್ತುಗಳನ್ನು ದಾಖಲಿಸಿಕೊಳ್ಳಲಾಗಿದೆ. ದೇಹದಲ್ಲಿನ ಹಚ್ಚೆಗಳು ಮತ್ತಿತರ ಗುರುತಿನ ಚಿಹ್ನೆಗಳನ್ನು ಕೂಡಾ ಸಂಬಂಧಪಟ್ಟ ಅಧಿಕಾರಿಗಳು ದಾಖಲಿಸಿಕೊಂಡಿದ್ದಾರೆ. ಮೃತರ ಛಾಯಾಚಿತ್ರಗಳನ್ನು ಕೂಡಾ ಆಸುಪಾಸಿನ ಪ್ರದೇಶಗಳಲ್ಲಿ ಪ್ರದರ್ಶಿಸಲಾಗಿದೆ. ಮಹಾರಾಜಗಂಜ್‌ನಲ್ಲಿ ಮೂವರು ಮಹಿಳೆಯರು ಹಾಗೂ ಓರ್ವ ಯುವಕ ಸೇರಿದಂತೆ ನಾಲ್ವರ ಮೃತದೇಹಗಳು ಪತ್ತೆಯಾಗಿವೆ ಎಂದು ಅಪರ ಜಿಲ್ಲಾ ಮ್ಯಾಜಿಸ್ಟ್ರೇಟ್ ಪ್ರಶಾಂತ್ ಕುಮಾರ್ ಭಾರ್ತಿ ಅವರು ತಿಳಿಸಿದ್ದಾರೆ. 72 ತಾಸುಗಳೊಳಗೆ ವಾರಸುದಾರರ್ಯಾರಾದರೂ ಬಾರದೆ ಇದ್ದಲ್ಲಿ ಸರಕಾರಿ ಮಾರ್ಗದರ್ಶಿ ಸೂತ್ರಗಳಿಗೆ ಅನುಗುಣವಾಗಿ ಮುಂದಿನ ಕ್ರಮವನ್ನು ಕೈಗೊಳ್ಳಲಾಗುವುದೆಂದು ಅವರು ಹೇಳಿದ್ದಾರೆ.
ಕುಶಿನಗರ ಜಿಲ್ಲೆಯಲ್ಲಿ ಗಂಡಕಿ ನದಿಯಿಂದ ಮೂವರು ಪುರುಷರು ಹಾಗೂ ಆರು ಮಹಿಳೆಯರು ಸೇರಿದಂತೆ ಒಟ್ಟು ಆರು ಮೃತದೇಹಗಳನ್ನು ತೆಗೆಯಲಾಗಿದೆಯೆಂದು ವಿಪತ್ತು ನಿರ್ವಹಣಾ ತಜ್ಞರು ತಿಳಿಸಿದ್ದಾರೆ.
ನೇಪಾಳ ದಿಢೀರ್ ಪ್ರವಾಹಕಕ್ಕೆ ಬಲಿಯಾದವರ ಮೃತದೇಹಗಳ ಜೊತೆಗೆ ಗಂಡಕಿ ನದಿಯಲ್ಲಿ ವಾಹನಗಳು, ಗೃಹಸಾಮಾಗ್ರಿಗಳು, ಅಡುಗೆ ಅನಿಲಗಳು, ಡ್ರಮ್‌ಗಳು, ಪೀಠೋಪಕರಣಗಳು, ಮರದ ದಿಮ್ಮಿಗಳು ಹಾಗೂ ಕಟ್ಟಡ, ಮನೆಗಳ ಅವಶೇಷಗಳು ಕೂಡಾ ತೇಲಿಬರುತ್ತಿವೆ.
ತೇಲಿಬರುತ್ತಿರುವ ವಸ್ತುಗಳನ್ನು ಹೆಕ್ಕಲು ನದಿನೀರಿಗೆ ಇಳಿಯದಂತೆ ಆಡಳಿತವು ಜನರಿಗೆ ಎಚ್ಚರಿಕೆ ನೀಡಿದೆ. ಒಂದು ವೇಳೆ ಸೊತ್ತುಗಳು ನದಿಯಲ್ಲಿ ತೇಲುತ್ತಿರುವುದು ಕಂಡಲ್ಲಿ, ಆ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಬೇಕೆಂದು ಅದು ಮನವಿ ಮಾಡಿದೆ.